ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಸಶಕ್ತೀಕರಣ ಮಾತ್ರವಲ್ಲದೇ ಅಸಾಹಯಕರಿಗೆ “ವಾತ್ಸಲ್ಯ’ ಕಾರ್ಯಕ್ರಮದ ಮೂಲಕ ಮನೆ ನಿರ್ಮಾಣ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸ ಲಾಗುತ್ತಿದೆ ಎಂದು ಮಾತೃಶ್ರೀ ಡಾ| ಹೇಮಾವತಿ ವೀ. ಹೆಗ್ಗಡೆ ತಿಳಿಸಿದರು.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆಕ್ಕೆರೆಯ ನಿವಾಸಿಯಾದ ಶಿವಣ್ಣ ಚಿರುಮನಾಯಿಲ್ ಅವರ ಕುಟುಂಬಕ್ಕೆ “ವಾತ್ಸಲ್ಯ’ ಮನೆ ಹಸ್ತಾಂತರಿಸಿ ಅವರು ಮಾತನಾಡಿದರು.
ವಾತ್ಸಲ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ನೀಡುವುದರ ಜತೆಗೆ ಮೂಲ ಸೌಕರ್ಯಗಳನ್ನು ಕೂಡ ಒದಗಿಸಲಾಗುತ್ತಿದೆ. ಈ ಕಾರ್ಯ ಕ್ರಮದಡಿ ಸುಮಾರು 2 ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ಅನುಷ್ಠಾನಿಸ ಲಾಗಿದೆ. 245 ಮನೆ ರಚನೆ, ದುರಸ್ತಿ ಕಾಮಗಾರಿ ಹಾಗೂ 214 ಶೌಚಾಲಯ, ಸ್ನಾನಗೃಹ ರಚನೆ, ಸೋಲಾರ್, ವಿದ್ಯುತ್ ಅಳವಡಿಕೆ, ಔಷಧ ಪೂರೈಕೆ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗಿದೆ ಎಂದರು.
ವಾತ್ಸಲ್ಯ ಮಿಕ್ಸ್
ವಾತ್ಸಲ್ಯ ಫಲಾನುಭವಿಗಳ ಆರೋಗ್ಯದ ದೃಷ್ಟಿಯಿಂದ ಆಹಾರ ಧಾನ್ಯಗಳನ್ನು ಬಳಸಿಕೊಂಡು ವಾತ್ಸಲ್ಯ ಮಿಕ್ಸ್ ತಯಾರಿಸಿ ಉತ್ತಮ ಆರೋಗ್ಯ ತಜ್ಞರ ಮೂಲಕ ಗುಣಮಟ್ಟ ಪರಿಶೀಲಿಸಿ
ತಯಾರಿಸಲ್ಪಟ್ಟ ವಾತ್ಸಲ್ಯ ಮಿಕ್ಸ್ ಎಂಬ ಪೌಷ್ಟಿಕಾಂಶಯುಕ್ತ ಆಹಾರವನ್ನು 1,327 ಫಲಾನುಭವಿ ಗಳಿಗೆ ವಿತರಿಸ ಲಾಗುತ್ತಿದೆ ಎಂದು ತಿಳಿಸಿದರು.
ಎಸ್‌ಕೆಡಿಆರ್‌ಡಿಪಿ ಕಾರ್ಯನಿರ್ವಾ ಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಡಿ.ಎ. ರೆಹಮಾನ್, ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ತಾ| ಯೋಜನಾಧಿಕಾರಿ ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು.
12,632 ಕುಟುಂಬಕ್ಕೆ ವಾತ್ಸಲ್ಯಕಿಟ್ ವಿತರಣೆ
ಪ್ರಸ್ತುತ ವಾತ್ಸಲ್ಯ ಕಾರ್ಯಕ್ರಮದಲ್ಲಿ ಒಟ್ಟು 60,402 ಕುಟುಂಬಗಳ ಸರ್ವೇಕ್ಷಣೆ ನಡೆಸಿದ್ದು, ಈ ಪೈಕಿ 16,821 ಫಲಾನುಭವಿಗಳನ್ನು ವಾತ್ಸಲ್ಯ ಕುಟುಂಬವೆಂದು ಆಯ್ಕೆ ಮಾಡಲಾಗಿದೆ. ಇದುವರೆಗೆ 12,632 ಕುಟುಂಬಕ್ಕೆ ವಾತ್ಸಲ್ಯಕಿಟ್ ವಿತರಣೆ ಮಾಡಲಾಗಿದೆ. ಈ ತಿಂಗಳು 4,189 ಕುಟುಂಬಗಳಿಗೆ ವಿತರಿಸಲಾಗುತ್ತದೆ ಎಂದು ಡಾ| ಹೇಮಾವತಿ ವೀ. ಹೆಗ್ಗಡೆ ತಿಳಿಸಿದರು.