Advertisement

ಫ‌ಲ್ಗುಣಿ ಸೇರುತ್ತಿದೆ ಪಚ್ಚನಾಡಿಯ ಕೊಳಚೆ ನೀರು!

03:15 AM Jun 13, 2018 | Team Udayavani |

ಮಹಾನಗರ: ಪಚ್ಚನಾಡಿಯಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಒಳಚರಂಡಿ ನೀರು ಶುದ್ಧೀಕರಣ ಘಟಕದಿಂದ ಕೊಳಚೆ ಫ‌ಲ್ಗುಣಿ ನದಿ ಸೇರುತ್ತಿರುವ ಪರಿಣಾಮ ಈಗ ಮಳವೂರು ವೆಂಟೆಡ್‌ ಡ್ಯಾಮ್‌ ನಿಂದ ಸರಬರಾಜು ಆಗುತ್ತಿರುವ ಕುಡಿಯುವ ನೀರು ಉಪಯೋಗಿಸಲಾಗದ ಪರಿಸ್ಥಿತಿಗೆ ತಲುಪಿದ್ದು, ಸ್ಥಳೀಯ ಸುಮಾರು ಒಂಬತ್ತು ಗ್ರಾ.ಪಂ.ಗಳು ಡ್ಯಾಮ್‌ ನೀರು ಪೂರೈಕೆಯನ್ನೇ ಸ್ಥಗಿತಗೊಳಿಸಿದೆ. ಕೆಲವು ದಿನಗಳ ಹಿಂದೆ ನಿರೀಕ್ಷೆಗಿಂತ ಹೆಚ್ಚಿನ ಮಳೆ ಸುರಿದ ಪರಿಣಾಮ ಡ್ರೈನೇಜ್‌ ಶುದ್ಧೀಕರಣ ಘಟಕದಿಂದ ಓವರ್‌ ಫ್ಲೋ ಆಗಿ ಕೊಳಚೆ ನೀರು ನದಿ ಸೇರಿದ್ದು, ಘಟಕದಿಂದ ಯಾವುದೇ ನೀರನ್ನು ನದಿಗೆ ಬಿಟ್ಟಿಲ್ಲ. ಮನಪಾ ವ್ಯಾಪ್ತಿಯಲ್ಲಿ ಮಳೆ ನೀರನ್ನೂ ಒಳಚರಂಡಿಗೆ ಬಿಟ್ಟಿರುವ ಪರಿಣಾಮ ಪ್ರಸ್ತುತ ನಿರೀಕ್ಷೆಗಿಂತ ಹೆಚ್ಚಿನ ನೀರು ಒಳಚರಂಡಿಯಲ್ಲಿ ಹರಿಯುವುದರಿಂದ ಈ ತೊಂದರೆ ಉಂಟಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

Advertisement

ಮನಪಾ ವ್ಯಾಪ್ತಿಯ ಕೊಳಚೆನೀರು ಪಚ್ಚನಾಡಿ ಘಟಕದಲ್ಲಿ ಶುದ್ಧೀಕರಣಗೊಂಡು ಬಳಿಕ ನೀರನ್ನು ಪಿಲಿಕುಳ ನಿಸರ್ಗಧಾಮಕ್ಕೆ ಕಳುಹಿಸಲಾಗುತ್ತದೆ. ಒಟ್ಟು ಮೂರು ಹಂತಗಳಲ್ಲಿ ನೀರು ಶುದ್ಧೀಕರಣದ ಪ್ರಕ್ರಿಯೆ ನಡೆಯುತ್ತಿದ್ದು, ಒಂದು ಹಾಗೂ 2ನೇ ಘಟಕಗಳು ಪಚ್ಚನಾಡಿಯಲ್ಲಿದ್ದರೆ, 3ನೇ ಘಟಕ ಪಿಲಿಕುಳದಲ್ಲಿದೆ. ಕೊಳಚೆ ನೀರು ನದಿ ಸೇರುತ್ತಿರುವ ಕುರಿತು ಸ್ಥಳೀಯ ಗ್ರಾ.ಪಂ.ಗಳು ಸಂಬಂಧಪಟ್ಟವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್‌, ಮನಪಾ ಕಮೀಷನರ್‌ ಮೊಹಮ್ಮದ್‌ ನಝೀರ್‌ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೈಜ ಆರೋಪವೇನು?
ಪಾಲಿಕೆಯು ಡ್ರೈನೇಜ್‌ ನೀರನ್ನು ಶುದ್ಧೀಕರಿಸಿ ಪಿಲಿಕುಳಕ್ಕೆ ನೀಡುತ್ತಿದ್ದು, ಮಳೆಗಾಲದಲ್ಲಿ ಪಿಲಿಕುಳಕ್ಕೆ ನೀರು ಬೇಡ ಎಂಬ ಕಾರಣಕ್ಕೆ ನೇರವಾಗಿ ಕೊಳಚೆ ನೀರನ್ನು ತೋಡಿಗೆ ಬಿಡಲಾಗುತ್ತದೆ ಎಂಬುದು ಮೂಡುಶೆಡ್ಡೆ ಗ್ರಾಮಸ್ಥರ ಆರೋಪವಾಗಿದೆ. ಪ್ರತಿವರ್ಷ ಮಳೆಗಾಲ ಇದೇ ರೀತಿ ಕೊಳಚೆ ನೀರನ್ನು ನದಿಗೆ ಬಿಡಲಾಗುತ್ತದೆ. ಕಳೆದ ಬೇಸಗೆಯಿಂದ ಮಳವೂರು ಡ್ಯಾಮ್‌ ನಿಂದ ಕುಡಿಯುವ ನೀರನ್ನು ಉಪಯೋಗಿಸಲಾಗುತ್ತಿದ್ದು, ಕೊಳಚೆ ನೀರು ನದಿಗೆ ಬಿಡುವ ವಿಚಾರ ಬೆಳಕಿಗೆ ಬಂದಿದೆ.

