ಹೊಸದಿಲ್ಲಿ: ಎಂಟು ರಾಜ್ಯಗಳು, ಶೇ.85 ಪ್ರಕರಣಗಳು, ಶೇ.87 ಸಾವು… ಭಾರತವು ಪ್ರತಿ ದಿನ ಸೋಂಕಿತರ ಸಂಖ್ಯೆಯಲ್ಲಿ ತನ್ನದೇ ದಾಖಲೆಯನ್ನು ಸರಿಗಟ್ಟುತ್ತಾ ಸಾಗುತ್ತಿರುವ ನಡುವೆಯೇ, ದೇಶದ ಒಟ್ಟು ಪ್ರಕರಣಗಳ ಪೈಕಿ ಶೇ.85ರಷ್ಟು ಸೋಂಕಿತರು ಕೇವಲ 8 ರಾಜ್ಯಗಳಿಗೆ ಸೀಮಿತವಾಗಿದ್ದಾರೆ ಎಂಬ ಮಾಹಿತಿ ಯೊಂದು ಹೊರಬಿದ್ದಿದೆ.
ಈ ವಿಚಾರ ತಿಳಿಸಿದ್ದು ಕೇಂದ್ರ ಆರೋಗ್ಯ ಸಚಿವ ಡಾ| ಹರ್ಷವರ್ಧನ್. ಶನಿವಾರ ನಡೆದ ಸಚಿವರ ಸಮಿತಿಯ 17ನೇ ಸಭೆಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ದಿಲ್ಲಿ, ತಮಿಳುನಾಡು, ಗುಜರಾತ್, ತೆಲಂಗಾಣ, ಉತ್ತರಪ್ರದೇಶ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಲದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ದೇಶದ ಒಟ್ಟು ಪ್ರಕರಣಗಳ ಪೈಕಿ ಶೇ.85.5ರಷ್ಟು ಪ್ರಕರಣಗಳು ಈ ರಾಜ್ಯಗಳಲ್ಲಿ ಪತ್ತೆಯಾಗಿದ್ದು, ಮೃತರ ಪೈಕಿ ಶೇ.87ರಷ್ಟು ಮಂದಿಯೂ ಈ 8 ರಾಜ್ಯಗಳಿಗೆ ಸೇರಿದವರು ಎಂದು ಹೇಳಿದ್ದಾರೆ.
ಸೋಂಕು ಬಾಧಿತ ರಾಜ್ಯಗಳ ಪೈಕಿ ಮಹಾರಾಷ್ಟ್ರ (1.53 ಲಕ್ಷ ಪ್ರಕರಣ, 7 ಸಾವಿರಕ್ಕೂ ಹೆಚ್ಚು ಸಾವು) ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ದೆಹಲಿ (77,240 ಪ್ರಕರಣ, 2,492 ಸಾವು) ಮತ್ತು ತಮಿಳುನಾಡು (74,622 ಸೋಂಕಿತರು, 957 ಸಾವು) ಇವೆ ಎಂದೂ ಅವರು ತಿಳಿಸಿದ್ದಾರೆ. ಜತೆಗೆ, ಆರೋಗ್ಯ ತಜ್ಞರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರನ್ನು ಒಳಗೊಂಡ 15 ತಂಡಗಳನ್ನು ಕೇಂದ್ರ ಸರಕಾರ ರಚಿಸಿದ್ದು, ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರಗಳಿಗೆ ಈ ತಂಡ ಬೆಂಬಲ ನೀಡಲಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.
ಗುಣಮುಖ ಪ್ರಮಾಣ ಹೆಚ್ಚಳ: ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚಳವಾಗುತ್ತಿದ್ದರೂ, ಸಮಾಧಾನದ ಸಂಗತಿಯೆಂಬಂತೆ ಗುಣಮುಖ ಪ್ರಮಾಣ ಶೇ.58 ದಾಟಿದೆ. ಈವರೆಗೆ 3 ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸಾcರ್ಜ್ ಆಗಿದ್ದಾರೆ. ಅಲ್ಲದೆ, ಸೋಂಕಿತರ ಮರಣ ಪ್ರಮಾಣವು ದೇಶದಲ್ಲಿ ಶೇ.3.08ರಷ್ಟಿದ್ದು, ಇದು ಬೇರೆ ದೇಶಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಸೋಂಕು ದ್ವಿಗುಣಗೊಳ್ಳುವ ಅವಧಿ ಈಗ 19 ದಿನಗಳಾಗಿವೆ. ಲಾಕ್‌ಡೌನ್ ಘೋಷಣೆಗೂ ಮುನ್ನ ಇದು 3 ದಿನಗಳಾಗಿದ್ದವು ಎಂದೂ ಹರ್ಷವರ್ಧನ್ ತಿಳಿಸಿದ್ದಾರೆ. ಜತೆಗೆ, ಒಂದೇ ದಿನ 2.2 ಲಕ್ಷ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿದ್ದು, ಒಟ್ಟಾರೆ 80 ಲಕ್ಷ ಸ್ಯಾಂಪಲ್‌ಗಳ ಪರೀಕ್ಷೆ ನಡೆದಿದೆ ಎಂದಿದ್ದಾರೆ.
24 ಗಂಟೆಗಳಲ್ಲಿ 18,552 ಪ್ರಕರಣ
ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರ ವರೆಗಿನ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 18,552 ಪ್ರಕರಣಗಳು ಪತ್ತೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಒಂದೇ ದಿನ 384 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಜೂ.1ರಿಂದ 27ರ ವರೆಗೆ ದೇಶದಲ್ಲಿ 3.18 ಲಕ್ಷ ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ವೇಳೆ, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕಿತರ ಸಂಖ್ಯೆಯು ಹೇಳಿಕೊಳ್ಳುವಷ್ಟು ವೇಗವಾಗಿಯೇನೂ ಬೆಳೆಯುತ್ತಿಲ್ಲ ಎಂದು ಏಮ್ಸ್ ತಿಳಿಸಿದೆ. ಅಮೆರಿಕದಲ್ಲಿ ಪ್ರತಿ ದಿನ ಸುಮಾರು 40 ಸಾವಿರ ಮಂದಿಗೆ ಸೋಂಕು ದೃಢಪಡುತ್ತಿದೆ. ಹಾಗೆ ನೋಡಿದರೆ ಭಾರತದ ಸಂಖ್ಯೆ ಕಡಿಮೆಯಿದೆ. ಜತೆಗೆ, ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿತರ ಸಂಖ್ಯೆಯಾಗಲಿ, ಮರಣ ಪ್ರಮಾಣವಾಗಲಿ ಕನಿಷ್ಠ ಪ್ರಮಾಣದಲ್ಲೇ ಇದೆ ಎಂದಿದ್ದಾರೆ.