ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ವಿರುದ್ಧ ಸಮರ ಸಾರಲಾಗಿದೆ. ಕೊರೊನಾ ಕಟ್ಟಿಹಾಕಲು ಲಸಿಕೆ ಏಕಮಾತ್ರ ಸದ್ಯಕ್ಕಿರುವ ಪರಿಹಾರ ಎಂದು ಮನಗಂಡಿರುವ ಕೇಂದ್ರ ಸರಕಾರ 2021ರ ಜ.16ರಂದು ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನ ಆರಂಭಿಸಿದೆ. ಹಲವು ಸವಾಲುಗಳ ಜತೆಜತೆ ಲಸಿಕಾ ಅಭಿಯಾನ ದೇಶವ್ಯಾಪಿ ಯಶಸ್ವಿಯಾಗಿ ನಡೆಯುತ್ತಿದೆ. ಈವರೆಗೆ ದೇಶಾದ್ಯಂತ 18 ಕೋಟಿಗೂ ಹೆಚ್ಚು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕಾ ಅಭಿಯಾನಕ್ಕೆ ನಾಲ್ಕು ತಿಂಗಳು ತುಂಬಿವೆ. ಆದರೂ ಲಸಿಕೆ ಬಗ್ಗೆ ಅನುಮಾನ, ಅಪಪ್ರಚಾರ ಮಾತ್ರ ನಿಂತಿಲ್ಲ.
ಕೊರೊನಾ ಲಸಿಕೆ ಪಡೆದವರು 2 ವರ್ಷದಲ್ಲೇ ಸಾವನ್ನಪ್ಪುತ್ತಾರೆ ಎಂಬ ಫ್ರಾನ್ಸ್‌ನ ನೊಬೆಲ್ ಪುರಸ್ಕೃತ ಲಕ್ ಮಂಟಾನಿಯರ್ ಹೇಳಿಕೆ ಜಾಗತಿಕವಾಗಿ ಭಾರಿ ಸದ್ದು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ಹುಟ್ಟು ಹಾಕಿದೆ. ಇದು ಸುಳ್ಳು ಸುದ್ದಿ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಅದೇ ರೀತಿ “ವೈದ್ಯಕೀಯ ಪ್ರಯೋಗಗಳು” (ಕ್ಲಿನಿಕಲ್ ಟ್ರಯಲ್) ಪೂರ್ಣಗೊಳಿಸದೆ ಭಾರತದಲ್ಲಿ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಇದು ಮಾನವ ಜೀವಕ್ಕೆ ಅಪಾಯಕಾರಿ. ಹಾಗಾಗಿ ವ್ಯಾಕ್ಸಿನೇಶನ್ ಸ್ಥಗಿತಗೊಳಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ
ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಬಂದಿತ್ತು. ಇದನ್ನು ಕಾನೂನು ನೆಲೆಗಟ್ಟಿನಲ್ಲಿ ಹೈಕೋರ್ಟ್ ವಜಾಗೊಳಿಸಿದೆ.
