Advertisement

ಡಾ|ವಿ.ಎಸ್‌. ಆಚಾರ್ಯ: ಸಭ್ಯತೆಯ ಸಾಕಾರಮೂರ್ತಿ

02:31 AM Jul 06, 2021 | Team Udayavani |

ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ “ಮುಗ್ಧ ರಾಜಕಾರಣಿ’ ಎಂಬ ಪದ ಬಳಕೆ ವಿರೋಧಾಭಾಸ ಎನಿಸಬಹುದು. ಒಬ್ಬ ರಾಜಕಾರಣಿ ಮುಗ್ಧರಾಗಿರಲು ಸಾಧ್ಯವೇ ಇಲ್ಲ, ಮುಗ್ಧರು ರಾಜಕಾರಣಿ ಆಗಲು ಸಾಧ್ಯವಿಲ್ಲ ಎಂಬ ಭಾವನೆ ಜನರಲ್ಲಿ ಬೇರೂರಿದೆ. ಆದರೆ ಅಂತಹ ಮುಗ್ಧ ರಾಜಕಾರಣಿಗಳೇ ಇಲ್ಲವೇ, ಇರಲಿಲ್ಲವೇ ಎಂಬ ಪ್ರಶ್ನೆಯೂ ಅಷ್ಟೇ ಸಹಜ. ಅಂತಹ ಮೇರು ವ್ಯಕ್ತಿತ್ವದ ಮುಗ್ಧ ರಾಜಕಾರಣಿಗಳು ಕೆಲವೇ ವರ್ಷಗಳ ಹಿಂದೆ ನಮ್ಮೊಟ್ಟಿಗೇ ಇದ್ದರು. ಅವರು ಬೇರೆ ಯಾರೂ ಅಲ್ಲ ಡಾ| ವೇದವ್ಯಾಸ ಶ್ರೀನಿವಾಸ ಆಚಾರ್ಯ. ಅರ್ಥಾತ್‌ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ಮತ್ತು ಭಾರತೀಯ ಜನ ಸಂಘ ಹಾಗೂ ಭಾರತೀಯ ಜನತಾ ಪಾರ್ಟಿಯ ಮೇರು ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಡಾ| ವಿ.ಎಸ್‌. ಆಚಾರ್ಯ.

Advertisement

ಆಚಾರ್ಯರು ಪವಿತ್ರ ಪುಣ್ಯಭೂಮಿ ಶ್ರೀಕೃಷ್ಣನ ಆಡುಂಬೋಲ ಉಡುಪಿ ಯಲ್ಲಿ ಹುಟ್ಟಿದ್ದು 1940ರ ಜುಲೈ 6ರಂದು. ಜೀವನದುದ್ದಕ್ಕೂ ಸತ್ಯ, ನಿಷ್ಠೆ, ಧರ್ಮ ಕ್ಕಾಗಿ ದುಡಿದ ಅವರು ಮಡಿಯುವ ತನಕ ನಿಷ್ಠೆ, ಧ್ಯೇಯ, ಮುಗ್ಧತೆ, ಪಾರದರ್ಶಕತೆ ಮತ್ತು ಕರ್ತವ್ಯ ಪರತೆ ಹಾಗೂ ಪಾವಿತ್ರ್ಯತೆಯನ್ನು ಉಳಿಸಿಕೊಂಡವರು. ಉಡುಪಿಯ ಅಷ್ಟಮಠಗಳ ಯಾವುದಾದರೂ ಒಂದು ಮಠಕ್ಕೆ ಶ್ರೀಗಳಾಗಲು ಸೂಕ್ತ ವ್ಯಕ್ತಿಯೆಂದರೆ ಡಾ|ವಿ.ಎಸ್‌. ಆಚಾರ್ಯ ಅವರು ಎಂದು ಅವರ ಒಡನಾಡಿಗಳು ಹೇಳುತ್ತಿದ್ದುದುಂಟು. ಅಂತಹ ಅಪೂರ್ವ ವಿದ್ವತ್ತು, ಆಚಾರ, ವಿಚಾರ, ಆಚಾರ್ಯರದ್ದಾಗಿತ್ತು.

