ಧಾರವಾಡ: ಇಲ್ಲಿನ ಆರ್‌ಎಲ್‌ಎಸ್ ಕಾಲೇಜು ಆವರಣದಲ್ಲಿ ಯುಗಾದಿ ದಿನ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಡಾ| ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ 30ನೇ ಶಾಖೆಗೆ ಚಾಲನೆ ದೊರೆಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಕೆಎಲ್‌ಇ ಸಂಸ್ಥೆ ನಿರ್ದೇಶಕ ಅಮಿತ ಭಾಕರ ಕೋರೆ, 1988ರಲ್ಲಿ ಚಿಕ್ಕೋಡಿಯ ಅಂಕಲಿಯಲ್ಲಿ ಈ ಸಹಕಾರಿಯ ಮೊದಲ ಶಾಖೆಯನ್ನು ಸಹ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಇದೀಗ 30ನೇ ಶಾಖೆಯನ್ನು ಧಾರವಾಡದಲ್ಲಿ ಉದ್ಘಾಟಿಸಿದ್ದು ಸಂತಸ ತಂದಿದೆ.
ಅವರ ಆಶೀರ್ವಾದದಿಂದ ರಾಜ್ಯಾದ್ಯಂತ ಈ ಸಹಕಾರಿಯ 200 ಶಾಖೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದರು. ಸಮಾಜದಲ್ಲಿ ಎಂತಹ ಶ್ರೀಮಂತರಿದ್ದರೂ ಅವರಿಗೆ ಕೆಲವು ಸಂದರ್ಭಗಳಲ್ಲಿ ಹಣದ ತೊಂದರೆಗಳು ಬರುವುದು ಸಾಮಾನ್ಯ. ಬ್ಯಾಂಕ್ ಅಥವಾ ಇಂತಹ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಪ್ರಸ್ತುತ ಡಾ| ಕೋರೆ ಹೆಸರಿನ ಸಹಕಾರಿಯು ಬರೀ ಸಾಲ ಅಲ್ಲದೇ ಹಲವು ಸಾಮಾಜಿಕ ಕೆಲಸಗಳಲ್ಲಿ ತೊಡಗಿದೆ. ಈ ಸಹಕಾರಿಯಲ್ಲಿ ಸದಸ್ಯತ್ವ ಪಡೆದವರಿಗೆ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಹಲವು ರಿಯಾಯ್ತಿ ಇದೆ. ಜೊತೆಗೆ ಆರ್‌ಟಿಜಿಎಸ್, ಎನ್‌ಇಎ-ಟಿ ಸೇರಿದಂತೆ ವಿಮಾನ, ರೈಲ್ವೆ, ಬಸ್ ಟಿಕೆಟ್‌ಗಳು ಸಹ ಇಲ್ಲಿ ಲಭ್ಯ ಎಂದರು.
ಕೆಎಲ್‌ಇ ಸಂಸ್ಥೆ ಇನ್ನೋರ್ವ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಬ್ಯಾಂಕ್ ಒದಗಿಸುವ ಎಲ್ಲ ಆಧುನಿಕ ಸೌಲಭ್ಯಗಳೊಂದಿಗೆ ಹೆಚ್ಚುವರಿಯಾಗಿ ಈ ಸಹಕಾರಿ ಅನುಕೂಲತೆ ಹಾಗೂ ವಿಮೆಗಳನ್ನು ನೀಡುತ್ತಿದೆ. ಈ ಸಹಕಾರಿಯ ಪ್ರಯೋಜನೆಗಳನ್ನು ಸಾರ್ವಜನಿಕರು ಪಡೆಯಬೇಕೆಂದರು.
ನಿರ್ದೇಶಕರಾದ ಮುರಿಗೆಪ್ಪಾ ತುರುಮರಿ, ಸಹಕಾರಿ ಪ್ರಧಾನ ವ್ಯವಸ್ಥಾಪಕ ಡಿ.ಎಸ್. ಕರೋಶಿ, ಅಧ್ಯಕ್ಷರಾದ ಮಹಾಂತೇಶ ಪಾಟೀಲ, ಮಲ್ಲಿಕಾರ್ಜುನ ಬೆಂಡಿಗೇರಿ, ಸರಸಾನಂದ ದೊಡವಾಡ, ಕರಣ ದೊಡವಾಡ, ಎಸ್.ವಿ. ನಾಯಕ, ಸಿ.ಎಸ್. ಪಾಟೀಲ, ಕೆ.ವಿ. ಪಲ್ಲೇದ, ವಿಶ್ವನಾಥ ವಸ್ತ್ರದ ಇದ್ದರು. ರವೀಂದ್ರ ವಸ್ತ್ರದ ಸ್ವಾಗತಿಸಿದರು. ಎಫ್.ಟಿ. ಭಾವಿಕಟ್ಟಿ ವಂದಿಸಿದರು.