Advertisement

ಶಾಲಾ ಮಕ್ಕಳ ಬ್ಯಾಗ್‌ ಭಾರ ಇಳಿಯೋದು ಡೌಟ್‌!

10:34 PM Jun 02, 2019 | Lakshmi GovindaRaj |

ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್‌ ಭಾರ ಇಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಶಾಲಾಡಳಿತ ಮಂಡಳಿಗಳಿಂದ ಕವಡೆ ಕಾಸಿನ ಕಿಮತ್ತಿಲ್ಲದೇ ಇರುವುದರಿಂದ ವಾಸ್ತವಾಗಿ ಬ್ಯಾಗ್‌ ಭಾರ ಇಳಿಯುವುದು ಡೌಟ್‌! ಮಕ್ಕಳು ಭಾರದ ಬ್ಯಾಗ್‌ ಹೊತ್ತುಕೊಂಡು ಬರುವುದರಿಂದ ಭವಿಷ್ಯದಲ್ಲಿ ಶಾಶ್ವತ ಕತ್ತು, ಬೆನ್ನುನೋವು ಸೇರಿ ಅನೇಕ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ.

Advertisement

ಅಲ್ಲದೇ, ಪುಸ್ತಕಗಳ ಪ್ರಮಾಣವೂ ಕಡಿಮೆ ಮಾಡಬೇಕು ಹಾಗೂ ವರ್ಕ್‌ ಬುಕ್‌ಗಳನ್ನು ಶಾಲೆಯಲ್ಲಿಯೇ ಸಂರಕ್ಷಿಸಿಡುವಂತೆ ಆಗಬೇಕೆಂಬ ಸದುದ್ದೇಶದಿಂದ ಬ್ಯಾಗ್‌ ಭಾರ ಇಳಿಸಿ ಸರ್ಕಾರ ಮೇ 3ರಂದು ಆದೇಶ ಹೊರಡಿಸಿತ್ತು. 2019-20ನೇ ಶೈಕ್ಷಣಿಕ ಸಾಲಿನಿಂದಲೇ ಅನುಷ್ಠಾನಕ್ಕೆ ತರಬೇಕು ಎಂದು ನಿರ್ದೇಶನವನ್ನೂ ನೀಡಿತ್ತು.

ಪ್ರಸಕ್ತ ಸಾಲಿನ ಶೈಕ್ಷಣಿಕ ತರಗತಿಗಳು ಈಗಷ್ಟೇ ಆರಂಭವಾಗಿದೆ. ಆದರೆ, ಬ್ಯಾಗ್‌ ಭಾರ ಮಾತ್ರ ಇಳಿದಿಲ್ಲ. ಸರ್ಕಾರವೂ ಪಠ್ಯಪುಸ್ತಕ ಪರಿಷ್ಕರಣೆ ಮಾಡಿಲ್ಲ. ರಾಜ್ಯ ಪಠ್ಯಕ್ರಮ ಹಾಗೂ ಕೇಂದ್ರ ಪಠ್ಯಕ್ರಮದ ಖಾಸಗಿ ಶಾಲೆಗಳು ಈಗಾಗಲೇ ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿವೆ. ಆಕ್ಷೇಪಣೆಗಳನ್ನು ಸಲ್ಲಿಸಿದ್ದರೂ, ಸರ್ಕಾರ ಸ್ಪಂದಿಸಿಲ್ಲ. ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಲು ಕೆಲವು ಆಡಳಿತ ಮಂಡಳಿಗಳು ಸಿದ್ಧವಾಗಿವೆ ಎನ್ನಲಾಗಿದೆ.

1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್‌ ತೂಕವು ವಿದ್ಯಾರ್ಥಿಗಳ ದೇಹ ತೂಕಕ್ಕಿಂತ ಸರಾಸರಿ ಶೇ.10ರಷ್ಟು ಮೀರಬಾರದು, 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್‌ ನೀಡಬಾರದು ಎಂದು ಸರ್ಕಾರ ಸ್ಪಷ್ಟ ಸೂಚನೆ ನೀಡಿತ್ತು. ಆದರೆ, ಬಹುತೇಕ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಯಿಂದಲೇ ಹೋಂವರ್ಕ್‌ ಆರಂಭವಾಗುತ್ತದೆ. ಮಕ್ಕಳ ಬ್ಯಾಗ್‌ ಹಾಗೂ ಮೂರ್‍ನಾಲ್ಕು ಪುಸ್ತಕವೇ ಒಂದು ಕೆ.ಜಿ ಭಾರ ಮೀರುತ್ತದೆ.

200 ಪುಟದ ಒಂದು ನೋಟ್‌ ಬುಕ್‌ ಸರಿ ಸುಮಾರು 250ರಿಂದ 350 ಗ್ರಾಂ ಇರುತ್ತದೆ. ಪಠ್ಯಪುಸ್ತಕ 200ರಿಂದ 300 ಗ್ರಾಂ ಇರುತ್ತದೆ. ದಿನಕ್ಕೆ ಕನಿಷ್ಠ 5ರಿಂದ 6 ತರಗತಿಗೆ ಆರು ಪಠ್ಯಪುಸ್ತಕ ಹಾಗೂ ನೋಟ್‌ ಬುಕ್‌ ಲೆಕ್ಕಚಾರದಲ್ಲಾದರೂ ಮಕ್ಕಳು ಬ್ಯಾಗ್‌ ಕೊಂಡೊಯ್ದರೆ ಸರ್ಕಾರ ನಿಗದಿಪಡಿಸಿದ ಕನಿಷ್ಠ ಭಾರ ಮೀರುತ್ತದೆ ಎಂಬುದು ಆಡಳಿತ ಮಂಡಳಿಗಳ ವಾದ.

