Advertisement

ಗಾಳಿಯಲ್ಲಿ ಬಂದು ಹೋಗುವವರನ್ನು ನಂಬಬೇಡಿ: ರೆಡ್ಡಿ ಬಗ್ಗೆ ಕಳಕನಗೌಡ ಪರೋಕ್ಷ ಟೀಕೆ

07:03 PM Jan 13, 2023 | Team Udayavani |

ಗಂಗಾವತಿ: ಗಾಳಿಯಲ್ಲಿ ಬಂದು ಹೋಗುವವರನ್ನು ಕೊಪ್ಪಳ ಜಿಲ್ಲೆಯ ಜನರು ನಂಬಬೇಡಿ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಪಂಚಮಸಾಲಿ ಸಮಾಜದ ನಾಯಕ ಕಳಕನಗೌಡ ಪಾಟೀಲ್ ಪರೋಕ್ಷವಾಗಿ ಗಾಲಿ ಜನಾರ್ದನ ರೆಡ್ಡಿ ಕುರಿತು ಟೀಕೆ ಮಾಡಿದ್ದಾರೆ.

Advertisement

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೆತ್ತ ತಾಯಿ ಮತ್ತು ಪಕ್ಷಕ್ಕೆ ದ್ರೋಹ ಮಾಡಿ ಸ್ವಾರ್ಥಪರವಾದ ನಿಲುವುಗಳ ಮೂಲಕ ಜನರ ಮನಸ್ಸನ್ನು ಮರಳು ಮಾಡುವ ವ್ಯಕ್ತಿಗಳಿಂದ ಜನರು ಯಾವುದನ್ನು ನಿರೀಕ್ಷೆ ಮಾಡಬಾರದು. ಬದುಕಿನಲ್ಲಿ ಪ್ರಾಮಾಣಿಕತೆಯಿಂದ ದುಡಿಯೋ ವ್ಯಕ್ತಿಗಳನ್ನು ಗೆಲ್ಲಿಸಬೇಕು. ಬಳ್ಳಾರಿ ಜಿಲ್ಲೆಯಿಂದ ಗಂಗಾವತಿ ಕ್ಷೇತ್ರಕ್ಕೆ ಆಗಮಿಸಿ ಬರಿ ಮಾತುಗಳಲ್ಲಿ ಕೋಟಿ ರೂಪಾಯಿಗಳನ್ನು ತೋರಿಸಿ ಮಾತನಾಡುವ ವ್ಯಕ್ತಿಗಳು ಮೊದಲು ಪ್ರಾಮಾಣಿಕವಾಗಿ ಜನರ ಸೇವೆ ಮಾಡಲಿ. ನಂತರ ಚುನಾವಣೆಗೆ ಸ್ಪರ್ಧೆ ಮಾಡಿದರೆ ಜನರು ನಂಬುತ್ತಾರೆ ಎಂದು ಹೇಳಿದರು.

ಈ ಬಾರಿ ನಾನು ಯಲಬುರ್ಗಾ ಅಥವಾ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಕೇಳಲಿದ್ದು, ನೀಡಿದರೆ ಜನರ ವಿಶ್ವಾಸದಿಂದ ಗೆದ್ದು ತೋರಿಸುತ್ತೇನೆ. ನಿನ್ನೆ ಮೊನ್ನೆ ಗಂಗಾವತಿಗೆ ಬಂದವರು ಗಾಳಿಯಲ್ಲಿ ಗುಂಡು ಹೊಡೆಯುತ್ತಿರುವುದು ವ್ಯರ್ಥ ಪ್ರಯತ್ನ. ಇದನ್ನು ಮಾಡಬಾರದು. ಕಿಷ್ಕಿಂದಾ ಅಂಜನಾದ್ರಿಯ ಹನುಮಂತ ದೇವರು ಹಾಗೂ ಗ್ರಾಮ ದೇವತೆ ದುರ್ಗಮ್ಮ ಇರುವ ಸ್ಥಳವಾಗಿದ್ದು ಇಲ್ಲಿ ನಂಬಿಕೆ ದ್ರೋಹ ಅಪ್ರಮಾಣಿಕತೆ ಸುಳ್ಳು ಭರವಸೆ ನೀಡಿದವರಿಗೆ ಜಯವಿಲ್ಲ. ಇಲ್ಲಿ ಪ್ರಾಮಾಣಿಕತೆ ನಿಷ್ಠೆ ಗಳಿಗೆ ಗೆಲುವಿದ್ದು ಯಲಬುರ್ಗಾ ಅಥವಾ ಗಂಗಾವತಿಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲು ಬಿಜೆಪಿಯ ಹಿರಿಯ ಮುಖಂಡರು ತಮಗೆ ಅವಕಾಶ ಕೊಡಬೇಕು ಎಂದರು.