ಒಂದನೇ ಹಂತದ ಶುದ್ಧೀಕರಣದ ಬಳಿಕ ನೇರವಾಗಿ ತೋಡಿನ ಮೂಲಕ ನದಿಗೆ ಬಿಡುತ್ತಾರೆ. ಕೆಲವೊಂದು ಸಂದರ್ಭದಲ್ಲಿ 2ನೇ ಹಂತದಲ್ಲಿ ತೋಡಿಗೆ ಬಿಡಲಾಗುತ್ತದೆ. ಪ್ರಸ್ತುತ ಕೆಲವು ದಿನಗಳಿಂದ ನದಿ ನೀರು ದುರ್ನಾತ ಬೀರುತ್ತಿದ್ದು, ಹೀಗಾಗಿ ಡ್ಯಾಮ್‌ ನಿಂದ ಕುಡಿಯುವ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದೇವೆ. ಕೊಳಚೆ ನೀರಿನ ಕಾರಣದಿಂದಲೇ ಹಿಂದೆ ಬಾವಿಯೊಂದನ್ನೂ ಮುಚ್ಚಲಾಗಿತ್ತು ಎಂದು ಮೂಡುಶೆಡ್ಡೆ ಗ್ರಾ.ಪಂ.ನವರು ತಿಳಿಸಿದ್ದಾರೆ.

ಬೇಸಗೆಯಲ್ಲೂ ಕಲುಷಿತ ನೀರು ?
ಬೇಸಗೆಯಲ್ಲೂ ಇದೇ ರೀತಿ ಕೊಳಚೆ ನೀರನ್ನು ತೋಡಿಗೆ ಬಿಡಲಾಗುತ್ತದೆ. ಆದರೆ ಆ ಸಂದರ್ಭದಲ್ಲಿ ಭೂಮಿ ಒಣಗಿದ್ದು, ಆವಿಯಾಗಿ ನದಿವರೆಗೆ ನೀರು ತಲುಪುವುದಿಲ್ಲ. ಆದರೆ ಮಳೆಗಾಲದಲ್ಲಿ ಮಳೆ ನೀರಿನ ಜತೆ ಸೇರಿ ನದಿಯನ್ನು ಸೇರುತ್ತಿದೆ. ಕೆಲವು ದಿನಗಳ ಹಿಂದೆ ಸ್ಥಳೀಯ ಕೃಷಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ನಮ್ಮ ಗ್ರಾ.ಪಂ.ಗೆ ಬೇಸಗೆಯಲ್ಲಿ ಕುಡಿಯುವ ನೀರಿನ ಅವಶ್ಯಕತೆ ಇರುವುದಿಲ್ಲ. ಆದರೆ ಬೇಸಗೆಯಲ್ಲಿ ನೀರು ಅಗತ್ಯವಾಗಿ ಬೇಕಾಗುತ್ತದೆ ಎಂದು ಮೂಡುಶೆಡ್ಡೆ ಗ್ರಾ.ಪಂ.ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಹೇಳುತ್ತಾರೆ.

Advertisement

ನಿರೀಕ್ಷೆಗೆ ಮೀರಿದ ನೀರು
ಪಚ್ಚನಾಡಿ ಘಟಕದಿಂದ ಯಾವುದೇ ರೀತಿಯ ನೀರನ್ನು ತೋಡಿಗೆ ಬಿಟ್ಟಿಲ್ಲ. ಆದರೆ ಬಹುತೇಕ ಪ್ರದೇಶಗಳಲ್ಲಿ ಮಳೆನೀರನ್ನೂ ಮ್ಯಾನ್‌ ಹೋಲ್‌ ಗ‌ಳಿಗೆ ಬಿಡಲಾಗುತ್ತದೆ. ಹೀಗಾಗಿ ಕೊಳಚೆ ನೀರಿನ ಜತೆಗೆ ಮಳೆ ನೀರು ಕೂಡ ಸೇರಿ ನಿರೀಕ್ಷೆಗಿಂದ ಹೆಚ್ಚಿನ ನೀರು ಘಟಕಕ್ಕೆ ಬಂದ ಹಿನ್ನೆಲೆಯಲ್ಲಿ ಓವರ್‌ ಪ್ಲೋ ಆಗಿ ತೋಡು ಸೇರಿದೆ ಎಂದು ಪಾಲಿಕೆ ಎಂಜಿನಿಯರ್‌ರೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next