ನನ್ನ ಮತ್ತು ಡಾ| ಆಚಾರ್ಯ ಅವರ ಪರಿಚಯ ಸುದೀರ್ಘ‌ವಾಗಿತ್ತು. 1985ರಿಂದಲೂ ನಾನವರನ್ನು ಬಲ್ಲೆ. ಅವರ ಆದರ್ಶಗಳಿಗೆ ಮಾರು ಹೋದವರಲ್ಲಿ ನಾನೂ ಒಬ್ಬ. ನಾನು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ 1985ರಲ್ಲಿ ಪೂರ್ಣಕಾಲಿಕ ಕಾರ್ಯಕರ್ತನಾಗಿದ್ದಾಗ ಮೊದಲಿಗೆ ಈ ಮೇರು ವ್ಯಕ್ತಿತ್ವದ ಡಾ| ವಿ.ಎಸ್‌. ಆಚಾರ್ಯರನ್ನು ಖುದ್ದು ಭೇಟಿ ಮಾಡುವ ಅವಕಾಶ ಲಭಿಸಿತ್ತು. ಸದಾ ಹಸನ್ಮುಖೀ, ಸದಾ ಕ್ರಿಯಾಶೀಲರು ಮತ್ತು ಚೈತನ್ಯಶೀಲ ಬುದ್ಧಿಜೀವಿ. ಮಿಗಿಲಾಗಿ ಉತ್ಸಾಹದ ಚಿಲುಮೆಯಂತಿದ್ದರು ನಮ್ಮ ಆಚಾರ್ಯ. ಮೃದುಭಾಷಿ, ಸರಳ ಜೀವಿ, ಊಹಾತೀತರಾಗಿದ್ದ ಅವರು, ವಿನಯಶೀಲತೆಗೆ ಮತ್ತೂಂದು ಹೆಸರಾಗಿದ್ದರು; ಅವರು ಎಂದೂ ಅಬ್ಬರ ಮಾಡಿದವರಲ್ಲ. ಎಲೆ ಮರೆಯ ಕಾಯಿಯಂತೆ ಜನ ಸೇವೆ ಮಾಡುತ್ತಿದ್ದವರು.

ಜನ ನಾಯಕರಾಗಿ ಅವರು ಅಕಳಂಕವೀರರಾಗಿದ್ದರು. ಯಾರೂ ಅವರ ಕಾರ್ಯವಿಧಾನದ ಬಗ್ಗೆ ಬೊಟ್ಟು ಮಾಡಿ ತೋರಿಸಿದ್ದಿಲ್ಲ. ಅಷ್ಟು ಅಚ್ಚುಕಟ್ಟಾದ, ಪಾರದರ್ಶಕ ಕಾರ್ಯವೈಖರಿ ಅವರದು. ಡಾ| ವಿ.ಎಸ್‌. ಆಚಾರ್ಯರು ಮೊದಲಿಗೆ ಭಾರತೀಯ ಜನ ಸಂಘವನ್ನು, ಅನಂತರ ಬಿಜೆಪಿಯನ್ನು ರಾಜ್ಯದಲ್ಲಿ ಬಲಿಷ್ಠವಾಗಿ ಕಟ್ಟುವಲ್ಲಿ ಬಹುವಾಗಿ ಶ್ರಮಿಸಿದವರು. ತಾಯಿ ಹೃದಯದ ಆಚಾರ್ಯರು ತಮ್ಮ ವೃತ್ತಿ ಬದುಕಿನಲ್ಲೂ ವೈದ್ಯರಾಗಿ ಬಡಜನರ ಕಷ್ಟಕ್ಕೆ ಮಿಡಿಯುತ್ತಿದ್ದರು. ಸಮಾಜದ ಕೆಳ ಹಂತದ ಮತ್ತು ದುರ್ಬಲ ವರ್ಗದ ರೋಗಿಗಳ ಕಣ್ಮಣಿಯಾಗಿದ್ದರು. ಅವರೆಲ್ಲರೂ ಆಚಾರ್ಯರನ್ನು ತಮ್ಮ ಭಾಗದ ದೇವರೆಂದೇ ಕಾಣುತ್ತಿದ್ದರು.
ಆಚಾರ್ಯರು ಹಲವು ಪ್ರಥಮಗಳ ಗರಿಯನ್ನು ತಮ್ಮ ಮಕುಟಕ್ಕೆ ಧರಿಸಿದವರು. ಅವರು ಉಡುಪಿ ಪುರಸಭೆಯ ಅತ್ಯಂತ ಕಿರಿಯ ಅಧ್ಯಕ್ಷರಾಗಿ, ದೇಶದಲ್ಲೇ ಒಂದು ದಾಖಲೆ ಬರೆದರು. ಆಚಾರ್ಯರ ಕಾರ್ಯಕಾಲದಲ್ಲಿ ಉಡುಪಿ ಪುರಸಭೆ ಅತ್ಯುತ್ತಮ ಆಡಳಿತಕ್ಕಾಗಿ ರಾಷ್ಟ್ರಪತಿಯವರ ಪ್ರಶಸ್ತಿಗೂ ಭಾಜನವಾಗಿತ್ತು. ಮನೆಗಳಿಗೆ ಕೊಳವೆಯ ಮೂಲಕ ನೀರು ಪೂರೈಸಿದ ಪ್ರಥಮ ಪುರಸಭೆ ಉಡುಪಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಡಾ| ಆಚಾರ್ಯರ ದೂರದರ್ಷಿತ್ವವೇ ಕಾರಣ. ತಲೆಯ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯ ರದ್ಧತಿಗೆ ಹೋರಾಡಿದ ಆಚಾರ್ಯರ ಮಾನವೀಯತೆ ಆದರ್ಶಪ್ರಾಯ.

