ಉಡುಪಿ: ಮಾಹೆ ವಿ.ವಿ.ಯು ಜಿಲ್ಲೆಯ ಸರಕಾರಿ ಅಧಿಕಾರಿಗಳ ಸಂಶೋಧನೆ ತರಬೇತಿ ಮತ್ತು ಕ್ರೀಡಾ ಸಂಸ್ಥೆಗೆ ಸುಮಾರು 2 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಿದ್ದು, ಅದರಂತೆ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಕಾರ್ಯ ಇತ್ತೀಚೆಗೆ ನಡೆಯಿತು.
ಅಜ್ಜರಕಾಡಿನ ನಾಯರ್‌ಕೆರೆ ಸಮೀಪದಲ್ಲಿ ಸರಕಾರಿ ಅಧಿಕಾರಿಗಳ ಸಂಶೋಧನ ತರಬೇತಿ ಹಾಗೂ ಕ್ರೀಡಾ ಸಂಸ್ಥೆಯ ಕಟ್ಟಡ ಶಂಕುಸ್ಥಾಪನೆಯನ್ನು ಆ.26ರಂದು ಎಂಇಎಂಜಿ ಗ್ರೂಪ್ ಅಧ್ಯಕ್ಷರೂ ಆದ ಮಾಹೆ ಟ್ರಸ್ಟ್ ಅಧ್ಯಕ್ಷ ಡಾ| ರಂಜನ್ ಆರ್. ಪೈ ಅವರು ನೆರವೇರಿಸಿದರು.
ಸರಕಾರಿ ಅಧಿಕಾರಿಗಳ ಸಂಶೋಧನ ತರಬೇತಿ ಹಾಗೂ ಕ್ರೀಡಾ ಸಂಸ್ಥೆಯ ನಿರ್ಮಾಣಕ್ಕೆ ಅಗತ್ಯ ಕಟ್ಟಡದ ವ್ಯವಸ್ಥೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಮಾಹೆ ವಿ.ವಿ.ಗೆ ಕೋರಿಕೆ ಬಂದಿದ್ದ ಹಿನ್ನೆಲೆಯಲ್ಲಿ ಡಾ| ರಂಜನ್ ಆರ್. ಪೈ ಅವರು ಅದನ್ನು ಪರಿಶೀಲಿಸಿ ಮಾಹೆ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದರು.
ಸುಮಾರು 18 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಕಟ್ಟಡ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಮಾಹೆ ವಿ.ವಿ. ಭರಿಸಲಿದೆ. ಟೆಂಡರ್ ಪ್ರಕ್ರಿಯೆ ಮೂಲಕವೇ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಮಾಹೆ ವಿ.ವಿ.ಯ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ತಿಳಿಸಿದರು.
ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಯಶ್‌ಪಾಲ್ ಸುವರ್ಣ ವಹಿಸಿದ್ದರು. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್, ಪ್ರಸಾದ್ ನೇತ್ರಾಲಯದ ಅಧ್ಯಕ್ಷ ಡಾ| ಕೃಷ್ಣಪ್ರಸಾದ್ ಕೂಡ್ಲು, ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಕರಾವಳಿ ಕಾವಲು ಪಡೆ ಎಸ್‌ಪಿ ಮಿಥುನ್ ಕುಮಾರ್, ಎಡಿವೈಎಸ್ ಕಾರ್ಯದರ್ಶಿ ಡಾ| ರೋಶನ್ ಕುಮಾರ್ ಶೆಟ್ಟಿ, ಪೌರಾಯುಕ್ತ ರಾಯಪ್ಪ, ಉದ್ಯಮಿಗಳಾದ ನಾಗೇಶ್ ಹೆಗ್ಡೆ, ಮನೋಹರ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಉಪಸ್ಥಿತರಿದ್ದರು.