Advertisement

ಡಾ.ರಾಜ್‌ ನೆನಪು ಮರೆಯಲಾಗದ ನೆನೆಪು

09:35 PM Apr 24, 2019 | Team Udayavani |

ದೇವನಹಳ್ಳಿ: ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್‌ಕುಮಾರ್‌ ತಮ್ಮದೇ ಆದ ಅಭಿನಯದ ಮೂಲಕ ಹೊಸ ದಾಖಲೆ ಬರೆದು ಇತಿಹಾಸ ನಿರ್ಮಿಸಿದ್ದಾರೆ. ಅವರ ಅಭಿನಯಕ್ಕೆ ತಲೆ ಬಾಗದ ವ್ಯಕ್ತಿಯೇ ಇಲ್ಲ ಎಂದು ಪುರಸಭಾ ಮುಖ್ಯಾಧಿಕಾರಿ ಎಚ್‌.ಸಿ.ಹನುಮಂತೇಗೌಡ ಅಭಿಪ್ರಾಯಪಟ್ಟರು.

Advertisement

ನಗರದ ಪುರಸಭಾ ಕಾರ್ಯಾಲಯದ ಆವರಣದಲ್ಲಿ ಪುರಸಭೆಯಿಂದ ಏರ್ಪಡಿಸಿದ್ದ ಪದ್ಮಭೂಷಣ ಡಾ.ರಾಜ್‌ಕುಮಾರ್‌ ಅವರ 91ನೇ ಜನ್ಮ ದಿನಾಚರಣೆಯಲ್ಲಿ ರಾಜ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಕಲಾ ತಪಸ್ವಿ: ಡಾ.ರಾಜ್‌ ಸಮಾಜದ ಒಳತಿಗಾಗಿ ಉತ್ತಮ ಸಂದೇಶ ನೀಡುವ ಸಿನೆಮಾಗಳನ್ನು ಕೊಟ್ಟಿದ್ದಾರೆ. ಸಾಮಾಜಿಕ ಬದಲಾವಣೆ ನಿಟ್ಟಿನಲ್ಲಿ ಜನರ ಮನ ಪರಿವರ್ತನೆಗೆ ಅವರ ಸಿನೆಮಾಗಳು ಸಹಕಾರಿಯಾಗಿವೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ರಾಜ್‌ಕುಮಾರ್‌ ಚಿತ್ರರಂಗದ ಕಲಾ ತಪಸ್ವಿ. ಕಲೆಗಾಗಿ ಹುಟ್ಟಿ, ಕಲೆಗಾಗಿಯೇ ಬದುಕಿದವರು ಎಂದು ಸ್ಮರಿಸಿದರು.

ರಾಜ್‌ ಆದರ್ಶ ಪಾಲಿಸಿ: ಮಾಜಿ ಪುರಸಭಾ ಅಧ್ಯಕ್ಷ ಎಂ.ಮೂರ್ತಿ ಮಾತನಾಡಿ, ಜೀವನದಲ್ಲಿ ಸಿನಿಮಾ ರಂಗವನ್ನು ಅಪ್ಪಿಕೊಂಡು, ಅಭಿಮಾನಿಗಳಲ್ಲಿ ದೇವರನ್ನು ಕಂಡ ಧೀಮಂತ ಕಲಾ ದೈವ ರಾಜ್‌. ಅವರಿಂದ ಕನ್ನಡ ಚಿತ್ರರಂಗ ಮತ್ತು ಕನ್ನಡ ಭಾಷೆ, ಸಂಸ್ಕೃತಿ ಶ್ರೀಮಂತವಾಯಿತು.

ಕನ್ನಡ ಚಿತ್ರರಂಗದಲ್ಲಿ ಉತ್ತುಂಗಕ್ಕೆ ಬೆಳೆದಿದ್ದರು ಸಹ ಸರಳತೆ ಮತ್ತು ಬದ್ಧತೆಯಿಂದಲೇ ಜೀವನ ನಡೆಸಿ ಸಮಾಜದಲ್ಲಿ ಮಾದರಿಯಾಗಿದ್ದಾರೆ. ಅವರ ಎಲ್ಲಾ ಸಿನೆಮಾಗಳನ್ನು ನೋಡಿದ್ದೇನೆ. ಅವರ ಅಪ್ಪಟ ಅಭಿಮಾನಿಯಾಗಿದ್ದೇನೆ.

Advertisement

ರಾಜ್‌ ಅವರ ಆದರ್ಶ, ಸರಳತೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯ ಬೇಕರಿ ಮಂಜುನಾಥ್‌, ಪರಿಸರ ಅಭಿಯಂತರೆ ನೇತ್ರಾವತಿ, ಹಿರಿಯ ಆರೋಗ್ಯ ಸಹಾಯಕಿ ಬಿ.ಜಿ.ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next