Advertisement

ಕಬಿನಿ ಜಲಾಶಯದ ಒಡಲು ಬರಿದು

11:15 PM Jun 25, 2019 | Lakshmi GovindaRaj |

ಮೈಸೂರು: ರಾಜ್ಯದಲ್ಲೇ ಮೊದಲು ಭರ್ತಿಯಾಗುವ ಹೆಗ್ಗಳಿಕೆ ಹೊಂದಿರುವ ಕಬಿನಿ ಜಲಾಶಯದ ಒಡಲು ಬರಿದಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ನೆರೆಯ ಕೇರಳ ರಾಜ್ಯದ ವೈನಾಡು ಪ್ರದೇಶ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಮಳೆಯಾದರೆ ಎಚ್‌.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿ ಕಬಿನಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಗರಿಷ್ಠ 2284.00 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಕಬಿನಿ ಜಲಾಶಯ ಬಹು ಬೇಗ ಮೈದುಂಬಿಕೊಳ್ಳಲಿದೆ.

ಆದರೆ, ಈ ವರ್ಷ ಜೂನ್‌ ತಿಂಗಳಾಂತ್ಯವಾಗುತ್ತಾ ಬಂದರೂ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದೆ. ರಾಜಧಾನಿ ಬೆಂಗಳೂರು ಮತ್ತು ಮೈಸೂರು ನಗರಗಳ ಜನತೆಗೆ ಕುಡಿಯುವ ನೀರಿನ ಪ್ರಮುಖ ಆಧಾರದ ಜೊತೆಗೆ ಎಚ್‌.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ ತಾಲೂಕುಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು,

ಕೃಷಿ ಭೂಮಿಗೆ ನೀರುಣಿಸಿ ತಿ.ನರಸೀಪುರದ ಸಂಗಮದಲ್ಲಿ ಕಾವೇರಿಯನ್ನು ಕೂಡಿಕೊಂಡು ಮುಂದೆ ಹರಿಯುವ ಕಬಿನಿ ನದಿಯಲ್ಲಿ ನೀರಿದ್ದರೆ ಸರ್ಕಾರಕ್ಕೂ ತಲೆನೋವು ಕಡಿಮೆ. ತಮಿಳುನಾಡಿಗೆ ನೀರು ಬಿಡಬೇಕಾದಾಗಲೆಲ್ಲಾ ಸರ್ಕಾರ ಆಶ್ರಯಿಸುವುದು ಕಬಿನಿ ಜಲಾಶಯವನ್ನೇ. 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹಣಾ ಸಾಮರ್ಥ್ಯದ ಕಬಿನಿ ಜಲಾಶಯದ ಲೈವ್‌ ಸ್ಟೋರೇಜ್‌ ಮಟ್ಟ 15.67 ಟಿಎಂಸಿ.

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 13.61 ಟಿಎಂಸಿ ನೀರು ಸಂಗ್ರಹವಿತ್ತು. ಆದರೆ, ಈ ವರ್ಷ ಕೇವಲ 2.34 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯಕ್ಕೆ 1410 ಕ್ಯೂಸೆಕ್‌ ಮಾತ್ರ ಒಳ ಹರಿವು ಬರುತ್ತಿದ್ದು, 600 ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ.

Advertisement

ಕಳೆದ ವರ್ಷ ಆಗಸ್ಟ್‌ನಲ್ಲಿ ಸುರಿದ ಮಹಾ ಮಳೆಗೆ ಕಬಿನಿ ಜಲಾಶಯ ಮುಂಗಾರು ಹಂಗಾಮಿನಲ್ಲಿ ಎರಡು ಬಾರಿ ಭರ್ತಿಯಾಗಿದ್ದು ಮಾತ್ರವಲ್ಲ, ಭಾರೀ ಪ್ರಮಾಣದಲ್ಲಿ ಒಳ ಹರಿವು ಬರುತ್ತಿದ್ದುದರಿಂದ ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನಾಲ್ಕು ಕ್ರಸ್ಟ್‌ ಗೇಟ್‌ಗಳ ಮೂಲಕವು ಇತಿಹಾಸದಲ್ಲೇ ಮೊದಲ ಬಾರಿಗೆ

80 ಸಾವಿರದಿಂದ 1 ಲಕ್ಷ ಕ್ಯೂಸೆಕ್‌ವರೆಗೆ ನೀರು ಹರಿ ಬಿಟ್ಟಿದ್ದರಿಂದ ನದಿ ಪಾತ್ರದ ಜಮೀನು ಮುಳುಗಡೆಯಾಗಿ, ಹಲವು ಗ್ರಾಮಗಳಿಗೂ ನೀರು ನುಗ್ಗಿ ಹಾನಿಯಾಗಿತ್ತು. ಅಲ್ಲದೆ, ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಹೆದ್ದಾರಿ ಸಂಚಾರವನ್ನು ವಾರಗಳ ಕಾಲ ಬಂದ್‌ ಮಾಡಲಾಗಿತ್ತು.

ಆದರೆ, ಈ ವರ್ಷ ಜೂನ್‌ ಕಳೆದರೂ ಮುಂಗಾರು ಮಳೆ ಕಾಲಿಡದೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕುಸಿತವಾಗಿರುವುದರಿಂದ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದ್ದು, ಕೃಷಿಗಿರಲಿ ಬೆಂಗಳೂರು ಮತ್ತು ಮೈಸೂರು ನಗರಗಳ ಜನತೆಯ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಲಕ್ಷಣಗಳು ಕಾಣಿಸುತ್ತಿವೆ.

ಮೋಡ ಕವಿದ ವಾತಾವರಣವಿದ್ದು, ಮಳೆ ಬಾರದಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ಒಳ ಹರಿವು ಬರುತ್ತಿಲ್ಲ. ಮಳೆಯಾದರೆ ಬೇಗ ತುಂಬಿಕೊಳ್ಳುತ್ತೆ. ಜಲಾಶಯದಲ್ಲಿ ಲೈವ್‌ ಸ್ಟೋರೇಜ್‌ ಇರುವುದರಿಂದ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ.
-ಮಾಳಗಾವಿ, ಸಹಾಯಕ ಇಂಜಿನಿಯರ್‌, ಕಬಿನಿ ಜಲಾಶಯ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next