ಬೀಜಿಂಗ್: ಚೀನೀ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಮುಖ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವು ಜುನ್ಯೂ ಅವರು ವಿದೇಶಿಯರನ್ನು ಮುಟ್ಟದಂತೆ ಶನಿವಾರ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಚೀನಾದಲ್ಲಿ ಮೊದಲ ಮಂಕಿಪಾಕ್ಸ್ ಸೋಂಕಿನ ಪ್ರಕರಣ ದೃಢಪಟ್ಟ ಬಳಿಕ ಅವರು ಈ ರೀತಿ ಹೇಳಿದ್ದಾರೆ. ಚೀನಾದ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ವೈಬೊದಲ್ಲಿನ ಅವರ ಪೋಸ್ಟ್ ವಿವಾದವನ್ನು ಹುಟ್ಟುಹಾಕಿದೆ.
ತನ್ನ ಪೋಸ್ಟ್ ನಲ್ಲಿ ವು ಜುನ್ಯೂ ಅವರು, ವೈರಸ್ ಸೋಂಕನ್ನು ತಡೆಗಟ್ಟಲು ಸಾರ್ವಜನಿಕರು ಅನುಸರಿಸಬಹುದಾದ ಐದು ಶಿಫಾರಸುಗಳನ್ನು ಸೂಚಿಸಿದ್ದಾರೆ. ಅದರಲ್ಲಿ ‘ವಿದೇಶಿ ಪ್ರಜೆಗಳೊಂದಿಗೆ ಸಂಪರ್ಕ (ಸ್ಕಿನ್ ಟು ಸ್ಕಿನ್) ಹೊಂದಬಾರದು.’ ಎಂದಿದ್ದಾರೆ. ಮಂಗನ ಕಾಯಿಲೆಯ ಮೇಲ್ವಿಚಾರಣೆ ಮತ್ತು ತಡೆಗಟ್ಟುವಿಕೆಗೆ ಇದು ಮುಖ್ಯ ಎಂದು ಅವರು ಹೇಳಿದರು. ಅಂತಾರಾಷ್ಟ್ರೀಯ ಪ್ರಯಾಣ ಮತ್ತು ನಿಕಟ ಸಂಪರ್ಕದ ಮೂಲಕ ವೈರಸ್ ಹರಡುವ ಅಪಾಯವನ್ನು ಅವರು ಒತ್ತಿ ಹೇಳಿದರು.
ಚೀನಾದ ಚಾಂಗ್ಕಿಂಗ್ ನಗರದಲ್ಲಿ ಮೊದಲ ಮಂಕಿಪಾಕ್ಸ್ ಸೋಂಕಿನ ಪ್ರಕರಣ ದೃಢಪಟ್ಟಿದೆ. ಈತ ವಿದೇಶದಿಂದ ಚಾಂಗ್ಕಿಂಗ್ ನಗರಕ್ಕೆ ಬಂದವನಾಗಿದ್ದಾನೆ ಎನ್ನಲಾಗಿದೆ. ಆದರೆ ಈತ ವಿದೇಶಿ ಪ್ರಜೆಯೋ ಅಥವಾ ಚೀನಾದ ಪ್ರಜೆಯೋ ಎಂದು ತಿಳಿದಿಲ್ಲ.
ಇದನ್ನೂ ಓದಿ:ಬೀದಿ ನಾಯಿಯನ್ನು ಕಾರಿಗೆ ಕಟ್ಟಿ ವಿಕೃತಿ : ಜೀವ ಉಳಿಸಬೇಕಾದ ವೈದ್ಯನಿಂದಲೇ ಹೇಯ ಕೃತ್ಯ
ಚಾಂಗ್ಕಿಂಗ್ ಗೆ ಆಗಮಿಸಿದ ನಂತರ ಆತನನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಅಲ್ಲದೆ ಆತನ ಎಲ್ಲಾ ಪ್ರಾಥಮಿಕ ಸಂಪರ್ಕಿತರನ್ನು ಪ್ರತ್ಯೇಕಿಸಲಾಗಿದೆ. ಸದ್ಯ ವೈದ್ಯಕೀಯ ನಿಗಾದಲ್ಲಿದ್ದಾನೆ ಎಂದು ನಗರಸಭೆಯ ಆರೋಗ್ಯ ಆಯೋಗ ತಿಳಿಸಿದೆ.
ಮಂಕಿಪಾಕ್ಸ್ ಪ್ರಕರಣಗಳು ಮೇ ತಿಂಗಳಲ್ಲಿ ಪ್ರಪಂಚದಾದ್ಯಂತ ಹರಡಲು ಆರಂಭವಾಯಿತು. ಇದುವರೆಗೂ ಸುಮಾರು 90 ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ.