Advertisement

ಎರಡು ತಿಂಗಳಲ್ಲಿ ಎಚ್‌.ಎನ್‌.ವ್ಯಾಲಿ ನೀರು ಹರಿಸಿ

09:52 PM Aug 18, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲೆಯ 44 ಕೆರೆಗಳಿಗೆ ನೀರು ತುಂಬಿಸುವ ಅಂತರ್ಜಲ ವೃದ್ಧಿಸುವ ಮಹತ್ವಕಾಂಕ್ಷಿ ಹೆಬ್ಬಾಳ-ನಾಗವಾರ ತ್ಯಾಜ್ಯ ನೀರು ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸುವ ನೀರಾವರಿ ಯೋಜನೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಅನರ್ಹ ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

Advertisement

ಎರಡು ತಿಂಗಳ ಸಮಯಾವಕಾಶ: ಬೆಂಗಳೂರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಕುರಿತು ಚರ್ಚೆ ನಡೆಸಿದ ಅವರು, ಈಗಾಗಲೇ ಎಚ್‌.ಎನ್‌. ವ್ಯಾಲಿ ನೀರು ಬಾಗಲೂರು ಕೆರೆಗೆ ಹರಿದಿದ್ದು, ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ಹರಿಯಲು ಇನ್ನೂ ಎರಡು ತಿಂಗಳ ಸಮಯಾವಕಾಶ ಬೇಕಿದೆ ಎಂದರು.

44 ಕೆರೆಗಳಿಗೆ ನೀರು: ಹೆಬ್ಬಾಳ-ನಾಗವಾರ ಯೋಜನೆಯಡಿ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ಜಿಲ್ಲೆಗಳಲ್ಲಿ ಒಟ್ಟು 65 ಕೆರೆಗಳಿಗೆ ನೀರು ಹರಿಯಲಿದ್ದು, ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳಿಗೆ ನೀರು ಹರಿಯಲಿದೆ. ಅದರಲ್ಲಿ ಚಿಕ್ಕಬಳ್ಳಾಪುರಕ್ಕೆ ಒಟ್ಟು 24 ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.

ಮಹತ್ವಕಾಂಕ್ಷೆ ಯೋಜನೆ: ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾಗಿ ಜನ ಪರದಾಡುತ್ತಿದ್ದಾರೆ. ಆದರೆ ಬಯಲು ಸೀಮೆಯ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬರ ಆವರಿಸಿ ರೈತಾಪಿ ಜನ ಸಂಕಷ್ಟದಲ್ಲಿದ್ದಾರೆ. ಕನಿಷ್ಟ ಜಿಲ್ಲೆಯ ಅಂತರ್ಜಲ ವೃದ್ಧಿಗೊಳಿಸುವ ಮಹತ್ವಕಾಂಕ್ಷೆ ಹೊತ್ತು ಎಚ್‌.ಎನ್‌ ನೀರಾವರಿ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು.

ಗುತ್ತಿಗೆ ಕರಾರಿನನ್ವಯದಂತೆ ಇನ್ನೆರಡು ತಿಂಗಳಲ್ಲಿ ನೀರು ಹರಿಸುವಂತೆ ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗಳಿಗೆ ಸಭೆಯಲ್ಲಿ ಸೂಚಿಸಿ ಶುದ್ಧೀಕರಿಸಿದ ನೀರಿನ ಗುಣಮಟ್ಟ ಹಾಗೂ ಮಾಪನ ಸೂಚ್ಯಂಕಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಿ, ಎಲ್ಲಾ ಕಾಲಗಳಲ್ಲೂ ನಿಗದಿತ ರೀತಿಯಲ್ಲಿ ಕಾಪಾಡುವಂತೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ತಿಳಿಸಿದರು.

Advertisement

ಕಾಮಗಾರಿ ಪ್ರಗತಿ ಪರಿಶೀಲನೆ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಬ್ಬಾಳ ನಾಗವಾರ ನೀರಾವರಿ ಯೋಜನೆ ಅನುಷ್ಠಾನದ ಸದ್ಯದ ಕಾಮಗಾರಿ ಪ್ರಗತಿ, ಬಾಕಿ ಇರುವ ಪೈಪ್‌ಲೈನ್‌, ಪಂಪಿಂಗ್‌ ಸ್ಟೇಷನ್‌ ಮತ್ತಿತರ ತಾಂತ್ರಿಕ ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಡಾ.ಕೆ.ಸುಧಾಕರ್‌ ಮಾಹಿತಿ ಪಡೆದುಕೊಂಡರು. ಯಾವುದೇ ಕಾರಣಕ್ಕೂ ವಿಳಂಬ ಆಗಬಾರದು. ಇನ್ನೂ ಎರಡು ತಿಂಗಳೊಳಗೆ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆಗಳಿಗೆ ನೀರು ಹರಿಸಬೇಕು.

ಅದಕ್ಕಾಗಿ ಜಿಲ್ಲಾಡಳಿತ ಯೋಜನೆಯಡಿ ನೀರು ಹರಿಯುವ ಕೆರೆಗಳನ್ನು ಈಗಿನಿಂದಲೇ ಒತ್ತುವರಿ ಸೇರಿದಂತೆ ಹೂಳು ಎತ್ತುವ ಕೆಲಸವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕೆಂದರು. ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ, ಚಿಕ್ಕಬಳ್ಳಾಪುರದ ಜಿಲ್ಲೆಯ ಅಪರ ಜಿಲ್ಲಾಕಾರಿ ಆರತಿ ಸೇರಿದಂತೆ ಸಭೆಯಲ್ಲಿ ಬೆಂಗಳೂರು ಜಲಮಂಡಳಿ ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಹಾಗೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕೆ.ಸಿ.ವ್ಯಾಲಿ ಗುಣಮಟ್ಟದ ಬಗ್ಗೆ ಚರ್ಚೆ: ಸಭೆಯಲ್ಲಿ ಕೋಲಾರ ಜಿಲ್ಲೆಗೆ ರೂಪಿಸಿ ಅನುಷ್ಠಾನಗೊಳಿಸಿರುವ ಕೆ.ಸಿ. ವ್ಯಾಲಿ ಯೋಜನೆಯ ನೀರಿನ ಗುಣಮಟ್ಟದ ಬಗ್ಗೆ ಕೋಲಾರ ಜಿಲ್ಲಾಧಿಕಾರಿ ಜೆ.ಮಂಜುನಾಥ ಅವರೊಂದಿಗೆ ಡಾ.ಕೆ.ಸುಧಾಕರ್‌ ಚರ್ಚೆ ನಡೆಸಿದರು. ನೀರಿನ ಗುಣಮಟ್ಟದ ಬಗ್ಗೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಕಾಲಕಾಲಕ್ಕೆ ನಿಗಾ ವಹಿಸಬೇಕೆಂದ ಅವರು, ನೀರು ಕೊಡುವುದು ಮುಖ್ಯವಲ್ಲ. ಅದರ ಗುಣಮಟ್ಟದ ಬಗ್ಗೆ ಕೂಡ ಎಚ್ಚರಿಕೆ ವಹಿಸಬೇಕೆಂದರು. ಅಲ್ಲದೇ ಕೆ.ಸಿ ವ್ಯಾಲಿ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next