ಡಂಕೆಲ್‌ ಕರಡು ಎಂದೇ ಜನಪ್ರಿಯವಾಗಿರುವ ಗ್ಯಾಟ್‌ (ವ್ಯಾಪಾರ ಮತ್ತು ಸುಂಕಗಳ ಮೇಲಿನ ಸಾಮಾನ್ಯ ಒಪ್ಪಂದ)ಗೆ ಸಂಬಂಧಿಸಿದ ವಿಷಯಗಳಲ್ಲಿ ಕಾರ್ಮಿಕರಿಗೆ ತರಬೇತಿ ನೀಡಲು ನಗರಾಭಿವೃದ್ಧಿ ವ್ಯವಹಾರಗಳು ಮತ್ತು ಆರ್ಥಿಕ ವಿಷಯಗಳಲ್ಲಿ ತಜ್ಞರಾಗಿದ್ದ ಡಾ| ಆಚಾರ್ಯ ರನ್ನು ಬಿಜೆಪಿಯಿಂದ ಆಯ್ಕೆ ಮಾಡಲಾಗಿತ್ತು. ಜನ ಸೇವೆಯಿಂದಲೇ ಜನರಿಗೆ ಹತ್ತಿರವಾಗಿದ್ದ ಡಾ| ಆಚಾರ್ಯರು, 1983ರಲ್ಲಿ ತಮ್ಮ ತವರೂರಾದ ಉಡುಪಿಯಿಂದಲೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಜಯಸಾಧಿಸಿ ವಿಧಾನಸಭೆ ಪ್ರವೇಶಿಸಿದರು. ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳ ಕುರಿತು ವಿಧಾನಸಭೆಯಲ್ಲಿ ಅವರು ಮಾಡುತ್ತಿದ್ದ ಭಾಷಣಗಳು ಅವರ ಅಪಾರ ಅನುಭವ ಮತ್ತು ಸಾರ್ವಜನಿಕ ಜೀವನದಲ್ಲಿ ಅವರಿಗಿದ್ದ ಆಳವಾದ ಜ್ಞಾನವನ್ನು ಪ್ರತಿಬಿಂಬಿಸುತ್ತವೆ.

Advertisement

ಡಾ| ಆಚಾರ್ಯ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸಮಸ್ಯೆಗಳ ಆಳವಾದ ಅಧ್ಯಯನದಿಂದ ಅವರು ಪ್ರತಿಪಾದಿಸುತ್ತಿದ್ದ “ಬೌದ್ಧಿಕವಾಗಿ ಉತ್ತೇಜಿಸುವ’ ಭಾಷಣಗಳ ಮೂಲಕ ಅವರು ಚಿಂತಕರ ಚಾವಡಿಯ ಚರ್ಚೆಯನ್ನು ಶ್ರೀಮಂತಗೊಳಿಸುತ್ತಿದ್ದರು.

