Advertisement
ಶಿಕ್ಷಣ, ಕೃಷಿ, ಬ್ಯಾಂಕಿಂಗ್, ಮೀನುಗಾರಿಕೆ, ಹೆಂಚು ಉದ್ಯಮ, ಸಣ್ಣ-ಮಧ್ಯಮ ಕೈಗಾರಿಕಾ ವಲಯ, ಬೀಡಿ ಉದ್ಯೋಗ ಸಹಿತ ಕರಾವಳಿಯ ಎಲ್ಲ ವಿಚಾರಗಳ ಆಮೂಲಾಗ್ರ ಅಧ್ಯಯನ ಈ ಕೇಂದ್ರದ ಆಶಯ. ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ಅವರ ಮುತುವರ್ಜಿಯಲ್ಲಿ ಈ ಬಗ್ಗೆ ಪ್ರಸ್ತಾವನೆ ಸಿದ್ಧಗೊಳ್ಳುತ್ತಿದ್ದು, ಶೀಘ್ರ ಸರಕಾರದ ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ.
Related Articles
Advertisement
ಡಾ| ವಿ.ಎಸ್. ಆಚಾರ್ಯ ಅವರು ಕರಾವಳಿಯ ಅಭಿವೃದ್ಧಿಗೆ ವೇಗ ನೀಡುವಲ್ಲಿ ಶ್ರಮಿಸಿದ್ದಾರೆ. ಹೀಗಾಗಿ ಅವರ ಸ್ಮರಣಾರ್ಥ ಕೇಂದ್ರ ಸ್ಥಾಪನೆಗೆ ವಿ.ವಿ. ಯೋಚಿಸಿದೆ. ಸರಕಾರ ಒಪ್ಪಿಗೆ ನೀಡಿದರೆ ಮೊದಲಿಗೆ ಮಂಗಳೂರು ವಿ.ವಿ.ಯಲ್ಲಿ ಕೇಂದ್ರದ ಕಚೇರಿ ಇರಲಿದೆ. ಬಳಿಕ ಉಡುಪಿ ಸಮೀಪದ ಬೆಳಪು ಸೆಂಟರ್‌ನ ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಉದ್ದೇಶವಿದೆ.
ಯಾವೆಲ್ಲ ಅಧ್ಯಯನ? :
ಕರಾವಳಿಯಲ್ಲಿ ಕಡಲ್ಕೊರತೆ ಸಮಸ್ಯೆ ಬಹುವಾಗಿದ್ದು, ಇದರ ನಿಯಂತ್ರಣಕ್ಕೆ ಬೇರೆ ಬೇರೆ ಕ್ರಮಗಳು ಜಾರಿಯಲ್ಲಿದ್ದರೂ ಪೂರ್ಣ ಯಶಸ್ವಿಯಾಗಿಲ್ಲ. ಅದರ ಬದಲಾಗಿ ಪ್ರಾಕೃತಿಕ ತಡೆ ಕ್ರಮಗಳ ಬಗ್ಗೆ ಸಾಗರ ಭೂ ವಿಜ್ಞಾನ ವಿಭಾಗವು ಅಧ್ಯಯನ ಮಾಡಬಹುದು. ಮೀನಿನ ಹೊಸ ಪ್ರಭೇದಗಳಿಂದ ಆಗಬಹುದಾದ ಲಾಭಗಳ ಬಗ್ಗೆ ಬೆಳಕು ಚೆಲ್ಲುವ ಅಧ್ಯಯನ ನಡೆಸಬಹುದು. ಕರಾವಳಿಯ ಹವಾಮಾನ ಬದಲಾವಣೆ, ರಿಮೋಟ್ ಸೆನ್ಸಿಂಗ್, ನ್ಯಾನೋ ಟೆಕ್ನಾಲಜಿ ಮತ್ತಿತರ ವಿಚಾರಗಳ ಬಗ್ಗೆ ಅಧ್ಯಯನ ಮಾಡಿ ಸರಕಾರಕ್ಕೆ ಮಾರ್ಗದರ್ಶನ ನೀಡಬಹುದಾಗಿದೆ.
ಪ್ರಸ್ತುತ ಕರಾವಳಿಯ ಸಮಗ್ರ ಅಭಿವೃದ್ಧಿಯ ನೆಲೆಯಲ್ಲಿ ಖಾಸಗಿ ವಿ.ವಿ.ಗಳ ಸಹಿತ ಎಲ್ಲೂ ಅಧ್ಯಯನ ನಡೆಯುತ್ತಿಲ್ಲ. ಕೆಲವು ವಿಷಯಗಳ ಬಗ್ಗೆ ಬಿಡಿಬಿಡಿಯಾಗಿ ಅಧ್ಯಯನ ನಡೆಯುತ್ತಿವೆ, ಸಮಗ್ರವಾಗಿಲ್ಲ. ಈ ಅಧ್ಯಯನಗಳಿಂದ ಜನರಿಗೆ ನೇರವಾಗಿ ಪ್ರಯೋಜನವಾಗದೆ ಇದ್ದರೂ ಕೇಂದ್ರದ ಮೂಲಕ ನಡೆಯುವ ಅಧ್ಯಯನದ ವರದಿಗಳು ಸರಕಾರಕ್ಕೆ ಸಲ್ಲಿಕೆಯಾಗುತ್ತವೆ. ಅದನ್ನು ಆಧರಿಸಿ ಸರಕಾರ ಕ್ರಮ ಕೈಗೊಳ್ಳಬಹುದಾಗಿದೆ.
ಕರಾವಳಿಯ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ ಇರಿಸಿಕೊಂಡು ಡಾ| ವಿ.ಎಸ್. ಆಚಾರ್ಯ ಅಧ್ಯಯನ ಕೇಂದ್ರ ಆರಂಭಕ್ಕೆ ವಿ.ವಿ. ಚಿಂತನೆ ನಡೆಸಿದ್ದು, ಪ್ರಸ್ತಾವನೆ ಸಿದ್ಧಗೊಳ್ಳುತ್ತಿದೆ. ಕೆಲವೇ ದಿನಗಳಲ್ಲಿ ಸರಕಾರಕ್ಕೆ ಸಲ್ಲಿಸಿ ಅನುಮತಿ ಪಡೆಯಲಾಗುವುದು. ಕರಾವಳಿಯ ಜನಸಾಮಾನ್ಯರಿಗೆ ಸಂಬಂಧಪಡುವ ಎಲ್ಲ ವಿಚಾರಗಳ ಅಧ್ಯಯನ ಮತ್ತು ಸಂಶೋಧನೆಗಾಗಿ ಈ ಕೇಂದ್ರವನ್ನು ಬಳಸಿಕೊಳ್ಳಲಾಗುವುದು. – ಪ್ರೊ| ಪಿ.ಎಸ್. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿ.ವಿ.
-ದಿನೇಶ್ ಇರಾ