ಉಡುಪಿ: ಡಾ| ಟಿಎಂಎ ಪೈ ಅವರು 1949ರಲ್ಲಿ ಕಂಡಿದ್ದ ಕನಸು ಇಂದು ಸಾಕಾರಗೊಂಡಿದೆ. ಜನತಾ ಸೇವೆಯೆ ಜನಾರ್ದನ ಸೇವೆಯ ತತ್ವದೊಂದಿಗೆ ಅವರು ಆರಂಭಿಸಿದ ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ ಸಂಸ್ಥೆಗಳು ಅಂದು ಜನರ ಬದುಕಿಗೆ ಆಧಾರವಾಗಿದ್ದರೆ ಇಂದು ಭವಿಷ್ಯವಾಗಿ ಮುಂದುವರಿದಿದೆ ಎಂದು ಎಂಜಿಎಂ ಕಾಲೇಜಿನ ಹಳೆ ವಿದ್ಯಾರ್ಥಿ, ಜಮ್ಮು ಕಾಶ್ಮೀರ ಇಂಧನ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಶ್ ಪ್ರಸಾದ್ ಹೇಳಿದರು.
ಎಂಜಿಎಂ ಕಾಲೇಜು ಅಮೃತ ಮಹೋತ್ಸವ ಪ್ರಯುಕ್ತ ಹಳೆ ವಿದ್ಯಾರ್ಥಿ ಸಂಘ ಶನಿವಾರ ಮುದ್ದಣ ಮಂಟಪದಲ್ಲಿ ಆಯೋಜಿಸಿದ “ಅಮೃತ ಸಂಗಮ’ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ಕ್ಷೇತ್ರದಲ್ಲಿ ಡಾ| ಟಿಎಂಎ ಪೈ ಅವರಿಗಿದ್ದ ದೂರದೃಷ್ಟಿ ಅನನ್ಯವಾಗಿದ್ದು, ಅಂದಿನ ಕಾಲಘಟ್ಟದಲ್ಲಿ ಎಂಜಿಎಂ ಕಾಲೇಜಿನಂತಹ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿ ಸರ್ವರಿಗೂ ಉತ್ತಮ, ಗುಣಮಟ್ಟದ ಶಿಕ್ಷಣದ ಸೌಲಭ್ಯ ಕಲ್ಪಿಸಿದರು. ಅವರ ನಡೆ, ವ್ಯಕ್ತಿತ್ವ ಎಲ್ಲರಿಗೂ ಮಾದರಿ. 75 ವರ್ಷಗಳಿಂದ ಈ ಕಾಲೇಜಿನಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ. ಅಮೃತ ಸಂಗಮ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸಿದ್ದಾರೆ ಎಂದರು.
ಮಾಹೆ ಕುಲಪತಿ ಲೆ| ಜ| ಡಾ| ಎಂ. ಡಿ. ವೆಂಕಟೇಶ್ ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆ ಇರಲಿ. ಆ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಅಲ್ಲಿನ ಹಳೆ ವಿದ್ಯಾರ್ಥಿಗಳು ಆಧಾರಸ್ತಂಭವಾಗಿರುತ್ತಾರೆ. ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿರುತ್ತದೆ. ಎಂಜಿಎಂ ಕಾಲೇಜು ಗುಣಮಟ್ಟದ ಶಿಕ್ಷಣಕ್ಕೆ ಹೆಸರು ಪಡೆದಿದೆ. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ ಎಂದರು.
ಕಾಲೇಜು ವಿಶ್ವಸ್ತ ಮಂಡಳಿಯ ಅಧ್ಯಕ್ಷ ಟಿ. ಸತೀಶ್ ಪೈ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಪ್ರೊ| ಶ್ರೀಶ ಆಚಾರ್ಯ, ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಸಂಜಯ ಹೆಗ್ಡೆ, ಮಾಹೆ ಸಿಒಒ ಡಾ| ಆನಂದ ವೇಣುಗೋಪಾಲ್, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಕಾರ್ಯದರ್ಶಿ ಬಿ.ಪಿ. ವರದರಾಯ ಪೈ, ಹಳೆ ವಿದ್ಯಾರ್ಥಿ ಸಂಘದ ಖಜಾಂಚಿ ದೀಪಾಲಿ ಕಾಮತ್, ಎಂಜಿಎಂ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ, ಪಿಯು ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು. 1949ರಿಂದ 1970ರ ಅವಧಿಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ನಿವೃತ್ತ ಪ್ರಾಧ್ಯಾಪಕರು, ನಿವೃತ್ತ ಶಿಕ್ಷಕೇತರ ಸಿಬಂದಿಗೆ ಸಮ್ಮಾನಿಸಿ ಗೌರವಿಸಲಾಯಿತು.
ಅಮೃತ ಸಂಗಮ ಪ್ರಧಾನ ಸಂಘಟಕ ಪ್ರೊ| ಎಂ.ಎಲ್. ಸಾಮಗ ಸ್ವಾಗತಿಸಿ, ಪ್ರಸ್ತಾವನೆಗೈದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ| ಎಂ. ವಿಶ್ವನಾಥ ಪೈ ವಂದಿಸಿ, ಡಾ| ವಿಜಯೇಂದ್ರ ವಸಂತ್, ರೋಹಿಣಿ ನಾಯಕ್ ನಿರೂಪಿಸಿದರು.