2008ರಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಮೊದಲ ಬಾರಿಗೆ ಸ್ವತಂತ್ರವಾಗಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗ ಡಾ| ವಿ.ಎಸ್‌. ಆಚಾರ್ಯ ಮಹತ್ತರವಾದ ಗೃಹ ಖಾತೆಯ ಜವಾಬ್ದಾರಿ ಪಡೆದರು. “ಸಂಪೂರ್ಣ ವೃತ್ತಿಪರತೆ’ಯಲ್ಲಿ ನಂಬಿಕೆ ಇಟ್ಟಿದ್ದ ಡಾ| ಆಚಾರ್ಯ, ಗೃಹ ಇಲಾಖೆಯ ದೈನಂದಿನ ಕಾರ್ಯಚಟುವಟಿಕೆಯಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಅವರು ಸ್ವಯಂ ಅಧ್ಯಯನಿಗಳಾಗಿದ್ದ ಕಾರಣ ಯಾವುದೇ ಅಧಿಕಾರಿಯ ಮೇಲೆ ಅವಲಂಬಿತರೂ ಆಗಿರಲಿಲ್ಲ.
ಡಾ| ವಿ.ಎಸ್‌. ಆಚಾರ್ಯ ಅವರಿಗೆ ಸದಾ ಬೆಂಬಲವಾಗಿ ನಿಂತಿದ್ದ ಅವರ ಪತ್ನಿ ಶ್ರೀಮತಿ ಶಾಂತಾ ಆಚಾರ್ಯ ಅವರೂ ಸಹ ಹಲವು ಸಾಮಾಜಿಕ- ಸಾಂಸ್ಕೃತಿಕ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಹಲವು ಶಿಕ್ಷಣ ಸಂಸ್ಥೆಗಳಿಗೆ ಗೌರವ ಮಾರ್ಗದರ್ಶಿಯಾಗಿದ್ದಾರೆ. ಅವರು ಉಚಿತ ಸಾಂಸ್ಕೃತಿಕ- ಆಧ್ಯಾತ್ಮಿಕ ಚಿಂತನಾ ತರಗತಿಗಳನ್ನೂ ನಡೆಸುತ್ತಾರೆ, ಅಲ್ಲಿ ನೈತಿಕ ಮತ್ತು ನೈತಿಕ ಮೌಲ್ಯಗಳನ್ನು ಚಿಕ್ಕ ಮಕ್ಕಳಿಗೆ ಕಲಿಸ ಲಾಗುತ್ತಿದೆ. ಆ ಮೂಲಕ ಭಾರತೀಯ ಸಂಸ್ಕೃತಿ ಪರಂಪರೆ ಯನ್ನು ಮುಂದಿನ ಪೀಳಿಗೆಗೂ ತಿಳಿಯಪಡಿಸ ಲಾಗುತ್ತಿದೆ. ಆಚಾರ್ಯ ಅವರ ಮಕ್ಕಳು ರಾಜಕೀಯದಿಂದ ದೂರವೇ ಉಳಿದು, ತಮ್ಮ ವೃತ್ತಿಯಲ್ಲಿ ನಿರತರಾಗಿದ್ದಾರೆ. ಇದು ಆಚಾರ್ಯರ ಸ್ವಾರ್ಥ ರಹಿತ ಬದುಕಿಗೆ ಹಿಡಿದ ಕನ್ನಡಿಯಾಗಿದೆ.

ನಾನೂ ಕೂಡ ಅವರು ಸಚಿವರಾಗಿದ್ದ ಸಂದರ್ಭದಲ್ಲಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವನಾಗಿ ಸಂಪುಟದಲ್ಲಿ ಅವರೊಟ್ಟಿಗೆ ಕಾರ್ಯ ನಿರ್ವಹಿಸಿದ್ದು ನನ್ನ ಸೌಭಾಗ್ಯವೆಂದೇ ಪರಿಭಾವಿಸುತ್ತೇನೆ. ನನಗೆ ಅವರು ಹಲವು ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ತಮ್ಮ ವಿವೇಚನಾಯುಕ್ತ, ನೇರ, ನಿಷ್ಠುರ ಸಲಹೆ ನೀಡಲು ಎಂದೂ ಹಿಂಜರಿಯುತ್ತಿರಲಿಲ್ಲ. ಸಂಪುಟದಲ್ಲಿ ಅವರು ಹಿರಿಯ ಸಹೋದರ ಅಥವಾ ಕುಟುಂಬದ ಹಿರಿಯ ಸದಸ್ಯರಂತೆ ಇದ್ದರು. ಅವರ ಸೌಹಾರ್ದಯುತ ಸ್ವಭಾವ ದಿಂದ ಅವರು ಸಂಪುಟದ ಪ್ರತಿಯೊಬ್ಬ ಸದಸ್ಯರ ಪ್ರೀತಿ, ವಾತ್ಸಲ್ಯ ಮತ್ತು ಮೆಚ್ಚುಗೆಗೆ ಪಾತ್ರರಾಗಿದ್ದರು.
ಇಂದು ಡಾ| ವೇದವ್ಯಾಸ ಶ್ರೀನಿವಾಸ ಆಚಾರ್ಯರು ನಮ್ಮೊಂದಿಗಿಲ್ಲ. ಆದರೆ ಅವರ ಕಾರ್ಯ, ಕೊಡುಗೆ ಸದಾ ಸ್ಮರಣೆಯಲ್ಲಿರುತ್ತದೆ. ಅವರ ಬದುಕೇ ಒಂದು ಆದರ್ಶ. ಅನುಕರಣೀಯ. ಅವರ 81ನೇ ಜನ್ಮ ದಿನದ ಸಂದರ್ಭದಲ್ಲಿ, ನಾನು ಆ ಮೇರು ನಾಯಕನಿಗೆ ಈ ಅಕ್ಷರ ಶ್ರದ್ಧಾಂಜಲಿ ಸಲ್ಲಿಸುತ್ತೇನೆ.

– ವಿಶ್ವೇಶ್ವರ ಹೆಗಡೆ ಕಾಗೇರಿ

Advertisement

Udayavani is now on Telegram. Click here to join our channel and stay updated with the latest news.

Next