ಮಾತಿನಿಂ ನಗೆನುಡಿಯು ಮಾತಿನಿಂ ಹಗೆಕೊಲೆಯು ಮಾತಿನಿಂ ಸರ್ವ ಸಂಪದವು ಜಗದೊಳಗೆ ಮಾತೆ ಮಾಣಿಕ್ಯವು ಸರ್ವಜ್ಞ ಎಂಬ ವಚನವು ಮಾತಿನ ಅರ್ಥವನು ಸವಿಸ್ತಾರವಾಗಿ ತಿಳಿಸುತ್ತದೆ. ಮಾತು ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಮಾತು, ಹಿತಮಿತವಾಗಿರಬೇಕು, ಕೇಳುವ ಕರ್ಣಕೆ ಖುಷಿ ತರಬೇಕ, ಮನಸ್ಸಿಗೆ ಆಹ್ಲಾದ ನೀಡಿ ಮುದತರಿಸಬೇಕು ಈ ರೀತಿ ಮಾತನ್ನು ಆಡಬೇಕೆಂದು ಬಲ್ಲವರು ಹೇಳುತ್ತಾರೆ.
ಕೆಲವೊಬ್ಬರಿಗೆ ಇದೊಂದು ಅಸ್ತ್ರ ಇನ್ನೂ ಕೆಲವರಿಗೆ ಇದು ಬಲು ಅಸಾಧ್ಯ ವಸ್ತು. ಇದನ್ನು ಗಳಿಸಿದರೆ ಎಂತಹ ಪ್ರಸಂಗವನ್ನಾದರೂ ಗೆಲ್ಲುವ ಚಾತುರ್ಯ ಇದರಲ್ಲಿದೆ. ನಮ್ಮಲ್ಲಿ ಅಪ್ರತಿಮ ವಾಕ್ಚಾತುರ್ಯವಿದ್ದಾಗ ಮಾತ್ರ ಎದುರಾಗುವ ಪ್ರಸಂಗಗಳನ್ನು ಸಲೀಸಾಗಿ ಎದುರಿಸಲು ಸಾಧ್ಯ. ಏನು ಇಲ್ಲದೆ ಖಾಲಿತಲೆಯಲ್ಲಿ ಮಾತುಗಳು ಹುಟ್ಟುವುದು ಅಸಾಧ್ಯ, ಅದು ಮರಳಿನಲ್ಲಿ ನೀರಿನ ಒರತೆಯನ್ನು ಹುಡುಕಿದಂತೆ.
ಒಬ್ಬೊಬ್ಬರಿಗೂ ದೇವರು ಒಂದೊಂದು ಕಲೆಯನ್ನು ವರವಾಗಿ ನೀಡಿರುತ್ತಾನೆ. ಸಾಹಿತ್ಯ,ಸಂಗೀತ,ಬರವಣಿಗೆ, ಚಿತ್ರಕಲೆ ಹೀಗೆ ಇಂತಹ ಕಲೆಗಳಲ್ಲಿ ಈ ಮಾತಿನ ಕಲೆ ಕೂಡ ಒಂದಾಗಿದೆ. ಕೆಲವೊಬ್ಬರಿಗೆ ಮಾತಾಡಲು ಬರುವುದಿಲ್ಲ , ಕೆಲವೊಬ್ಬರಿಗೆ ಮಾತೆ ಮುಗಿಸಲು ಬರುವುದಿಲ್ಲ, ಹೀಗಿರುವಾಗ ಎಲ್ಲಿ, ಹೇಗೆ ಮಾತಾಡಬೇಕು..? ಎಷ್ಟು ಮಾತಾಡಬೇಕು? ಎಂದು ಮೊದಲೆ ಅಂದಾಜಿಸಿ ಮಾತಾಡಲು ಶುರುಮಾಡಬೇಕು.
ಮಾತು ಅತಿರೇಕಕ್ಕೆ ಏರಿದರೆ ತಲೆಗಳೆ ಉರುಳಬಹುದು, ಯುದ್ಧ ನಡೆಯಬಹುದು,ಇನ್ನೂ ಏನೇನೋ ಆಗಬಹುದು. ಜಗಜ್ಯೋತಿ ಬಸವಣ್ಣನವರೆ ಹೇಳಿಲ್ಲವೆ ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ನುಡಿದರೆ ಲಿಂಗಮೆಚ್ಚಿ ಹೌದೌದೆನಬೇಕು ಎಂದು ತಮ್ಮ ವಚನದಲ್ಲಿ ಮಾತಿನ ಮಹತ್ವವನ್ನು ಸಾರಿ ಸಾರಿ ಹೇಳುತ್ತಾರೆ. ಹಾಗಾಗಿ ನಾವು ನೀವೆಲ್ಲ ಅತಿಯಾಗಿ ಮಾತಾಡದೆ ಮಿತಭಾಷಿಗಳಾಗೋಣ. ಅನುಭವಿಗಳ ನುಡಿಗಳನು ಪಾಲಿಸೋಣ.
-ಶಂಕರಾನಂದ
ಹೆಬ್ಟಾಳ