ಕಳೆದ ವರ್ಷವೂ ಮಹಾರಾಷ್ಟ್ರದಿಂದ ಬಂದ ಕಾರ್ಮಿಕರಿಂದಲೇ ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗಲು ಕಾರಣವಾಗಿತ್ತು. ಹೀಗಾಗಿ ಈಗಲೂ ಮಹಾರಾಷ್ಟ್ರದಲ್ಲಿ 144 ಕಲಂ ಜಾರಿಗೆ ತಂದಿದ್ದರಿಂದ ವಲಸೆ ಹೋದ ಕಾರ್ಮಿಕರೆಲ್ಲರೂ ಬರುತ್ತಿದ್ದಾರೆ. ಬಂದವರೆಲ್ಲ ತಮ್ಮ ಗ್ರಾಮಗಳಿಗೆ ಆಗಮಿಸುತ್ತಿರುವುದರಿಂದ ಗ್ರಾಮೀಣ ಭಾಗದಲ್ಲೂ ಕೊರೊನಾ ಪರೀಕ್ಷೆ ವ್ಯಾಪಕವಾಗಿ ನಡೆಯಬೇಕು.
ಜಿಲ್ಲೆಯಲ್ಲಿ ಈಗ ಹಬ್ಬುತ್ತಿರುವ ಕೊರೊನಾ ವೇಗ ನೋಡಿದರೆ ಕೆಲವೇ ದಿನಗಳಲ್ಲಿ ಇದು ಯಾವ ಮಟ್ಟಿಗೆ ತಲುಪುತ್ತದೆ ಎನ್ನುವುದನ್ನು ಊಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಕೆಲಸ ತುರ್ತಾಗಿ ಆಗಬೇಕಿದೆ. ಅದಕ್ಕಾಗಿ ವಸತಿ ನಿಲಯಗಳನ್ನು ಸ್ವತ್ಛಗೊಳಿಸಿ ಕಾರ್ಯಗತಗೊಳಿಸಬೇಕು. ಸರಕಾರಕ್ಕೆ ಜನರ ಆರೋಗ್ಯ ಹಾಗೂ ಜೀವಕ್ಕಿಂತ ಚುನಾವಣೆಯೇ ಮುಖ್ಯ ಎಂದು ಕಂಡು ಬರುತ್ತಿದೆ. ಆದ್ದರಿಂದ ಇವೆಲ್ಲವನ್ನು ಬಿಟ್ಟು ಈಗಲಾದರೂ ಜನರಿಗೆ ಸೂಕ್ತ ವೈದ್ಯಕೀಯ ಸೇವೆ ಜತೆಗೆ ರೆಮ್‌ಡೆಸಿವಿಯರ್ ಇಂಜೆಕ್ಷನ್ ಎಲ್ಲೆಡೆ ಸಿಗುವಂತೆ ಮಾಡಬೇಕು. ಕೊರತೆಯಿಂದ ಜನರು ವಿನಾಕಾರಣ ತೊಂದರೆಗೆ ಒಳಗಾಗುವಂತಾಗಿದೆ.
ಕೊರೊನಾ ಎರಡನೇ ಅಲೆ ಹೋಗಿ ಮೂರನೇ ಅಲೆ ಬರಲಿದೆ ಎನ್ನಲಾಗುತ್ತಿದೆ. ಆದ್ದರಿಂದ ಸಭೆ-ಸಮಾರಂಭ ಸಂಪೂರ್ಣ ನಿಷೇಧಿಸಬೇಕು. 144 ಕಲಂ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಒಂದರ್ಥದಲ್ಲಿ ಲಾಕ್‌ಡೌನ್ ಮಾದರಿಯಲ್ಲೇ ಕಠಿನ ಕ್ರಮ ಕಾರ್ಯಾನುಷ್ಠಾನಗೊಳಿಸಬೇಕು. ನಿರ್ಲಕ್ಷಿಸದೇ ಒಗ್ಗಟ್ಟಾಗಿ ಕೊರೊನಾ ಹೊಡೆದೋಡಿಸಬೇಕು.
ಕೊರೊನಾ ಈಗ ಸಮುದಾಯವಾಗಿ ಎಲ್ಲೆಡೆ ಪಸರಿಸಿಕೊಂಡಿದೆ. ಹಿರಿಯರಿಗ ಲ್ಲದೇ ಮಕ್ಕಳಿಗೂ ವಕ್ಕರಿಸುತ್ತಿರುವುದು ಆತಂಕಕಾರಿ. ಹೀಗಾಗಿ ಕೊರೊನಾ ಹಬ್ಬುವಿಕೆ ಸರಪಳಿ ಕಡಿತಗೊಳಿಸಬೇಕು. ಮೂರು ವಾರಗಳ ಕಾಲ ಅತ್ಯಂತ ಜಾಗೃತಿ ವಹಿಸಿ ಸರಪಳಿ ಕಡಿತ ಮಾಡಬೇಕು. ಇಟಲಿಯಲ್ಲಂತೂ ಈಗ ಕೊರೊನಾ ದಿಂದ ರೋಗಿಗಳು ಹಾದಿ ಬೀದಿಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ದೇಶದಲ್ಲಿ ಬರಕೂಡದು. ಆದ್ದರಿಂದ ಬೆಡ್‌ಗಳ ಸಂಖ್ಯೆ ಹೆಚ್ಚಳ ಜತೆಗೆ ವೆಂಟಿಲೇಟರ್ ಹೆಚ್ಚಾಗಬೇಕು. ಕಳೆದ ವರ್ಷವೇ ಇದಕ್ಕೆಲ್ಲ ಕ್ರಮ ಕೈಗೊಳ್ಳಲಾಗು ವುದು ಎನ್ನಲಾಗಿತ್ತು. ವೈದ್ಯರ ಕೊರತೆಯೂ ಇದೆ. ಇದಕ್ಕೆಲ್ಲ ತುರ್ತಾಗಿ ಅಂದರೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಜೇವರ್ಗಿ ಕ್ಷೇತ್ರದಲ್ಲಿ ವೈದ್ಯಾಧಿ ಕಾರಿಗಳಿಗೆ ಕೋವಿಡ್ ಕೇರ್ ಸೆಂಟರ್ ತೆರೆಯಲು ಸೂಚಿಸಲಾಗಿದೆ. ಹಳ್ಳಿ- ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆ ನಡೆಸುವುದರ ಜತೆಗೆ ಲಸಿಕೆ ಹಾಕಿಸಲು ಸೂಚಿಸಲಾಗಿದೆ. ಜನರು ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕಿದ ಸಂದರ್ಭದಲ್ಲಿ “ಲಸಿಕೋತ್ಸವ’ ಮಾಡಿದರೆ ಅರ್ಥ ಬರುತ್ತದೆ. ಲಸಿಕೆ ಕೊರತೆಯಾಗದಂತೆ ನೋಡಿಕೊಳ್ಳುವುದು ನಮ್ಮ ಮುಂದಿರುವ ಸವಾಲು ಹಾಗೂ ಪ್ರತಿಷ್ಠೆಯಾಗಿದೆ.