Advertisement

ಮಾವುತರು-ಕಾವಾಡಿಗಳ ಮಕ್ಕಳಿಂದ ನಾಟಕ ಪ್ರದರ್ಶನ

12:13 PM Sep 01, 2017 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ನಡೆಯುವ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಈ ಬಾರಿ ದಸರಾ ಗಜಪಡೆ ಮಾವುತರು ಹಾಗೂ ಕಾವಾಡಿಗಳ ಮಕ್ಕಳು ನಾಟಕ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನೂ ರಂಜಿಸಲಿದ್ದಾರೆ.

Advertisement

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಯೊಂದಿಗೆ ಮಾವುತರು ಮತ್ತು ಕಾವಾಡಿಗಳು ನಗರಕ್ಕಾಗಮಿಸಿದ್ದಾರೆ. ಇವರೊಂದಿಗೆ ವಿವಿಧ ವಯಸ್ಸಿನ 50ಕ್ಕೂ ಹೆಚ್ಚು ಮಕ್ಕಳೂ ನಗರಕ್ಕಾಗಮಿಸಿದ್ದಾರೆ. ಇವರಿಗಾಗಿ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ವಿವಿಧ ಸವಲತ್ತು ಕಲ್ಪಿಸಲಾಗಿದೆ. 

ಟೆಂಟ್‌ ಶಾಲೆ: ದಸರಾ ವೇಳೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಟೆಂಟ್‌ ಶಾಲೆ ಆರಂಭಿಸಲಾಗಿದೆ. ಇದೀಗ ಮೊದಲ ತಂಡದ 15 ಮಕ್ಕಳೊಂದಿಗೆ 2ನೇ ತಂಡದಲ್ಲಿ ಬಂದಿರುವ ಅಂದಾಜು 45ಕ್ಕೂ ಹೆಚ್ಚು ಮಕ್ಕಳು ಟೆಂಟ್‌ ಶಾಲೆ ಅನುಕೂಲ ಪಡೆಯಲಿದ್ದಾರೆ. ಎಂದಿನಂತೆ ಶಿಕ್ಷಕಿ ನೂರ್‌ ಫಾತಿಮಾ ಶಿಕ್ಷಣ ನೀಡುವ ಜವಾಬ್ದಾರಿ ಹೊತ್ತಿದ್ದಾರೆ. ಇವರೊಂದಿಗೆ ಕೆಲವು ಸಂಪನ್ಮೂಲ ವ್ಯಕ್ತಿಗಳೂ ಶಿಕ್ಷಣ ನೀಡಲಿದ್ದಾರೆ. 

ಮಕ್ಕಳಿಗೆ ಆಸಕ್ತಿ ಕಡಿಮೆ: ಟೆಂಟ್‌ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಓದಿನ ಬಗ್ಗೆ ಆಸಕ್ತಿ ಕೊರತೆ ಇದೆ. ಹೀಗಾಗಿ ಇವರನ್ನು ಒಂದೆಡೆ ಸೇರಿಸಿ ಶಿಕ್ಷಣ, ನಾಟಕ ಅಥವಾ ಇನ್ನಿತರ ಚಟುವಟಿಕೆಗಳನ್ನು ನಡೆಸುವುದು ಸವಾಲಿನ ಸಂಗತಿ. ಆದರೆ, 2ನೇ ತಂಡದಲ್ಲಿರುವ ಕೆಲವು ಮಕ್ಕಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯಿಂದ ಭಾಗವಹಿಸುತ್ತಾರೆ.

ಹೀಗಾಗಿ 2 ತಂಡದಲ್ಲಿರುವ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅಗತ್ಯ ತರಬೇತಿ ನೀಡಲು ಶಿಕ್ಷಕರು ತಯಾರಿ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಕಳೆದ ವರ್ಷದ ಮಕ್ಕಳ ದಸರೆಯಲ್ಲಿ ನೃತ್ಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಮಾವುತರು, ಕಾವಾಡಿಗಳ ಮಕ್ಕಳು ಈ ಬಾರಿ ನಾಟಕ ಪ್ರದರ್ಶನ ನೀಡಲು ಅಣಿಯಾಗುತ್ತಿದ್ದಾರೆ.

Advertisement

ಮಾವುತರು, ಕಾವಾಡಿಗಳ ಮಕ್ಕಳು ನಾಟಕ ಪ್ರದರ್ಶನ ನೀಡಲು ಈ ಬಾರಿ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಕೆಲವು ನಾಟಕಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಮಕ್ಕಳು ಆಸಕ್ತಿವಹಿಸಿ ಕಲಿತರೆ ಮಕ್ಕಳ ದಸರಾ ವೇದಿಕೆಯಲ್ಲಿ ಉತ್ತಮ ನಾಟಕವೊಂದನ್ನು ಪ್ರದರ್ಶಿಸಲಿದ್ದಾರೆ.
-ಡಿ.ನಾಗೇಂದ್ರ, ಸಂಗೀತ ಹಾಗೂ ನಾಟಕ ಶಿಕ್ಷಕ

ಕಿಂದರಿಜೋಗಿ, ಭಗತ್‌ಸಿಂಗ್‌ ಹಾಸ್ಯ ನಾಟಕ
ಇದೇ ಮೊದಲ ಬಾರಿಗೆ ನಾಟಕ ಕಲಿಸುವ ಚಿಂತನೆಯನ್ನು ಶಿಕ್ಷಣ ಇಲಾಖೆ ಹೊಂದಿದೆ. ಇದಕ್ಕಾಗಿ ಶಿಕ್ಷಕರನ್ನೂ ನಿಯೋಜಿಸಿದೆ. ಮಕ್ಕಳಿಗಾಗಿ ಆಯ್ದ ನಾಟಕಗಳನ್ನೂ ಸಿದ್ಧಮಾಡಿಕೊಂಡಿದ್ದಾರೆ. ಈ ಪೈಕಿ ಕುವೆಂಪು ಅವರ ಕಿಂದರಜೋಗಿ, ಮೋಡಣ್ಣನ ತಮ್ಮ, ಭಗತ್‌ಸಿಂಗ್‌ ಹಾಗೂ ಟ್ರಾಫಿಕಾಯಣ ಎಂಬ ಹಾಸ್ಯ ನಾಟಕವೊಂದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ ಮಕ್ಕಳ ಅನುಕೂಲಕ್ಕಾಗಿ ಧ್ವನಿ ತರಬೇತಿ, ಉಚ್ಛಾರಣೆ ತರಬೇತಿಯನ್ನು ನೀಡಿ ಅಭ್ಯಾಸ ಮಾಡಿಸಲಾಗುತ್ತಿದೆ.

* ಸಿ.ದಿನೇಶ್‌

Advertisement

Udayavani is now on Telegram. Click here to join our channel and stay updated with the latest news.

Next