ಬಳ್ಳಾರಿ: ಬ್ರಿಟಿಷರ ಕಾಲದಲ್ಲಿ ಸೆರೆಮನೆಯಾಗಿದ್ದ ವಿಮ್ಸ್ (ಕಟ್ಟಡಗಳು) ರಾಜ್ಯ ಸೇರಿ ನೆರೆಯ ಆಂಧ್ರದ ಜನರಿಗೂ ಆರೋಗ್ಯ ಸೇವೆ ನೀಡುವಲ್ಲಿ ತನ್ನದೇ ಆದ ಕೊಡುಗೆ ನೀಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ನಗರದ ವಿಮ್ಸ್ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಆನ್ ಲೈನ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 173 ಎಕರೆ ಜಾಗವನ್ನು ಮೀಸಲಿಟ್ಟಿದ್ದ ಬ್ರಿಟಿಷರು ಇಲ್ಲಿ ಸೆರೆಮನೆಯನ್ನು ನಿರ್ಮಿಸಿದ್ದು, ಪ್ರಮುಖರಾದ ವಿ.ವಿ. ಗಿರಿ, ರಾಜಾಜಿ, ನೀಲಂ ಸಂಜೀವರೆಡ್ಡಿ ಸೇರಿ ಹಲವರನ್ನು ಈ ಸೆರೆಮನೆಯಲ್ಲಿ ಇರಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ. 173 ಎಕರೆ ವಿಸ್ತೀರ್ಣದಲ್ಲಿ ತಲೆ ಎತ್ತಿರುವ ವಿಮ್ಸ್ ಸಂಸ್ಥೆ ಆರೋಗ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.
ಕೇವಲ ರಾಜ್ಯದ ಜನರಿಗೆ ಮಾತ್ರವಲ್ಲದೆ, ನೆರೆಯ ಆಂಧ್ರ, ತೆಲಂಗಾಣ ರಾಜ್ಯಗಳ ಜನರಿಗೂ ಚಿಕಿತ್ಸೆ ನೀಡುವ ಸಂಜೀವಿನಿಯಾಗಿದೆ ಎಂದು ವಿವರಿಸಿದರು. ವಿಮ್ಸ್ ಸಂಸ್ಥೆಯನ್ನು ಏಮ್ಸ್ ಮಾದರಿಯನ್ನಾಗಿ ಪರಿವರ್ತಿಸಲು ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಾತಿಯನ್ನು 150ರಿಂದ 250ಕ್ಕೆ ಹೆಚ್ಚಿಸಿ ಉನ್ನತೀಕರಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಪ್ರಸ್ತಾವನೆಗೆ ಸರ್ಕಾರ ಸ್ಪಂದಿಸಿ ವಿಮ್ಸ್ ಸಂಸ್ಥೆಗೆ ಅವಶ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಕಟ್ಟಡ ಕಾಮಗಾರಿಗಳು ಮತ್ತು ಉಪಕರಣಗಳನ್ನು ಅಳವಡಿಸಲು ಅನುಮೋದನೆ ನೀಡಲಾಗಿದೆ ಎಂದರು. ಪ್ರಸ್ತುತ ವಿಮ್ಸ್ ಸಂಸ್ಥೆಯ ಅ ಧೀನದಲ್ಲಿರುವ ಆಸ್ಪತ್ರೆಗೆ ಪ್ರತಿದಿನ 2 ಸಾವಿರ ಹೊರರೋಗಿಗಳು ಮತ್ತು 500ರಿಂದ 800ರವರೆಗೆ ಒಳರೋಗಿಗಳಾಗಿ ಚಿಕಿತ್ಸೆಗೆ ಬರುತ್ತಿರುತ್ತಾರೆ ಹಾಗೂ ಎಂಬಿಬಿಎಸ್ 150, ಬಿಡಿಎಸ್-50, ಪಿಜಿ-120, ಸೂಪರ್ ಸ್ಪೆಶಾಲಿಟಿ-5, ಪ್ಯಾರಾಮೆಡಿಕಲ್-150, ಬಿಎಸ್‌ಸಿ ನರ್ಸಿಂಗ್-100+30 ವಿದ್ಯಾರ್ಥಿಗಳ ಪ್ರವೇಶಾತಿ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ವಿಮ್ಸ್‌ನ ಪ್ರಗತಿ ಪರಿಶೀಲನೆ ಸದಾ ನಡೆಸಲಿ ಎಂದ ಸಚಿವ ಡಾ| ಸುಧಾಕರ್, ಸ್ವಾಯತ್ತ ಸಂಸ್ಥೆಯಾಗಿರುವ ವಿಮ್ಸ್ ನಲ್ಲಿ ಇದುವರೆಗೆ ಜಿಲ್ಲಾಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸುತ್ತಿರಲಿಲ್ಲ. ಅವರನ್ನು ಸಹ ಕೋ-ಚೇರ್ಮನ್ ಆಗಿ ಆದೇಶಿಸಲಾಗಿದ್ದು, ಅವರು ಸಹ ಇನ್ನುಮುಂದೆ ಪ್ರಗತಿ ಪರಿಶೀಲಿಸಲಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಮಾತನಾಡಿ, ವಿಮ್ಸ್‌ನಲ್ಲಿ ಅಪರೇಶನ್ ಥಿಯಟೇರ್‌ಗೆ ಅವಶ್ಯಕತೆ ಇರುವುದರಿಂದ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಕ್ಯಾಬಿನೆಟ್‌ನಲ್ಲಿ ಅನುಮೋದನೆ ದೊರಕಿದೆ. ಇದಕ್ಕೆ ವಿಶೇಷ ಜವಾಬ್ದಾರಿ ವಹಿಸಿ ಮಾಡುವಂತೆ ಅವರು ಸಚಿವ ಡಾ| ಸುಧಾಕರ್ ಅವರಲ್ಲಿ ಇದೇವೇಳೆ ಕೇಳಿಕೊಂಡರು. ಹರಪನಳ್ಳಿ ಶಾಸಕ ಕರುಣಾಕರರೆಡ್ಡಿ ಮಾತನಾಡಿದರು. ವಿಮ್ಸ್ ನಿರ್ದೇಶಕ ಡಾ| ಗಂಗಾಧರಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ, ಬಳ್ಳಾರಿ ಜಿಲ್ಲಾ ಧಿಕಾರಿ ಪವನ್ ಕುಮಾರ್ ಮಾಲಪಾಟಿ, ಅಪರ ಜಿಲ್ಲಾಧಿ ಕಾರಿ ಪಿ.ಎಸ್. ಮಂಜುನಾಥ ಸೇರಿದಂತೆ ಅನೇಕರು ಇದ್ದರು.