Advertisement

ರಂಗ ತರಬೇತಿ ಪಡೆದ ಮಕ್ಕಳಿಂದ ನಾಟಕ ಪ್ರದರ್ಶನ

08:55 PM Jul 21, 2019 | Lakshmi GovindaRaj |

ಹುಣಸೂರು: ಈ ಹಳ್ಳಿಯ ಶಾಲಾ ಮಕ್ಕಳು ಮೈಸೂರಿನ ರಂಗಾಯಣದಲ್ಲಿ ರಂಗ ತರಬೇತಿ ಪಡೆದಿರುವ ಅಗ್ರಹಾರ ಸುಭಾಷ್‌ ನಿರ್ದೇಶನದಲ್ಲಿ ತಿಂಗಳಲ್ಲೇ ನಾಟಕ ಕಲಿತು, ತಮ್ಮೂರಿನ ಜನ, ಪೋಷಕರ ಮುಂದೆ ಮನೋಜ್ಞವಾಗಿ ಅಭಿನಯಿಸಿ, ಶಹಬಾಷ್‌ ಎನಿಸಿಕೊಂಡರು.

Advertisement

ತಾಲೂಕಿನ ಗಾವಡಗೆರೆ ಹೋಬಳಿಯ ಅಗ್ರಹಾರ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ಬದಲಾವಣೆ ಜಗದ ನಿಯಮ ಎಂಬ ಮಕ್ಕಳ ನಾಟಕವನ್ನು ಅಭಿನಯದ ಮೂಲಕ ಪ್ರಸ್ತುತ ಸಮಾಜದ ಪರಿಸ್ಥಿತಿಯನ್ನು ಪ್ರತಿಬಿಂಬಿಸಿದರು.

ಮೈಸೂರಿನ ರಂಗಾಯಣದಲ್ಲಿ ರಂಗ ತರಬೇತಿ ಪಡೆದಿರುವ ಅಗ್ರಹಾರದ ಸುಭಾಷ್‌, ಹುಣಸೂರಿನ ಅರ್ಜುನ್‌ ಮತ್ತಿತರ ರಂಗ ಕಲಾವಿದರು ಹುಟ್ಟು ಹಾಕಿರುವ ರಂಗ ಗರಡಿ ಟ್ರಸ್ಟ್‌ನಿಂದ ಅಗ್ರಹಾರದಲ್ಲಿ ಅದೇ ಗ್ರಾಮದ ಶಾಲಾ ಮಕ್ಕಳಿಗೆ ತರಬೇತಿ ನೀಡಿ, ಪ್ರಥಮ ಪ್ರಯೋಗವನ್ನು ಅಲ್ಲಿಯೇ ಪ್ರದರ್ಶಿಸಿದ್ದು ವಿಶೇಷ.

ಗಮನ ಸೆಳೆದ ಮಕ್ಕಳು: ರಂಗ ಕಲಾವಿದ ಅರ್ಜುನ್‌ ರಚನೆಯ, ಅಗ್ರಹಾರ ಸುಭಾಷ್‌ ನಿರ್ದೇಶನದ ಬದಲಾವಣೆ ಜಗದ ನಿಯಮ ನಾಟಕವನ್ನು ಕಲಿಸಿ, ಅವರ ಪೋಷಕರು, ಸಾರ್ವಜನಿಕರ ಮುಂದೆ ಪ್ರದರ್ಶಿಸಿದರು. ನಾಟಕದಲ್ಲಿ ಹಿಂದಿನ ಕೂಡು ಕುಟುಂಬ, ಗುರು ಹಿರಿಯರಿಗೆ ಗೌರವ, ಅತ್ತೆ-ಸೊಸೆ ಬಾಂದವ್ಯ,

ಇಂದಿನ ಮೊಬೈಲ್‌ ಹಾವಳಿ, ಕುಟುಂಬದ ಒಡಕು ಹೀಗೆ ಅನೇಕ ಬದಲಾವಣೆಗಳ ಬಗ್ಗೆ ಮಕ್ಕಳು ಅಭಿನಯಿಸಿ, ಪ್ರಸ್ತುತ ಪರಿಸ್ಥಿತಿಯನ್ನು ಅನಾವರಣಗೊಳಿಸಿ ಗಮನ ಸೆಳೆದರು. ನಾಟಕದ ಕೆಲ ಸನ್ನಿವೇಶಗಳು ಹಲವರ ಮನೆಯಲ್ಲಿ ನಡೆಯುತ್ತಿರುವ ಕುರಿತು ಸಭಿಕರ ಮಧ್ಯೆ ಚರ್ಚಾಗ್ರಾಸವಾಗಿತ್ತು.

Advertisement

ನಾಟಕದೊಳಗೊಂದು ಕಂಸಾಳೆ ರಂಗು: ಇದೇ ಶಾಲೆ 30ಕ್ಕೂ ಹೆಚ್ಚು ಮಕ್ಕಳು ರಂಗಕಲಾವಿದ ಅರ್ಜುನ್‌ ಮಾರ್ಗದರ್ಶನದಲ್ಲಿ ಕಂಸಾಳೆ ಕಲಿತು, ವೇದಿಕೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನೀಡಿದ ಬಗೆಬಗೆಯ ಕಂಸಾಳೆ ಪ್ರದರ್ಶನವಂತೂ ಎಲ್ಲರನ್ನು ಅಶ್ಚರ್ಯಚಕಿತರನ್ನಾಗಿಸಿತ್ತು.

ರಂಗಭೂಮಿ ಉಳಿಸಿ-ಬೆಳೆಸಿ: ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ರಂಗಾಯಣ ಕಲಾವಿದ ರಾಮನಾಥ್‌ ಮಾತನಾಡಿ, ಇಂದು ರಂಗಭೂಮಿಯನ್ನು ಉಳಿಸಿ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಮೈಸೂರಿನ ರಂಗಾಯಣ ಪ್ರತಿವರ್ಷ 20 ಮಕ್ಕಳಿಗೆ ರಂಗ ತರಬೇತಿ ನೀಡಲಾಗುವುದು. ರಂಗಾಯಣದಲ್ಲಿ ತರಬೇತಿ ಪಡೆದು ಹುಟ್ಟೂರಿನ ಶಾಲಾ ಮಕ್ಕಳಿಗೆ ನಾಟಕ ಕಲಿಸಿ, ಪ್ರದರ್ಶಿಸಿರುವ ಅಗ್ರಹಾರ ಸುಭಾಷ್‌ ಮತ್ತು ತಂಡಕ್ಕೆ ಪ್ರಶಂಸಿಸಿದರು.

ಡಿ.ಡಿ.ಅರಸ್‌ ಕಾಲೇಜಿನ ಪ್ರಾಧ್ಯಾಪಕಿ ಡಾ.ತ್ರಿವೇಣಿ, ಸಿಆರ್‌ಪಿ ಡಾ.ಮಾಧುಪ್ರಸಾದ್‌, ಶಾಲಾ ಮುಖ್ಯಶಿಕ್ಷಕ ಸುರೇಶ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಯ. ಗರಡಿಶಿವಣ್ಣ, ಮುಖಂಡರಾದ ಮುತ್ತುರಾಜ್‌, ಗೋವಿಂದಯ್ಯ ಮತ್ತಿತರಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ನಾಟಕ ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next