ಚಿಕ್ಕೋಡಿ: ಕೋವಿಡ್ 19 ಭೀತಿಯಿಂದ ಗಡಿ ಭಾಗದ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಜೀವನಾಡಿ ಕೃಷ್ಣಾ ನದಿ ನೀರು ಖಾಲಿಯಾಗುತ್ತಿರುವುದು ಜನರಲ್ಲಿ ಹೊಸ ಆತಂಕ ಮೂಡಿಸಿದೆ. ಶೀಘ್ರ ಮಹಾರಾಷ್ಟ್ರದಿಂದ ನಾಲ್ಕು ಟಿಎಂಸಿ ನೀರು ಹರಿಸಿ ಬೇಸಿಗೆಯಲ್ಲಿ ಜನರ ದಾಹ ತೀರಿಸಬೇಕೆನ್ನುವ ಒತ್ತಾಯ ಕೇಳಿ ಬರಲಾಂಭಿಸಿದೆ.
ಕಳೆದ ವರ್ಷ ಏಪ್ರೀಲ್ ತಿಂಗಳಲ್ಲಿ ಕೃಷ್ಣಾ ನದಿ ಬತ್ತಿ ಬರಿದಾಗಿ ಬೆಳಗಾವಿ, ಬಾಗಲಕೋಟ ಹಾಗೂ ವಿಜಯಪೂರ ಜಿಲ್ಲೆಯ ಜನ, ಜಾನುವಾರುಗಳು ಕುಡಿಯಲು ನೀರು ಇಲ್ಲದೆ ಎರಡು ತಿಂಗಳು ಸಂಕಷ್ಟ ಎದುರಿಸಿದರು. ಈಗ ಮತ್ತೆ ಬೇಸಿಗೆ ಆರಂಭವಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಗಣನೀಯ ಇಳಿಕೆ ಕಂಡಿದೆ. ಹೀಗಾಗಿ ಕಳೆದ ವರ್ಷದ ಪರಿಸ್ಥಿತಿ ಮತ್ತೆ ಎದುರಾಗುವ ಆತಂಕ ಜನರಲ್ಲಿ ಮೂಡಿದೆ.
ನೀರಿನ ಪ್ರಮಾಣ ಕುಸಿಯುತ್ತಿರುವುದರಿಂದ ರೈತರು ಬೆಳೆದ ಬೆಳೆಗಳು ಕಮರಿ ಹೋಗುತ್ತಿದ್ದು, ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಕೃಷ್ಣಾ ನದಿ ನೀರಿನ ಮೇಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಾಗವಾಡ, ರಾಯಬಾಗ ಮತ್ತು ಅಥಣಿ ತಾಲೂಕು ಅವಲಂಬಿತವಾಗಿವೆ. ನೆರೆಯ ಜಿಲ್ಲೆಗಳಾದ ಬಾಗಲಕೋಟ ಮತ್ತು ವಿಜಯಪೂರ ಜಿಲ್ಲೆಯ ಜನರು ಸಹ ನದಿ ನೀರನ್ನು ಅವಲಂಬಿಸಿದ್ದಾರೆ. ನದಿಯಲ್ಲಿ ಇರುವ ನೀರು ಹದಿನೈದು ದಿನಗಳವರಿಗೆ ಸಾಕಾಗಬಹುದು, ಅಷ್ಟರಲ್ಲಿ ಮಹಾರಾಷ್ಟ್ರದಿಂದ ದಿಂದ ನೀರು ಬಂದರೆ ಅನುಕೂಲ, ಇಲ್ಲವಾದರೇ ಮತ್ತೆ ಹನಿ ನೀರಿಗಾಗಿ ಜನ ಪರದಾಡುವ ಪ್ರಸಂಗ ಎದುರಾಗುವ ಸಂಭವ ಹೆಚ್ಚಿದೆ.