ಲಸಿಕೆಗಳ ಕ್ಲಿನಿಕಲ್ ಟ್ರಯಲ್ ಪೂರ್ಣಗೊಂಡಿಲ್ಲ. ಯಾವ ಕಾನೂನಿನ ಅಡಿಯಲ್ಲಿ ಕೇಂದ್ರ ಸರಕಾರ ಲಸಿಕೆ ಹಾಕಿಸಿಕೊಳ್ಳಲು ಒಪ್ಪಿಗೆ ನೀಡಿದೆ ಎಂದು ಸ್ಪಷ್ಟತೆ ಇಲ್ಲ. ಇದು “ನ್ಯೂ ಡ್ರಗ್ಸ್ ಆಂಡ್ ಕ್ಲಿನಿಕಲ್ ಟ್ರಯಲ್ಸ್ ರೂಲ್ಸ್ -2019 ಹಾಗೂ “ಅನುವಂಶಿಕ ಧಾತು ಚಿಕಿತ್ಸಾ ಉತ್ಪನ್ನಗಳಿಗೆ” ಸಂಬಂಧಿಸಿದ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್) ಇದರ ರಾಷ್ಟ್ರೀಯ ಮಾರ್ಗಸೂಚಿಗಳಿಗೆ ತದ್ವಿರುದ್ಧವಾಗಿದೆ. ಕೊರೊನಾ ಲಸಿಕೆ ಪಡೆದುಕೊಂಡವರಲ್ಲಿ ವಿವಿಧ 12 ಬಗೆಯ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಭಾರತ್ ಬಯೋಟೆಕ್ ಈ ವರ್ಷದ ಆರಂಭದಲ್ಲಿ ಹೇಳಿತ್ತು ಎಂಬ ವೈದ್ಯಕೀಯ ಮತ್ತು ಕಾನೂನು ಅಂಶಗಳನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಪ್ರಸ್ತಾವಿಸಲಾಗಿದೆ.
ಹಾಗೆ ನೋಡಿದರೆ ಭಾರತ ಸೇರಿಕೊಂಡಂತೆ ಜಾಗತಿಕ ಮಟ್ಟದಲ್ಲಿ ಲಸಿಕೆ ಲಭ್ಯವಾದಾಗಿನಿಂದ ವೈಜ್ಞಾನಿಕ ಮತ್ತು ವೈದ್ಯಕೀಯ ತರ್ಕಗಳು ಮುನ್ನೆಲೆಗೆ ಬಂದಿದ್ದವು. ಕಾಂಗ್ರೆಸ್ ಲಸಿಕೆಯನ್ನು ವಿರೋಧಿಸುತ್ತಿದೆ ಎಂಬ ರಾಜಕೀಯ ಟೀಕೆಗಳು ಕೇಳಿ ಬಂದಿದ್ದವು. ಪೋಲಿಯೋ ಲಸಿಕೆ ಬಗೆಗಿನ ಅನುಮಾನಗಳು ನಿವಾರಿಸಲು ದಶಕಗಳೇ ಬೇಕಾಯಿತು. ಇತ್ತೀಚೆಗೆ “ಹ್ಯೂಮನ್ ಪ್ಯಾಪಿಲೋಮಾ ವೈರಸ್” (ಎಚ್‌ಪಿವಿ) ಸೋಂಕಿಗೆ ಲಸಿಕೆ ಬಂದಾಗಲೂ ಹಲವು ಸಂದೇಹಗಳು ವ್ಯಕ್ತವಾಗಿದ್ದವು.
ಲಸಿಕೆ ಅನ್ನುವುದು ಸಂಪೂರ್ಣವಾಗಿ ವೈಜ್ಞಾನಿಕ ಮತ್ತು ವೈದ್ಯಕೀಯ ಅಂಶಗಳನ್ನು ಒಳಗೊಂಡಿರುವ ಪ್ರಕ್ರಿಯೆ. ಇದನ್ನು ಬೇರೆ ತರ್ಕಗಳಿಗೆ ತಾಳ ಹಾಕುವುದು ಉಚಿತವಲ್ಲ. ಇಂತಹ ತರ್ಕಗಳಿಂದ ಸರಕಾರದ ಪ್ರಯತ್ನಗಳಿಗೆ ಹಿನ್ನಡೆ ಆಗುವುದರ ಜತೆಗೆ ಸಾರ್ವಜನಿಕರಲ್ಲಿ ವಿಶ್ವಾಸ ಕುಂದಿಸುವ ಕೆಲಸ ಆಗುತ್ತದೆ. ಕೊರೊನಾ ವಿರುದ್ಧ ಇಡೀ ದೇಶ ಒಂದಾಗಿ ನಿಂತಿರುವಾಗ ಲಸಿಕೆಗಳ ಬಗ್ಗೆ ಅನುಮಾನ, ಅಪಪ್ರಚಾರ ತರವಲ್ಲ.