Advertisement

ಅಭಿವೃದ್ಧಿ ನೆಪ: ದ್ವಿಪಥ ರಸ್ತೆ ಏಕಮುಖ ಸಂಚಾರಕ್ಕೆ ಸೀಮಿತ!

10:13 AM Aug 29, 2018 | |

ಬಜಪೆ : ಬಜಪೆ ಪೊಲೀಸ್‌ ಠಾಣೆ-ಮುರನಗರ ವ್ಯಾಪ್ತಿಯಲ್ಲಿ ಈ ಹಿಂದೆ ದ್ವಿಪಥ ರಸ್ತೆ ಇದ್ದದ್ದು ಈಗ ಏಕ ಮುಖ ರಸ್ತೆಯಾಗಿರುವುದು ವಾಹನ ಚಾಲಕರು ಪೇಚಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ವಿಮಾನ ನಿಲ್ದಾಣ, ಮೂಡಬಿದಿರೆ, ಕಟೀಲು, ಕಿನ್ನಿಗೋಳಿ ಕಡೆಗೆ ಸಂಚರಿಸುವ ವಾಹನಗಳು ಈ ರಸ್ತೆಯನ್ನೇ ಉಪಯೋಗಿಸುತ್ತಿದ್ದವು. ಆದರೆ ವಿಮಾನ ನಿಲ್ದಾಣ ಕೆಂಜಾರಿಗೆ ಸ್ಥಳಾಂತರಗೊಂಡ ಬಳಿಕ ಈ ರಸ್ತೆಯು ದುಸ್ಥಿತಿಗೆ ತಲುಪಿತ್ತು. ರಸ್ತೆ ಗುಂಡಿ ಬಿದ್ದರೂ, ಸ್ಥಳೀಯರು ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಜಪೆ ಪೇಟೆಯ ಸಣ್ಣ ಸೇತುವೆ ನಿರ್ಮಾಣ ಸಮಯದಲ್ಲಿ ಈ ರಸ್ತೆಯೇ ಅಗತ್ಯವಾಗಿತ್ತು. ಇದರಿಂದಾಗಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ರಸ್ತೆ ಸಂಪೂರ್ಣ ಹದಗೆಟ್ಟಿತು.  

Advertisement

1ಕಿ.ಮೀ.ರಸ್ತೆ ಕಾಂಕ್ರೀಟ್‌
ಬಜಪೆ ಪೊಲೀಸ್‌ ಸ್ಟೇಶನ್‌ನಿಂದ ಮುರನಗರ ಡಾಮರು ರಸ್ತೆಯನ್ನು 2 ಕೋಟಿ ರೂ. ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 1ಕಿ.ಮೀ.ರಸ್ತೆ ಕಾಂಕ್ರೀಟ್‌ ಮಾಡಲಾಗಿದೆ.ಆದರೆ ಒಂದೇ ವಾಹನ ಸಂಚಾರ ಮಾತ್ರ ಸಾಧ್ಯವಾಗಿದೆ. ಎರಡು ಬದಿಯಲ್ಲಿ ಒಂದು ಅಡಿಯಷ್ಟು ಅಳವಿದ್ದು ಇದಕ್ಕೆ ಈಗ ಮಣ್ಣು ಹಾಕಿ ತುಂಬಿಸಲಾಗುತ್ತಿದೆ. ಇದು ಎಷ್ಟು ಸಮಯ ಬರುವುದೋ ಎಂಬ ಸಂಶಯ ಜನರನ್ನು ಕಾಡುತ್ತಿದೆ.

