Advertisement

ಗೋಮಾಳ ಜಾಗ ಆಶ್ರಯ ಮನೆಗೆ ಬಳಸಬೇಡಿ

05:16 PM Aug 03, 2022 | Team Udayavani |

ಬ್ಯಾಡಗಿ: ಪಟ್ಟಣ ಹೊರವಲಯದಲ್ಲಿ ಜಾನುವಾರುಗಳಿಗೆ ಮೀಸಲಿಟ್ಟ ಗೋಮಾಳ ಜಾಗವನ್ನು ಆಶ್ರಯ ಯೋಜನೆಗೆ ಬಳಸದಂತೆ ಆಗ್ರಹಿಸಿ, ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಕಾರ್ಯಕರ್ತರು ನಂತರ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ರೈತ ಮುಖಂಡ ಗಂಗಣ್ಣ ಎಲಿ, ಬ್ಯಾಡಗಿ ಪಟ್ಟಣ ದಾದ್ಯಂತ ಇರುವ ಜಾನುವಾರು ಸಂಖ್ಯೆಗೆ ಅನುಗುಣವಾಗಿ ಪಟ್ಟಣದ ಬೆಟ್ಟದ ಮಲ್ಲೇಶ್ವರ ಗುಡ್ಡದ ಅಕ್ಕಪಕ್ಕದಲ್ಲಿ ಉಳಿದಿರುವ ಗೋಮಾಳ ಜಾಗೆ ಉಳಿದಿದೆ. ಆದರೆ, ಬಡವ ರಿಗೆ ನಿವೇಶನ ನೀಡುವ ಹೆಸರಲ್ಲಿ ಗೋಮಾಳ ಜಾಗೆ ಕಬಳಿಸುವ ಹುನ್ನಾರ ನಡೆದಿದೆ.ಇಂತಹ ಪ್ರಯತ್ನಕ್ಕೆ ಮುಂದಾದವರ ವಿರುದ್ಧ ರೈತ ಸಂಘ ಪ್ರತಿಭಟನೆ ನಡೆಸಲು ಮುಂದಾಗಲಿದೆ ಎಂದು ಎಚ್ಚರಿಸಿದರು.

ಆಶ್ರಯ ಯೋಜನೆಗಾಗಿ ಜಾನುವಾರು ಗಳಿಗೆ ಮೀಸಲಿಟ್ಟ ಜಾಗೆಯಲ್ಲಿನ 9.31 ಎಕರೆ ಜಾಗೆಯ ಎಲ್ಲಾ ಕಡತಗಳನ್ನು ಅನುಮೋದನೆಗಾಗಿ ತಾಲೂಕು ಆಡಳಿತ, ಸರ್ಕಾರಕ್ಕೆ ಕಳುಹಿಸಿಕೊಟ್ಟಿರುವುದಾಗಿ ಮಾಹಿತಿ ಲಭ್ಯವಾಗಿದೆ. ಬಡವರಿಗೆ ನಿವೇಶನ ನೀಡಲು ಸರ್ಕಾರ ಇಚ್ಛಿಸಿದಲ್ಲಿ ಮಲ್ಲೂರ ರಸ್ತೆಯಲ್ಲಿ ಈಗಾಗಲೇ ಖರೀದಿ ಮಾಡಿದಂತೆ, ಬೇರೆಡೆಗೆ ಜಾಗ ಖರೀದಿ ಮಾಡಿ ನಿವೇಶನ ಹಂಚಿಕೆ ಮಾಡಲಿ.ಅಷ್ಟಕ್ಕೂ ಸರ್ಕಾರವೇನು ಬಡತನದಲ್ಲಿಲ್ಲ.

ಅದರ ಬದಲು ಗೋಮಾಳಕ್ಕೆ ಕೈ ಹಾಕಿದಲ್ಲಿ ತೀವ್ರ ಸ್ವರೂಪದ ಹೋರಾಟ ಅನಿವಾರ್ಯ ಎಂದರು. ಬಸವರಾಜ ಸಂಕಣ್ಣನವರ ಮಾತನಾಡಿ, ಗೋಮಾಳ ಜಾಗೆ ಇತರೆ ಕಾರ್ಯಗಳಿಗೆ ದುರ್ಬಳಕೆ ಮಾಡಿಕೊಳ್ಳದಂತೆ ಈಗಾಗಲೇ ಹಲವು ಬಾರಿ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ. ಆದರೆ, ನಮ್ಮ ಮನವಿಗೆ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಯಾವುದೇ ಸ್ಪಂದನೆ ನೀಡಿಲ್ಲ. ಒಂದು ವೇಳೆ ಗೋಮಾಳ ಜಮೀನನ್ನು ಆಶ್ರಯ ಯೋಜನೆಗಾಗಿ ಬಳಕೆ ಮಾಡಿದಲ್ಲಿ ಪಟ್ಟಣದ ಎಲ್ಲಾ ಜಾನುವಾರುಗಳನ್ನು ತಾಲೂಕು ಕಚೇರಿಗ ನುಗ್ಗಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ಚಿಕ್ಕಪ್ಪ ಛತ್ರದ, ಪ್ರಶಾಂತ್‌ ಹಾಲನಗೌಡ್ರ, ರೈತ ಸಂಘದ ಸದಸ್ಯರು ಇದ್ದರು.

ಆಶ್ರಯ ನಿವೇಶನಕ್ಕೆ ಜಮೀನು ಮಂಜೂರಾತಿಗಾಗಿ ತಾಲೂಕು ಆಡಳಿತ ಕಳಿಸಿರುವ ಎಲ್ಲಾ ಕಡತಗಳನ್ನು ಮುಂದಿನ ಆ.8 ರೊಳಗೆ ವಾಪಸ್‌ ಪಡೆಯದಿದ್ದರೆ, ಆ.15ರ ಸ್ವಾತಂತ್ರ್ಯೋತ್ಸವದಂದು ತಾಲೂಕು ಆಡಳಿತದ ವಿರುದ್ಧ ಕಪ್ಪು ಪಟ್ಟಿ ಧರಿಸಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು.
ಗಂಗಣ್ಣ ಎಲಿ, ರೈತ ಮುಖಂಡ

Advertisement
Advertisement

Udayavani is now on Telegram. Click here to join our channel and stay updated with the latest news.

Next