ಸಾರಥಿಯೊಬ್ಬ ಶಂಖ ಊದಿದ್ದು ಮಹಾಭಾರತ ಯುದ್ಧದಲ್ಲಿ ಮಾತ್ರ. ಈ ಸಾರಥಿ ಶ್ರೀಕೃಷ್ಣ. ಅರ್ಜುನನಿಗೇ ಪೂರ್ಣ ಬಿಟ್ಟುಕೊಟ್ಟಿದ್ದರೆ ಏನೇನೋ ಆಗುತ್ತಿತ್ತು. ಮೊದಲ ಅಧ್ಯಾಯವನ್ನು ವಿಷಾದ ಯೋಗ ಎಂದು ಹೇಳಿದ್ದಾರೆ. ಎಲ್ಲ ಪರಿವರ್ತನೆಯೂ ವಿಷಾದದಿಂದಲೇ ಆಗುವುದು. ಪುರಂದರ ದಾಸರಾದಿಯಾಗಿ ಸಾಧಕರೆಲ್ಲರಿಗೂ ವಿಷಾದ ಅನುಭವ ಮೊದಲು ಆಗಿದೆ. ಇದನ್ನೇ ಟರ್ನಿಂಗ್ ಪಾಯಿಂಟ್ ಎನ್ನುತ್ತೇವೆ. ಆತನಿಗೆ ಇಷ್ಟು ವಿಷಾದದ ದೃಷ್ಟಿ ಮೂಡದೆ ಇದ್ದರೆ ಕೃಷ್ಣ ಗೀತೆಯನ್ನು ಹೇಳುವ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ. ಅರ್ಜುನನಿಗೆ ಪಶ್ಚಾತ್ತಾಪ ಬಂದದ್ದರಿಂದಲೇ ಮುಂದಿನ ಬೆಳವಣಿಗೆಯಾಯಿತು. ಯಾವುದೇ ದುರ್ಘಟನೆಯಾದರೂ ಸಜ್ಜನರು ಅದನ್ನು ಪ್ಲಸ್ ಆಗಿ ಪರಿವರ್ತನೆ ಮಾಡಬಹುದು. ವಿಷಾದವನ್ನೂ ಯೋಗವಾಗಿ ಪರಿವರ್ತಿಸಲಾಗಿದೆ. ಸಾತ್ವಿಕ ಲಕ್ಷಣ ಇಲ್ಲಿ ಕಾಣುತ್ತದೆ. ಮೊದಲು ವಿಷಾದ ಯೋಗ, ಕೊನೆಗೆ ಅಮೃತ ಯೋಗ ಸಿಗುತ್ತದೆ. ಹಿಟ್ಟಿನ ನೀರನ್ನು ಮೊದಲು ಕುಡಿದ ಕಾರಣವೇ ನಿಜವಾದ ಹಾಲಿನ ರುಚಿ ಅಶ್ವತ್ಥಾಮನಿಗೆ ತಿಳಿಯಿತು. ಅಭಾವವಿರುವಾಗ ಮಹತ್ವ ಜಾಸ್ತಿಯಾಗುತ್ತದೆ. ಎಲ್ಲ ದಾರ್ಶನಿಕರು ಎರಡನೆಯ ಅಧ್ಯಾಯದಿಂದಲೇ ವ್ಯಾಖ್ಯಾನ ಮಾಡಿದ್ದು. ಅರ್ಜುನನ ವಿಷಾದ ಯಾರಿಗೂ ಹೊಸತಲ್ಲ. ಜೀವನದಲ್ಲಿ ಪ್ರತಿಯೊಬ್ಬರಿಗೂ ಇಂತಹ ಅನುಭವವಿದ್ದೇ ಇರುತ್ತದೆ. ಆದ್ದರಿಂದಲೇ ಮೊದಲ ಅಧ್ಯಾಯಕ್ಕೆ ವ್ಯಾಖ್ಯಾನವನ್ನು ಯಾರೂ ಬರೆಯಲು ಹೋಗಲಿಲ್ಲ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
– ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ ಗೀತಾ ಮಂದಿರ,ಉಡುಪಿ ಸಂಪರ್ಕ ಸಂಖ್ಯೆ: 8055338811