Advertisement
ಯಾವುದೋ ಯೋಚನೆಯಲ್ಲಿ ಮುಳುಗಿದ್ದವಳಿಗೆ ಮೊಬೈಲ್‌ನಿಂದ ಆ ಕಡೆಯಿಂದ ಧ್ವನಿ ಕೇಳಿಸಿತು. “ಹೆಂಡತಿ ಜಗಳವಾಡಿ ಪತ್ರ ಬರೆದಿಟ್ಟು, ಮನೆಬಿಟ್ಟು ಹೋಗಿದ್ದಾಳೆ. ನಿಮ್ಮನೆಗೆ ಏನಾದ್ರೂ ಬಂದಿದ್ಲಾ?’ ಎಂದು. ನಾನು ಗಾಬರಿಯಲ್ಲಿ ಇಲ್ಲವೆಂದೆ. ಹತ್ತು ವರ್ಷದಲ್ಲಿ ಒಮ್ಮೆಯೂ ಅವಳು ಹೀಗೆ ಮಾಡಿರುವುದನ್ನು ಕೇಳಿರಲಿಲ್ಲ. ಇದ್ದಕ್ಕಿದ್ದ ಹಾಗೆ ಏನಾಯ್ತು ಇವಳಿಗೆ ಎಂದು ವಿಚಾರಿಸಲು ಅವರ ಮನೆಯತ್ತ ದೌಡಾಯಿಸಿದೆ, ಮನೆಗೆ ಬೀಗ ಹಾಕಿ ಎಲ್ಲರೂ ಅವಳ ಹುಡುಕಾಟದಲ್ಲಿದ್ದರು. ಸೂರ್ಯ ತನ್ನ ಮನೆ ಸೇರುವ ಹೊತ್ತಿಗೆ ಪುಟ್ಟ ಮಗುವಿನೊಂದಿಗೆ ಮನೆಬಿಟ್ಟು, ಅದೆಲ್ಲಿಗೆ ಹೋದಳು ಎಂದು ಆತಂಕವಾಗಿ ಎಲ್ಲರನ್ನೂ ವಿಚಾರಿಸಲೂ ಶುರುಮಾಡಿದೆ. ಎಲ್ಲರಿಂದ ಒಂದೇ ಉತ್ತರ: “ನಂಗೆ ಗೊತ್ತಿಲ್ಲ’!.
Related Articles
Advertisement
ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಗಟ್ಟಿಯಾಗಿ ಉಳಿಯುತ್ತಿಲ್ಲ. ಎಷ್ಟೇ ಪ್ರೀತಿಯಿಂದಿದ್ದರೂ ಸ್ವಲ್ಪ ಸಮಯದ ನಂತರ ಅವರವರ ನಡುವೆ ಮನಃಸ್ತಾಪಗಳು ಶುರುವಾಗಿ, ವಿಚ್ಛೇದನದ ತನಕ ಹೋಗುವುದೂ ಇದೆ. ಇದರಲ್ಲಿ ಕೇವಲ ಪುರುಷರದ್ದೇ ತಪ್ಪು ಇರುತ್ತದೆಂದು ಹೇಳಲಾಗುವುದಿಲ್ಲ. ಮಹಿಳೆಯರೂ ಈ ವೇಳೆ ಎಡವುತ್ತಾರೆ. ಆದರೆ, ಎಷ್ಟೋ ಸಲ ಪುರುಷರ ತಪ್ಪುಗಳು ಮುಚ್ಚಿಹೋಗುತ್ತವೆ. ಸ್ತ್ರೀಯರ ಪ್ರಮಾದಗಳು ಎದ್ದು ನಿಲ್ಲುತ್ತವೆ. ಅಂತಿಮವಾಗಿ ಜೀವನ ಹಾಳಾಗುವುದು ಮಾತ್ರ ಮಹಿಳೆಯರದ್ದೇ.
“ಅರಿತು ಬಾಳುವುದೇ ಸ್ವರ್ಗ ಸುಖ’ ಎನ್ನುವ ತತ್ವವೇ ಸುಂದರ ದಾಂಪತ್ಯದ ಗುಟ್ಟು. ಸಣ್ಣಪುಟ್ಟ ತಪ್ಪುಗಳನ್ನು ದೊಡ್ಡದು ಮಾಡದೇ, ಅಲ್ಲಿಯೇ ತಟ್ಟಿ ಮಲಗಿಸಿಬಿಟ್ಟರೆ, ಸಂಸಾರ ಇನ್ನಷ್ಟು ಸಿಹಿ. ಕ್ಷಮೆಗಳ ವಿನಿಮಯ ಆಗುತ್ತಿದ್ದರೆ, ಸಂಸಾರವೂ ಸದಾ ಕ್ಷೇಮವಾಗಿರುತ್ತದೆ.
ಎಲ್ಲದಕ್ಕೂ ಪ್ರೀತಿಯೇ ಮದ್ದು…– ಭವಿಷ್ಯದ ಹೊಂದಾಣಿಕೆಯ ಕುರಿತು ಏನೇ ಗೊಂದಲಗಳಿದ್ದರೂ, ಮದುವೆಗೆ ಮುಂಚೆಯೇ ಮಾತಾಡಿಕೊಳ್ಳಿ.
– ಬಾಹ್ಯ ಸೌಂದರ್ಯಕ್ಕಿಂತ ವ್ಯಕ್ತಿಯ ಆಂತರಿಕ ಸೌಂದರ್ಯವನ್ನು ಗೌರವಿಸಿ.
– ಕಲ್ಪನೆಯ ಜಗತ್ತಿನಿಂದ ಆಚೆ ಬಂದು, ಸತ್ಯ ಮತ್ತು ವಾಸ್ತವತೆಯನ್ನು ಕಣ್ತೆರೆದು ನೋಡಿ.
– ಇಬ್ಬರ ನಡುವೆ ಹೊಂದಾಣಿಕೆಯಾದರಷ್ಟೇ ಮುಂದಿನ ಹೆಜ್ಜೆ ಇಡಿ.
– ಅಪ್ಪ- ಅಮ್ಮ ತಮ್ಮ ಮಗಳನ್ನು ಕಷ್ಟಪಟ್ಟು ಬೆಳೆಸಿ, ಲಕ್ಷಗಟ್ಟಲೆ ಸಾಲ ಮಾಡಿ, ಮದುವೆ ಮಾಡಿರುತ್ತಾರೆ. ಆ ಪ್ರೀತಿಗೆ ಪುರುಷರು ಬೆಲೆ ಕೊಡಬೇಕು.
– ತನ್ನ ಕುಟುಂಬವನ್ನೇ ನಂಬಿ ಬಂದವಳಿಗೆ, ಮೋಸ ಮಾಡುವ ಯತ್ನ ಬೇಡ.
– ಕೈಹಿಡಿದಾಕೆಗೆ ಮನೆಯಲ್ಲಿ ಸೇವಕಿ ಸ್ಥಾನ ಕೊಡುವ ಬದಲು, ನಿಮ್ಮ ಹೃದಯದಲ್ಲಿ ಪುಟ್ಟ ಜಾಗ ಕೊಟ್ಟರೆ ಅದೇ ಸಾಕು. ಮಂಜುಳಾ ಬಡಿಗೇರ್, ಕೊಪ್ಪಳ