Advertisement

ಅವಕಾಶಗಳ ದುರುಪಯೋಗ ಆಗದಂತೆ ಬದುಕಿರಿ…

07:35 PM Aug 16, 2020 | Karthik A |

ಸ್ವಾತಂತ್ರ್ಯ – ಇದು ಅಗಾಧ ವಾದ ಪರಿಕಲ್ಪನೆಯನ್ನು ಒಳಗೊಂಡಂತಹ ಒಂದು ಶಬ್ದ.

Advertisement

ಇದು ಕೇವಲ ಶಬ್ದವಲ್ಲ ಜೀವನದ ಅವಿಭಾಜ್ಯ ಅಂಗ.

ಸ್ವಾತಂತ್ರ್ಯ ಬೇಕು ಎಂದು ಪ್ರತಿ ದೇಶ, ಪ್ರತಿ ರಾಜ್ಯ, ಪ್ರತಿ ಮಾನವ, ಇಷ್ಟೇ ಯಾಕೆ ಬದುಕುವ ಪ್ರತಿಯೊಂದು ಜೀವಿಯೂ ಹಂಬಲಿಸುತ್ತದೆ.

ಸ್ವಾತಂತ್ರ್ಯದಿಂದ ಬದುಕುವುದು ಪ್ರತಿಯೊಬ್ಬರ ಹಕ್ಕು ಕೂಡ ಆಗಿದೆ.

ಎಲ್ಲರೂ ಬಯಸುವಂತಹ ಈ ಸ್ವಾತಂತ್ರ್ಯ ವ್ಯಕ್ತಿಗತವಾದದ್ದು ಮತ್ತು ಸರ್ವವಿಧವಾದದ್ದು.

Advertisement

ಜತೆಗೆ ಇದು ಸಮಷ್ಟಿಯೂ ಹೌದು. ಇಲ್ಲಿ ಆರೋಗ್ಯಕರ ಚರ್ಚೆಗೆ, ವಿಷಯ ಮಂಡನೆಗೆ, ಬದುಕುವ ವಿಧಾನಕ್ಕೆ ಅವಕಾಶವಿದೆ.

ಈ ಅವಕಾಶಗಳ ದುರುಪಯೋಗ ಆಗದಂತೆ ಬದುಕುವುದೇ ಜೀವನ. ಆದರೆ ಇಂದು ಸ್ವಾತಂತ್ರ್ಯವನ್ನು ಜನರು ಸ್ವೇಚ್ಛಾಚಾರ ಎಂದು ಅಪಾರ್ಥ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ. ಮೇಲ್ನೋಟಕ್ಕೆ ಇವೆರಡೂ ಒಂದೇ ಎಂದೆನಿಸಿದರೂ ಸರಿಯಾಗಿ ಗಮನಿಸಿದರೆ ಸ್ವೇಚ್ಛಾಚಾರಕ್ಕೆ ಮತ್ತು ಸ್ವಾತಂತ್ರ್ಯಕ್ಕೆ ಅಜಗಜಾಂತರವಿದೆ. ಪರರ ಗುಲಾಮನಾಗಿ ಬದು ಕದೆ ಇರುವುದು ಒಂದೆಡೆ ಆದರೆ, ಹಕ್ಕು ಮತ್ತು ಕರ್ತವ್ಯದ ಭಾದ್ಯತೆಗೆ ಒಳಗಾಗಿ ಬದುಕುವುದು ಇನ್ನೊಂದೆಡೆ. ಇದು ಎರಡು ವಿಭಿನ್ನ ಪರಿಕಲ್ಪನೆ.

ಇಲ್ಲಿ ಸ್ವಾತಂತ್ರ್ಯ ಎಲ್ಲಿದೆ ಅಂತ ಆಲೋಚನೆ ಮಾಡಿದ್ರೆ ಎರಡು ಕಡೆಗಳಲ್ಲೂ ಇದೆ. ಆದರೆ ಹೇಗೆ? ಎಲ್ಲಿ ಎನ್ನುವುದು ಮತ್ತೂಂದು ಪ್ರಶ್ನೆ. ಇದು ಅರ್ಥವಾಗಬೇಕಾದರೆ ಸ್ವಾತಂತ್ರ್ಯ ಸ್ವೇಚ್ಛಾಚಾರದ ಸೆರಗಿನೊಳಗೆ ಬಂಧಿಯಾಗಿಲ್ಲ ಅನ್ನುವ ವಿಚಾರವನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಪರರ ಗುಲಾ ಮನಾಗಿ ಇರದೆ ಇರುವುದು ಮತ್ತು ಸ್ವೇಚ್ಛಾಚಾರವಲ್ಲದ ನಡುವಣ ಒಂದು ಸಹಜ ಸ್ಥಿತಿಯೇ ಸ್ವಾತಂತ್ರ್ಯ.

