ಹೊಸದಿಲ್ಲಿ: ಡಿಲ್ಲಿ ಪ್ರೀಮಿಯರ್ ಲೀಗ್ ಟಿ20 ಟೂರ್ನಮೆಂಟ್ ನಲ್ಲಿ ದಾಖಲೆ ನಿರ್ಮಿಸಲಾಗಿದೆ. ಸೌತ್ ಡೆಲ್ಲಿ ಸೂಪರ್‌ಸ್ಟಾರ್ಜ್ ಮತ್ತು ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ರನ್ ರಾಶಿ ಪೇರಿಸಲಾಗಿದೆ. ಸೌತ್ ದೆಹಲಿ ಸೂಪರ್ ಸ್ಟಾರ್ಜ್ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 308 ಗಳಿಸಿದ್ದು, ಇದು ಟಿ20 ಪಂದ್ಯದಲ್ಲಿ ಗರಿಷ್ಠ ಮೊತ್ತವಾಗಿದೆ.
ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 287/3 ಟ್ವೆಂಟಿ 20 ಪಂದ್ಯವೊಂದರಲ್ಲಿ ಗರಿಷ್ಠವಾಗಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ, ಮಂಗೋಲಿಯಾ ವಿರುದ್ಧ ನೇಪಾಳದ 314/3 ಗರಿಷ್ಠ ಮೊತ್ತವಾಗಿದೆ.
ಇಂದಿನ ಪಂದ್ಯದಲ್ಲಿ ಸ್ಟಾರ್ ಆಟಗಾರ ಆಯುಷ್ ಬದೋನಿ ಮತ್ತು ಪ್ರಿಯಾನ್ಶ್ ಆರ್ಯ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಆಯುಷ್ ಬದೋನಿ 300ರ ಸ್ಟ್ರೈಕ್ ರೇಟ್ ನಲ್ಲಿ ಶತಕ ಬಾರಿಸಿದ್ದಾರೆ. ಕೇವಲ 55 ಎಸೆತಗಳಲ್ಲಿ 165 ರನ್ ಗಳಿಸಿದ್ದಾರೆ. ಮತ್ತೊಂದೆಡೆ ಪ್ರಿಯಾನ್ಶ್ ಆರ್ಯ 50 ಎಸೆತಗಳಲ್ಲಿ 120 ರನ್ ಗಳಿಸಿದರು. ಅಲ್ಲದೆ ಒಂದು ಓವರ್ ನಲ್ಲಿ ಆರು ಸಿಕ್ಸರ್ ಚಚ್ಚಿ ಮೆರೆದರು.
ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ಬೌಲರ್ ಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ ಆಯುಷ್ ಬದೋನಿ ಬರೋಬ್ಬರಿ 19 ಸಿಕ್ಸರ್ ಸಿಡಿಸಿದರು. ಅವರ ಬ್ಯಾಟಿಂಗ್ ಎಂಟು ಫೋರ್ ಕೂಡಾ ಬಂತು. ಆರ್ಯ ಹತ್ತು ಸಿಕ್ಸರ್ ಬಾರಿಸಿದರು.
ಪ್ರಿಯಾನ್ಶ್ ಆರ್ಯ ಅವರು ಇನ್ನಿಂಗ್ಸ್ ನ 12 ನೇ ಓವರ್ ನ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ 36 ರನ್ ಗಳಿಸಿದರು.
ಈ ಮೂಲಕ ಅವರು ದೇಶೀಯ ಟಿ20 ಪಂದ್ಯಗಳಲ್ಲಿ ಸಿಕ್ಸ್ ಸಿಕ್ಸರ್ ಬಾರಿಸಿದ ರಾಸ್ ವೈಟ್ಲಿ (2017), ಹಜರತುಲ್ಲಾ ಝಜೈ (2018) ಮತ್ತು ಲಿಯೊ ಕಾರ್ಟರ್ (2020) ಅವರ ವಿಶೇಷ ಕ್ಲಬ್ ಗೆ ಸೇರಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವರಾಜ್ ಸಿಂಗ್, ಕೈರನ್ ಪೊಲಾರ್ಡ್ ಮತ್ತು ದೀಪೇಂದ್ರ ಸಿಂಗ್ ಐರಿ (ಎರಡು ಬಾರಿ) ಈ ಅಪರೂಪದ ಸಾಧನೆ ಮಾಡಿದ್ದಾರೆ.