Advertisement

2019-20ನೇ ಸಾಲಿನಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 1ರಿಂದ 2ನೇ ತರಗತಿ ವಿದ್ಯಾರ್ಥಿಗಳಿಗೆ 1.5ರಿಂದ 2 ಕಿ.ಗ್ರಾಂ., 3 ರಿಂದ 5ನೇ ತರಗತಿಗೆ 2ರಿಂದ 3 ಕಿ.ಗ್ರಾಂ., 6 ರಿಂದ 8 ನೇ ತರಗತಿಗೆ 3 ರಿಂದ 4 ಕಿ.ಗ್ರಾಂ., 9ರಿಂದ 10ನೇ ತರಗತಿಗೆ 4 ರಿಂದ 5 ಕಿ.ಗ್ರಾಂ. ಮೀರಬಾರದು ಎಂದು ಸರ್ಕಾರ ಸೂಚಿಸಿದ್ದರೂ, ಅನುಷ್ಠಾನ ಮಾತ್ರ ಆಡಳಿತ ಮಂಡಳಿಗಳಿಗೆ ಕಷ್ಟಸಾಧ್ಯವಾಗುತ್ತಿದೆ. ಇದು ಕೇವಲ ಖಾಸಗಿ ಶಾಲೆಗಳಿಗೆ ಮಾತ್ರಲ್ಲ ಸರ್ಕಾರಿ ಶಾಲೆಯಲ್ಲೂ ಅನುಷ್ಠಾನವಾಗಬೇಕು. ಸರ್ಕಾರಿ ಶಾಲಾ ಶಿಕ್ಷಕರಿಗೂ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇಲಾಖೆಯಿಂದ ಮೇಲ್ವಿಚಾರಣೆ: ಶಾಲಾ ಮಕ್ಕಳ ಬ್ಯಾಗ್‌ ಭಾರ ಇಳಿಸಿ ಸರ್ಕಾರ ಹೊರಡಿಸಿರುವ ಆದೇಶ ಪಾಲನೆ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಇಲಾಖೆಯ ಅಧಿಕಾರಿಗಳು ಆಗಿಂದಾಗೆÂ ಮೇಲ್ವಿಚಾರಣೆ ನಡೆಸಲಿದ್ದಾರೆ. ಈಗಷ್ಟೇ ತರಗತಿಗಳು ಆರಂಭವಾಗಿರುವುದರಿಂದ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಬ್ಯಾಗ್‌ ಭಾರದ ತಪಾಸಣಾ ಕಾರ್ಯ ಆರಂಭವಾಗಲಿದೆ. ಸರ್ಕಾರ ಆದೇಶ ಪಾಲನೆ ಮಾಡದ ಶಾಲೆಗಳ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಬ್ಯಾಗ್‌ಭಾರ ಇಳಿಸುವ ಸಂಬಂಧ ಕೇಂದ್ರ ಸರ್ಕಾರ ಹಾಗೂ ಮದ್ರಾಸ್‌ ಹೈಕೋರ್ಟ್‌ನ ನಿರ್ದೇಶನದ ಜತೆಗೆ ರಾಜ್ಯ ಸರ್ಕಾರದ ಆದೇಶವೂ ಇದೆ. ಹೀಗಾಗಿ ಎಲ್ಲಾ ಶಾಲಾಡಳಿತ ಮಂಡಳಿ ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಭಾರ ಹೇಗೆ ಕಡಿಮೆ ಮಾಡಬೇಕು ಎಂಬುದಕ್ಕೆ ಮಾರ್ಗೋಪಾಯವನ್ನು ತಿಳಿಸಿದ್ದೇವೆ. ಅದರ ಅನುಷ್ಠಾನ ಆಗಬೇಕಿದೆ.
-ಉಮಾಶಂಕರ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ

ಬ್ಯಾಗ್‌ ಭಾರ ಇಳಿಸಲು ನಾವು ಸಿದ್ಧರಿದ್ದೇವೆ. ಆದರೆ, ಸರ್ಕಾರ ಅವೈಜ್ಞಾನಿಕವಾಗಿ ಆದೇಶ ಹೊರಡಿಸಿದ್ದು, ಪಾಲನೆ ಮಾಡಲು ಕಷ್ಟವಾಗುತ್ತದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೊಮ್ಮೆ ಸರ್ಕಾರದ ಮುಂದೆ ನಮ್ಮ ಆಕ್ಷೇಪಣೆ ಸಲ್ಲಿಸಲಿದ್ದೇವೆ.
-ಡಿ. ಶಶಿಕುಮಾರ್‌, ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ

Advertisement

Udayavani is now on Telegram. Click here to join our channel and stay updated with the latest news.

Next