ಕರುಣೆಯೇ ಬಾರದವರೆದುರು ಕಣ್ಣೀರು ಹಾಕಿದರೆ ಫಲವೇನು? ಮೌನವೇ ಆಭರಣವಾಗಿ ಧರಿಸುವವರ ಬಳಿ ಮಾತಾಡಿದರೆ ಫಲವೇನು? ಹೌದು, ನಮ್ಮ ಪರಿಸ್ಥಿತಿ, ಗತಿಯನ್ನು ಕಂಡು ಯಾರು ನಮ್ಮ ಸಹಾಯಕ್ಕೆ ಬರುತ್ತಾರೋ, ಯಾರು ಸಹಾಯ ಹಸ್ತ ಚಾಚಿದಾಗ ಸಹಕಾರ ಮಾಡುವರೋ, ನರಳುವ ಮನಕ್ಕೆ ನೆರಳಂತೆ ಸಾಂತ್ವನ ನೀಡಿ ಧೈರ್ಯ ತುಂಬಿ ಭಾವನೆಗೆ ಬೆಲೆ ನೀಡುವರೋ ಅಂತವರ ಸ್ನೇಹವನ್ನು ನಾವೆಂದೂ ಮರೆಯ ಬಾರದುಅವರನ್ನು ಎಂದೂ ಕಳೆದುಕೊಳ್ಳಬಾರದು.
ಧೃತಿಗೆಟ್ಟ ಮನದ ರೋಧನೆ- ವೇದನೆಗೆ ವಿಶ್ವಾಸದ ಆಲಾಪನೆ ನೀಡುವ ಗೆಳೆಯ- ಗೆಳತಿಯರು ಸಿಗುವುದು ಕಷ್ಟ. ಇಷ್ಟದ ಸಮಯದಲ್ಲಿ ಜೊತೆಯಲ್ಲಿರುವುದಲ್ಲ, ಸಂಕಷ್ಟದ ಸಮಯದಲ್ಲಿ ನೆರಳಾಗಿ ನಿಲ್ಲುವುದು ಉತ್ತಮ ಆಚಾರ. ನಮ್ಮ ಒಡನಾಟದಲ್ಲಿ ಒಡನಾಡಿಯಾಗಿ ಹಲವಾರು ಗೆಳೆಯರು ಇದ್ದರೂ, ಹಲವರೊಂದಿಗೆ ಗೆಳೆತನದ ಬೆಸುಗೆ ಬೆಸೆದಿದ್ದರೂ, ಅವರು ನೋವಲ್ಲಿ ಹೆಗಲಾಗುವರೇ? ನೋವಿಗೆ ಔಷಧಿಯಾಗುವರೇ? ಇದೇ ಯಕ್ಷಪ್ರಶ್ನೆ!
ಯಾರು ನಮ್ಮ ನಿಜವಾದ ಸ್ನೇಹಿತರೆಂದು ತಿಳಿಯಲು ಅಗ್ನಿಪರೀಕ್ಷೆಯ ಅಗತ್ಯವಿಲ್ಲ. ಬದಲಾಗಿ ಕಷ್ಟ, ನೋವೆಂಬ ಕಿರು ಅಧ್ಯಾಯ ನಮ್ಮ ಹತ್ತಿರ ಹೆಜ್ಜೆ ಹಾಕಿದಾಗ ಯಾರು ನನ್ನವರೆಂಬ ಪ್ರಶ್ನೆಗೆ ಸರಳವಾಗಿಯೇ ಉತ್ತರ ದೊರೆಯುತ್ತದೆ. ನೋವಿರಲಿ ನಲಿವಿರಲಿ, ನಗುವಿರಲಿ ಅಳುವಿರಲಿ, ಬಡತನ ಇರಲಿ ಸಿರಿತನ ಇರಲಿ, ಯಾವುದೇ ಸಂದರ್ಭದಲ್ಲೂ ಸ್ನೇಹದ ಪ್ರತಿಬಿಂಬಕ್ಕೆ ಏನೇ ತೊಂದರೆಯಾದರೂ ಮರುಯೋಚಿಸದೆ ನಾನಿದ್ದೇನೆ ಎಂಬ ಧೈರ್ಯದ ಮಾತು, ಇರುಳಲ್ಲಿ ಬೆಳಕು ತೋರಿದಂತೆ, ಬಾಯಾರಿದ ಗಂಟಲಿಗೆ ನೀರು ಸಿಕ್ಕಿದಂತೆ, ಸಾಗರದ ಪಯಣಿಗನಿಗೆ ತೀರ ಕಂಡಂತೆ, ಸಂತಸ, ಆತ್ಮಬಲ ಮೂಡುತ್ತದೆ. ಆತ್ಮಬಲವು ಗೆಲುವಾಗಿ ಅವನ ಬದುಕ ಪುಟಗಳಲ್ಲಿ ನೂತನ ಅಧ್ಯಾಯ ಬರೆಯುತ್ತದೆ. ನೋವಲ್ಲಿ ಸ್ಪಂದಿಸಿದ ಕಾರಣ ಸಾವಿನ ದವಡೆಯಿಂದ ಹೊರಬಂದ ಉದಾಹರಣೆಗಳು ನಮ್ಮ ಸನಿಹವೇ ವಿಹರಿಸುತ್ತದೆ.
ಹಣ ನೋಡಿ ಸ್ನೇಹ ಬಯಸಬೇಡಿ, ಖರೀದಿಸಬೇಡಿ. ಸದ್ಗುಣ, ಅವರೊಳಗಿನ ಭಾವನೆ, ತಿಳಿದು ಅದನ್ನು ತಿಳಿಯದೆ ತಳ್ಳಿ ಹಾಕದೆ ಅದರ ಅರ್ಥವನ್ನು ತಿಳಿದು ಸ್ನೇಹ ಸಾಧಿಸಿ. ಹಣ ನೋಡಿ ಹುಟ್ಟುವ ಪ್ರೀತಿಯು ನೀರ ಮೇಲಿನ ಗುಳ್ಳೆಯಾದರೆ, ಗುಣ ನೋಡಿ ಹುಟ್ಟುವ ಪ್ರೀತಿ ಹರಿಯುವ ನದಿಯಂತೆ. ಆ ನದಿಯು ವಿಶ್ವಾಸ, ಸಂಬಂಧ, ಸಹಾಯವೆನ್ನುವ ಮಹಾಸಾಗರವ ಸೇರುತ್ತದೆ. ಗೆದ್ದಾಗ ಬೆನ್ನು ತಟ್ಟುವ, ಚಪ್ಪಾಳೆ ತಟ್ಟುವ ಕೈಗಳು ಸೋತಾಗ ಕೈ ಬಿಡದಿರಲಿ. ಗೆದ್ದಾಗ ನಮ್ಮವರೆಂಬ ಭಾವಾಂತರಂಗ ಅಭಿಮಾನದ ಶಿಖರ, ಸೋತಾಗ ನೆಲಕಚ್ಚದಿರಲಿ, ಹುಸಿಯದಿರಲಿ ಗೆಳೆಯರೇ.
ಗಿರೀಶ್ ಪಿ.ಎಂ.
ವಿ.ವಿ. ಮಂಗಳೂರು