ಕೊಳಂಬೆ-ಅದ್ಯಪಾಡಿಗೆ ಹತ್ತಿರದ ಸಂಪರ್ಕ ರಸ್ತೆ
ಬಜಪೆಯಿಂದ ಕೊಳಂಬೆ, ಅದ್ಯಪಾಡಿಗೆ ಇದು ಹತ್ತಿರದ ಸಂಪರ್ಕ ರಸ್ತೆ. ಇದರ ಕಾಮಗಾರಿ ನಡೆಯುತ್ತಿರುವ ಕಾರಣ ವಾಹನಗಳು ಸುತ್ತು ಬಳಸಿ ಹಳೆ ವಿಮಾನ ನಿಲ್ದಾಣ ರಸ್ತೆಯಾಗಿ ಹೋಗುತ್ತಿದೆ. ಮಂಗಳೂರು ಉತ್ತರ ಹಾಗೂ ಮೂಲ್ಕಿ-ಮೂಡಬಿದಿರೆ ಕ್ಷೇತ್ರದ ಗಡಿ ಪ್ರದೇಶ, ಕಂದಾವರ ಗ್ರಾ. ಪಂ. ವ್ಯಾಪ್ತಿಗೆ ಬರುವ ರಸ್ತೆ ವಿಸ್ತರಣೆಗೆ ಶೀಘ್ರಕ್ರಮ ಕೈಗೊಳ್ಳಬೇಕಿದೆ. ದ್ವಿಪಥ ರಸ್ತೆ ಇಲ್ಲಿ ಅನಿವಾರ್ಯತೆ ಇದೆ. ಬಹುಉಪಯೋಗಿ ಕೂಡ, ಪೇಟೆಯ ದಟ್ಟನೆ ವಾಹನ ಸಂಚಾರವನ್ನು ಕಡಿಮೆ ಮಾಡಿಸಬಲ್ಲ ಈ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಹೆಚ್ಚು ಕಾಳಜಿ ವಹಿಸಬೇಕು. ಕಾಂಕ್ರೀಟ್‌ ರಸ್ತೆಯ ಬದಿಯಲ್ಲಿ ಜಲ್ಲಿ ಕಲ್ಲು ಹಾಕಿ ಮಣ್ಣುಹಾಕಿ ರಸ್ತೆಯಂತೆ ಗಟ್ಟಿ ಮಾಡಲಾಗುವುದು ಎಂದು ಲೋಕೋ ಪಯೋಗಿ ಇಲಾಖೆಯ ಎಂಜಿನಿಯರ್‌ ಶ್ರೀಧರ್‌ ತಿಳಿಸಿದ್ದಾರೆ. 

ಬಜಪೆ ಪೇಟೆಗೆ ಪರ್ಯಾಯ ರಸ್ತೆ 
ಬಜಪೆ ಪೇಟೆಯಲ್ಲಿ ಯಾವುದೇ ಸಂದರ್ಭದಲ್ಲಿ ರಸ್ತೆ ತಡೆ ಹಾಗೂ ಆಡಚಣೆವುಂಟಾದಲ್ಲಿ ಈ ರಸ್ತೆಯೇ ಬಳಕೆಯಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಎಲ್ಲಿಯಾದರೂ ಅಂತಹ ಸಂದರ್ಭಗಳು ಬಂದರೆ ವಾಹನಗಳಿಗೆ ಇಲ್ಲಿ ಸಂಚಾರವೇ ಕಷ್ಟಸಾಧ್ಯವಾಗಬಹುದು.

ಪೂರ್ಣಗೊಳಿಸಲು ಸೂಚನೆ
ಗಣೇಶೋತ್ಸವ ಹಬ್ಬಕ್ಕೂ ಮುಂಚೆ ಈ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ನಾನು ಎಂಜಿನಿಯರ್‌ ಅವರಲ್ಲಿ ತಿಳಿಸಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ. ಮಣ್ಣು ಹಾಕಿದ ಕಾರಣ ಮಳೆ ಬಂದು ರಸ್ತೆ ಕೆಸರುಮಯವಾಗುತ್ತಿದೆ.
-ವಿಜಯ ಗೋಪಾಲ ಸುವರ್ಣ
ಕಂದಾವರ ಗ್ರಾ.ಪಂ.ಅಧ್ಯಕ್ಷೆ

Advertisement

 ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next