ಒಂದು ದಿನ ಬೆಳಗ್ಗೆ “ಸಾವಿಲ್ಲದ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ. ನಿನ್ನ ಮಗುವನ್ನು ಬದುಕಿಸಿ ಕೊಡುತ್ತೇನೆ ‘ ಎಂದು ಬುದ್ಧ ಕಿಸಾ ಗೋತಮಿಗೆ ಹೇಳಿದ ಮಾತು ನೆನಪಾಯ್ತು. ಹುಟ್ಟಿದ ಮೇಲೆ ಸಾವು ಎಂಬುದು ಅನಿವಾರ್ಯ ಎಂಬುದನ್ನು ಸೂಚ್ಯವಾಗಿ ವಿಷಯ ದಾಟಿಸಿದ್ದು ಬುದ್ಧನ ಜಾಣ್ಮೆ. ಅರ್ಧಗಂಟೆ ಕೂತು ಪ್ರವಚನ ಮಾಡಲಿಲ್ಲ ಗೌತಮ, ಬದಲಿಗೆ ಬೇರೊಂದು ರೀತಿ ವಿಷಯವನ್ನು ಅರುಹಿದ. ತನ್ನ ಕೂಸು ಬದುಕಬಹುದು ಎಂಬ ಆಶಯ ಹೊತ್ತ ಗೋತಮಿ ಬೇರೇನನ್ನೂ ಆಲೋಚಿಸದೇ ಮನೆ ಮನೆ ತಿರುಗಿ ಸೋತ ಮೇಲೆ ಅವಳಿಗೆ ಗೌತಮನ ಮಾತಿನ ಮರ್ಮ ಅರಿವಾಗಿ ಜ್ಞಾನಕ್ಕೆ ಶರಣಾದಳು.
ಬುರುಗು ಎಂದರೇನು ಗೊತ್ತೇ? ಹೌದು ಇನ್ನೂ ವಾಶಿಂಗ್ ಮೆಶಿನ್ ದಾಳಿ ಇಡದ ದಿನಗಳಲ್ಲಿ ಒಂದು ಬಕೆಟ್‌ನಲ್ಲಿ ಬಟ್ಟೆ ಒಗೆಯುವ ಪೌಡರ್ ಹಾಕಿ, ನಲ್ಲಿ ನೀರು ಬಿಟ್ಟಾಗ ಹುಟ್ಟುಕ್ಕುವುದೇ ಬುರುಗು. ಅದರೊಂದಿಗೆ ಆಟವಾಡುವುದೇ ಮಜಾ. ಹಾಗೆ ಹುಟ್ಟಿದ ಬುರುಗನ್ನು ಹಾಗೆಯೇ ಬಿಟ್ಟರೆ ಅದು ಸ್ವಲ್ಪ ವೇಳೆಯ ಅನಂತರ ಇಳಿದ ಮೇಲೆ ಅಲ್ಲಿ ಉಳಿಯುವ ಸೋಪನ್ನು ನುಂಗಿರುವ ನೀರು. ಇದೇ ಟೆಕ್ನಿಕ್ ಕಾಫಿಯಲ್ಲೂ ಕಾಣಬಹುದು. ಬುರುಗುಳ್ಳ ಕಾಫಿಯ ಸ್ವಾದವೇ ಮಜಾ. ಇಲ್ಲಿ ಗೋತಮಿಗೂ ಬುರುಗಿಗೂ ಏನೂ ಸಂಬಂಧ ?
ತುಂಬಾ ಸಿಂಪಲ್ ವಿಷಯ ಅಲ್ಲವೇ? ಗೌತಮನು ಸಾಸಿವೆ ತೆಗೆದುಕೊಂಡು ಬಾ ಎಂದು ಕಳುಹಿಸಿದಾಗ ಗೋತಮಿಯಲ್ಲಿ ಹುಟ್ಟಿದ ಆ “ಆಸೆ ‘ ಯೇ ಬುರುಗು. ಮನೆಮನೆಗೂ ತಿರುಗಿದಾಗ ನಕಾರಗಳು ಬರುತ್ತಿದ್ದಂತೆ ಆ ಬುರುಗು ಇಳಿಯಿತು. ಆಗ ಅಲ್ಲಿ ಉಳಿದದ್ದು ಸತ್ವ ಮತ್ತು ಸತ್ಯ. ವಾಂಛೆ ಇಳಿದಿತ್ತು, ಅರಿವು ಮೂಡಿತ್ತು. ಅವಳಲ್ಲಿನ ವಾಂಛೆ ಕಳಚಿದ ಗೌತಮನೇ ಬುದ್ಧ.