ಗಂಗಾವತಿ ಭತ್ತದ ಕಣಜ. ಹಸಿದವರಿಗೆ ಅನ್ನವನ್ನು ಕೊಡುವ ಜಾಗ ಈ ಜಾಗದಲ್ಲಿ ಸುಳ್ಳು ಅಪ್ರಮಾಣಿಕತೆ ಭ್ರಷ್ಟಾಚಾರಿಗಳಿಗೆ ಅವಕಾಶವಿಲ್ಲ. ಇದನ್ನು ಅನ್ಯ ಊರುಗಳಿಂದ ಬಂದು ಗಂಗಾವತಿ ಕ್ಷೇತ್ರದ ಮೇಲೆ ಕಣ್ಣಿಟ್ಟವರು ಅರ್ಥಮಾಡಿಕೊಳ್ಳಬೇಕು. ಪ್ರಾಮಾಣಿಕತೆಯ ಪ್ರತಿರೂಪದಂತಿರುವ ವಿಶ್ವದ ಶ್ರೇಷ್ಠ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಜೆಪಿ ಪಕ್ಷವನ್ನು ಮುನ್ನಡೆಸುತ್ತಿದ್ದು ಗಂಗಾವತಿ ಕ್ಷೇತ್ರದಲ್ಲಿ ಜನತೆ ಅಪ್ರಮಾಣಿಕ ಸ್ಪರ್ಧೆ ಮಾಡುವ, ಸುಳ್ಳು ಭ್ರಷ್ಟಾಚಾರಿಗಳು ಸಂವಿಧಾನ ಕಾನೂನು ಉಲ್ಲಂಘಿಸುವವರಿಗೆ ಅವಕಾಶ ನೀಡುವುದಿಲ್ಲ ಎಂದರು.

ಬಿಜೆಪಿ ಪ್ರಾಮಾಣಿಕ ಕಾರ್ಯಕರ್ತರನ್ನು ಹೊಂದಿದೆ. ಪಕ್ಷವನ್ನು ತೊರೆದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಇನ್ನು 25 ವರ್ಷ ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಆಡಳಿತ ನಡೆಸುವಂತೆ ಜನರ ಆಶೀರ್ವಾದವಿದ್ದು, ಪ್ರಧಾನಿ ನರೇಂದ್ರ ಮೋದಿ ಪಕ್ಷಕ್ಕೆ ಮತ್ತು ದೇಶಕ್ಕೆ ಸಿಕ್ಕಿರುವ ಅಪರೂಪದ ಪ್ರಾಮಾಣಿಕ ವ್ಯಕ್ತಿ. ಇದರಿಂದ ಬಿಜೆಪಿ ವಿಶ್ವದ ಹೆಚ್ಚು ಕಾರ್ಯಕರ್ತರಿರುವ ಪಕ್ಷವಾಗಿ ಹೊರಹೊಮ್ಮಿದೆ. ಯಾವ ಗಾಳಿ, ಹಣ ದೌರ್ಜನ್ಯಗಳು ಕೆಲಸ ಮಾಡುವುದಿಲ್ಲ. ಅನ್ಯ ಊರಿನಿಂದ ಬಂದವರು ಅರ್ಥ ಮಾಡಿಕೊಳ್ಳಬೇಕು. ಕೂಡಲೇ ಜಾಗ ಖಾಲಿ ಮಾಡಿ ಬಿಜೆಪಿಯವರಿಗೆ ಅವಕಾಶ ಕೊಡಬೇಕು. ಅದನ್ನು ಬಿಟ್ಟು ಹೆತ್ತ ತಾಯಿಗೆ ದ್ರೋಹ ಮಾಡುವ ಕೆಲಸ ಯಾರೂ ಸಹ ಮಾಡಬಾರದು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next