ನಾಲ್ಕು ಟಿಎಂಸಿ ನೀರು ಬಿಡಬೇಕು: ಪ್ರತಿ ವರ್ಷ ಬೇಸಿಗೆಯಲ್ಲಿ ಕೃಷ್ಣಾ ನದಿ ನೀರು ಖಾಲಿಯಾಗುತ್ತದೆ. ರಾಜ್ಯದ ಮೂರು ಜಿಲ್ಲೆಗಳು ನೀರಿಗಾಗಿ ಪರಿತಪಿಸುತ್ತವೆ. ಹೀಗಾಗಿ ಕರ್ನಾಟಕ ಸರ್ಕಾರ ಮತ್ತು ಮಹಾ ಸರ್ಕಾರ ನೀರಿನ ಒಡಂಬಡಿಕೆ ಮಾಡಿಕೊಂಡು ಬೇಸಿಗೆಯಲ್ಲಿ ನಾಲ್ಕು ಟಿಎಂಸಿ ನೀರು ಬಿಡಬೇಕು ಎಂದು ಗಡಿ ಭಾಗದ ರೈತರು ಒತ್ತಾಯಿಸಿದ್ದಾರೆ. ಕಾಳಮ್ಮವಾಡಿ ಜಲಾಶಯದಿಂದ ನೀರು ಹರಿಸಿ: ಗಡಿ ಭಾಗದ ದೂಧಗಂಗಾ ನದಿಯಲ್ಲಿ ಕಳೆದ ಹಲವು ದಿನಗಳಿಂದ ನೀರಿನ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಕಾಳಮ್ಮಾವಾಡಿ ಜಲಾಶಯದಿಂದ ನೀರು ಬಿಡುಗಡೆ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ.
ದೂಧಗಂಗಾ ನದಿಯ ನೀರಿನ ಮೇಲೆನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕಿನ ಸುಮಾರು 50 ಕ್ಕೂ ಹೆಚ್ಚು ಗ್ರಾಮಗಳು ಅವಲಂಬಿಸಿವೆ. ನದಿ ತೀರದ ಗ್ರಾಮಗಳು ಕುಡಿಯುವ ನೀರಿಗೆ ಬಳಸುತ್ತಾರೆ, ಅದಲ್ಲದೆ ಏತ ನೀರಾವರಿ ಯೋಜನೆಗಳು, ಗಂಗಾ ಕಲ್ಯಾಣ ಯೋಜನೆಗಳು, ವೈಯಕ್ತಿಕ ನಿರಾವರಿ ಯೋಜನೆಗಳಿಂದ ರೈತರು ಬಳಕೆ ಮಾಡಿಕೊಳ್ಳುತ್ತಾರೆ.
ಕೃಷ್ಣಾ ನದಿ ನೀರು ಶಾಶ್ವತ ಒಪ್ಪಂದಕ್ಕೆ ಪ್ರಯತ್ನ: ಪ್ರತಿ ಬೇಸಿಗೆಯಲ್ಲಿ ರಾಜ್ಯದ ಗಡಿ ಭಾಗದ ಜನ ನೀರಿನ ಸಮಸ್ಯೆ ಎದುರಿಸುತ್ತಾರೆ. ಹೀಗಾಗಿ ಕೊಯ್ನಾ ಹಾಗೂ ವಿವಿಧ ಡ್ಯಾಂಗಳ ಮೂಲಕ ಬೇಸಿಗೆಯ ಏಪ್ರೀಲ್ ಮತ್ತು ಮೇ ತಿಂಗಳಲ್ಲಿ ನಾಲ್ಕು ಟಿಎಂಸಿ ನೀರು ಹರಿಸಲು ಮಹಾ ಸರ್ಕಾರದ ಜೊತೆ ರಾಜ್ಯ ಸರ್ಕಾರ ಶಾಶ್ವತ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆದಿದೆ. ಅದನ್ನು ಶೀಘ್ರವಾಗಿ ಈಡೇರಿಸಲು ಸಿಎಂ ಹಾಗೂ ನೀರಾವರಿ ಸಚಿವರ ಗಮನಕ್ಕೆ ತಂದು ನೀರು ಹರಿಸಲು ಪ್ರಯತ್ನ ಮಾಡಲಾಗುತ್ತದೆ
.-ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಮುಖ್ಯಸಚೇತಕ, ಕರ್ನಾಟಕ ಸರ್ಕರ
-ಮಹಾದೇವ ಪೂಜೇರಿ