ಇದಕ್ಕೊಂದು ಸಣ್ಣ ಉದಾಹರಣೆ, ಹಗಲು ರಾತ್ರಿ ಕಷ್ಟಪಟ್ಟು ಬೆಳೆಸಿದ ನನ್ನ ಅಡಿಕೆಯ ತೋಟ. ಇಲ್ಲಿ ನಾನು ಸ್ವತಂತ್ರ. ಯಾರ ಗುಲಾಮನು ಅಲ್ಲ ಅನ್ನುವ ಆಲೋಚನೆಯಲ್ಲಿ ಕೈ ಬೀಸಿ ನಡೆಯುತ್ತೇನೆ ಅಂತ ಹೊರಟರೆ ಪಕ್ಕದಲ್ಲಿ ಬೆಳೆದಿರುವ ಮರಗಳಿಗೆ ಕೈ ಹೊಡೆಸಿಕೊಂಡು ನಾನೇ ನೋವನ್ನು ಅನುಭವಿಸಬೇಕಾಗುತ್ತದೆ. ತೋಟದಲ್ಲಿ ನಡೆಯುವುದಕ್ಕೂ ಒಂದು ಮಿತಿಯಿದೆ ಮತ್ತೆ ರೀತಿ ಇದೆ.

ಇಂದಿನ ಯುವಪೀಳಿಗೆ ಸ್ವ ಇಚ್ಛೆಯಂತೆ ಬದುಕುವುದನ್ನು ಸ್ವಾತಂತ್ರ್ಯ ಎಂದು ನಂಬಿ ವರ್ತಿಸುತ್ತಿರುವುದು ಬೇಸರದ ಸಂಗತಿ. ತನ್ನ ಕಾಲ ಮೇಲೆ ತಾನು ನಿಂತು ಸುಂದರವಾದ ಬದುಕನ್ನು ಕಟ್ಟಿಕೊಳ್ಳುವುದು ಎಂಬ ಆಲೋಚನೆಯಲ್ಲಿ ಸಂಬಂಧ, ಪ್ರೀತಿ, ಬಾಂಧವ್ಯಕ್ಕೆ ಬೆಲೆ ನೀಡದೇ ಬದುಕುವ ಸ್ವಾತಂತ್ರ್ಯವನ್ನು ಕಲ್ಪಿಸಿಕೊಳ್ಳುವುದು ನಿಜವಾದ ಸ್ವಾತಂತ್ರ್ಯವಲ್ಲ. ಎತ್ತರಕ್ಕೆ ಹಾರಬೇಕಾದಾಗ ನಾವು ಕತ್ತರಿಸಿಕೊಳ್ಳಬೇಕಾದ್ದು ಬಂಧಗಳನ್ನೇ ಹೊರತು, ಹಾರಲು ಬೇಕಾದ ಇಂಧನಗಳನ್ನು ನೀಡುವ ಅನುಬಂಧಗಳನ್ನಲ್ಲ ಎಂಬುದು ಸ್ಪಷ್ಟವಾಗಿ ಅರ್ಥವಾಗಬೇಕು. ಅದೇ ರೀತಿ ದೊಡ್ಡವರು ಆಲೋಚಿಸಬೇಕು, ಸ್ವಾತಂತ್ರ್ಯ ನೀಡಿದೊಡನೆ ಮಕ್ಕಳು ಹಾಳಾಗುವುದಿಲ್ಲ.

ನಿಯಮಿತವಾದ ಪರಿಧಿಯೊಳಗೆ ಇರಿಸಿದಾಕ್ಷಣ ಮಕ್ಕಳು ಸರಿ ಹಾದಿಯನ್ನೇ ಆಯ್ಕೆ ಮಾಡುತ್ತಾರೆ ಎನ್ನುವುದು ಶುದ್ಧ ಸುಳ್ಳು. ಯಾವಾಗ ಹಿರಿಯರಲ್ಲೇ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರದ ನಡುವಣ ವ್ಯತ್ಯಾಸದ ಅರಿವು ಮೂಡು ವುದಿಲ್ಲವೋ ಅಲ್ಲಿಯ ತನಕ ಮಕ್ಕಳ ಮನದಲ್ಲಿ ಸ್ವಾತಂತ್ರ್ಯದ ಬಗೆಗಿನ ಸರಿ ಯಾದ ಪರಿಕಲ್ಪನೆಯನ್ನು ಮೂಡಿಸುವುದು ಕಷ್ಟ.

ಒಂದೊಮ್ಮೆ ಭರಪೂರ ಸಂತಸವನ್ನು ನಮ್ಮೆಡೆಗೆ ಹರಿಸಿದಂತೆ ಭಾಸವಾದರೂ ಜೀವನದ ಪರಮ ಗುರಿಯಾದ ಮನಃಶಾಂತಿಯನ್ನು ನೀಡುವುದು ಹಕ್ಕು ಕರ್ತವ್ಯಗಳ ಭಾದ್ಯತೆ ಒಳಪಟ್ಟು ನಡೆಯುವ ಸ್ವಾತಂತ್ರ್ಯದಲ್ಲಿ ಮಾತ್ರ. ಇದು ಬಂಧನವಲ್ಲ ಜೀವನದ ರೀತಿ.
ನಾವು ನಿರ್ಭೀತಿಯಿಂದ ಬದುಕಲು ಮನೆ ಬೇಕು. ನಾಲ್ಕು ಗೋಡೆಗಳ ಮಧ್ಯೆ ಬದುಕುವುದು ಬಂಧನ ಎಂದು ವಿಶಾಲವಾದ ಮೈದಾನದಲ್ಲಿ ಬದುಕಲು ಸಾಧ್ಯ ಇದೆಯಾ? ಹಾಗೆ ಸ್ವಾತಂತ್ರ್ಯ ಕೂಡ ಹಕ್ಕು ಕರ್ತವ್ಯ ರೀತಿ ನೀತಿಗಳೆಂಬ ನಾಲ್ಕು ಗೋಡೆಯ ನಡುವಿನ ಜೀವನ. ಸ್ವೇಚ್ಛಾಚಾರ ಮೈದಾನದಲ್ಲಿ ನಡೆಸುವ ಬದುಕು. ಅಲ್ಲಿಯೂ ಬದುಕಬಹುದು ಆದರೆ ನೆಮ್ಮದಿ ಮತ್ತು ಮನಃಶಾಂತಿ ಎಲ್ಲಿ ಅನ್ನುವುದನ್ನು ನಾವು ಅರ್ಥೈಸಿಕೊಳ್ಳಬೇಕು.

ಸ್ವಾತಂತ್ರ್ಯ ಎನ್ನುವುದು ಸ್ವೇಚ್ಛಾಚಾರ ವನ್ನು ಮೀರಿರುವಂತಹದ್ದು. ನಮ್ಮ ಸ್ವಾತಂತ್ರ್ಯ ಪರರ ಸ್ವಾತಂತ್ರ್ಯಕ್ಕೆ ಕುತ್ತು ಬರಬಾರದು. ಕರ್ತವ್ಯ, ರೀತಿ ನೀತಿಗಳ ಜತೆಗೆ ಅನುಭವಿಸುವ ಸ್ವಾತಂತ್ರ್ಯ ನಿಜವಾದ ಸ್ವಾತಂತ್ರ್ಯ. ನನ್ನ ದೃಷ್ಟಿಕೋನದಲ್ಲಿ ಇದು ನಿಜವಾದ ಸ್ವಾತಂತ್ರ್ಯದ ಪರಿಕಲ್ಪನೆ.

 ಸಾಯಿ ಶ್ರೀಪದ್ಮ ಡಿ. ಎಸ್‌., ಸಂತ ಫಿಲೋಮಿನಾ ಕಾಲೇಜು, ಮೈಸೂರು

 

Advertisement

Udayavani is now on Telegram. Click here to join our channel and stay updated with the latest news.

Next