ಈವರೆಗಿನ ಈ ಬರಹದ ಮೂರೇ ಮೂರು ಪ್ಯಾರಾಗ್ರಾಫ್ ಗಳಲ್ಲಿ ಬಹಳ ವಿಚಾರಗಳು ಬಂದವು. ಮಿಕ್ಕ ಬರಹದಲ್ಲಿ ಏನೇನಿದೆಯೋ ಅದು ಬೇರೆ ವಿಷಯ . ಆದರೆ ಇಂತಹ ವಿವಿಧ ವಿಚಾರಗಳು ಅನೇಕಾನೇಕ ಬರಹಗಳಲ್ಲಿ ಎಲ್ಲೆಲ್ಲೂ ಇರುತ್ತದೆ ಅಲ್ಲವೇ? ಎಲ್ಲವನ್ನೂ ಆಸ್ವಾದಿಸಲು ಸಾಧ್ಯವೇ? ಜ್ಞಾನ ಎಂಬುದು ಒಂದು ಸಮುದ್ರ ಎಂದಾದರೆ ಜೀವನದಲ್ಲಿ ಅದರಲ್ಲಿನ ಒಂದು ಗುಟುಕು ನಮ್ಮದಾಗಬಹುದು ಎನ್ನುತ್ತಾರೆ ಬಲ್ಲವರು. ನೂರು ವರುಷ ಬದುಕಿರುವುದಾದರೆ ಆ ಗುಟುಕನ್ನು ನೂರು ಭಾಗ ಮಾಡಬಹುದು. ಜೀವನ ಮೂರೇ ದಿನ ಎನ್ನುವುದಾದರೆ, ಹೆಚ್ಚಿನ ಭಾಗದ ಗುಟುಕನ್ನು ಜೀವನದ ಆರಂಭದಲ್ಲಿ ಕಲಿಯುವವರೇ ಹೆಚ್ಚು.
ಜೀವನದ ಮಧ್ಯಭಾಗದಲ್ಲಿ ಅದರ ಬಳಕೆಯಾದರೆ ಕೊನೆಯ ಭಾಗದ ಜೀವನದಲ್ಲಿ ಮೆಲುಕು ಹಾಕುವುದೇ ಅಧಿಕ, ಕಲಿಕೆ ಕಡಿಮೆ. ಈ ಒಂದು ಗುಟುಕಿನ ಒಂದು ಭಾಗವು ಒಂದು ವರ್ಷದ್ದು ಎಂದರೆ ಅದು ಮತ್ತೂ 365 ಭಾಗಗಳೇ ಆಗುತ್ತದೆ ಅಲ್ಲವೇ? ಸದ್ಯಕ್ಕೆ ಇಷ್ಟು ಭಾಗಕ್ಕೆ ಮೀಸಲಿಡೋಣ. ಈ ಮಾತು ಈಗೇಕೆ? ಆ ಒಂದು ಭಾಗವನ್ನು ಏಳರಿಂದ ಗುಣಿಸಿದರೆ ಅದೇನು ದೊರಕುವುದೇ ಅದುವೇ ವಾರದ ಗುಟುಕು. ಈ ವಾರದ ಗುಟುಕು ಎಂದರೇನು ಮತ್ತು ಹೇಗೆ?
ಒಂದು ಕ್ಯಾಲೆಂಡರ್ ವರುಷ ಎಂದೇ ತೆಗೆದುಕೊಂಡರೆ ಪ್ರತೀ ವರ್ಷಕೊಮ್ಮೆ ಜನವರಿ, ಫೆಬ್ರವರಿ, ಮಾರ್ಚ್ ಇತ್ಯಾದಿ ತಿಂಗಳುಗಳು ಮೂಡಿ ಬರುತ್ತದೆ. ಹಿಂದೂ ಪಂಚಾಂಗವನ್ನೇ ತೆಗೆದುಕೊಂಡರೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತದೆ ಎಂಬ ಮಾತನ್ನು ಯಾವುದೇ ಹಬ್ಬ, ಹರಿದಿನ, ವಾರ್ಷಿಕಕ್ಕೂ ಸಲ್ಲುತ್ತದೆ. ಇದುವೇ ಪುನರಾವರ್ತನೆ. ಒಂದು ಸಾಮಾಜಿಕ ತಾಣದ ಗುಂಪು ಎಂದಾಗಬಹುದು, ಒಂದು ಟಿವಿ ಚಾನಲ್ ಇರಬಹುದು ಅಲ್ಲೂ ಪುನರಾವರ್ತನೆ ಎಂಬುದು ಇದ್ದೇ ಇರುತ್ತದೆ. ದಿನನಿತ್ಯದ್ದೂ ಆಗಿರಬಹುದು, ವಾರಕ್ಕೊಮ್ಮೆಯೂ ಆಗಿರಬಹುದು, ವಾರಾಂತ್ಯದ್ದೂ ಆಗಿರಬಹುದು ಒಟ್ಟಾರೆ ಅಲ್ಲೊಂದು ಪುನರಾವರ್ತನೆ.
ಐಫೋನ್‌ನಲ್ಲಿ ಒಂದು ವೈಶಿಷ್ಟ್ಯ ವಿದೆ. ವಾರಕ್ಕೊಮ್ಮೆ, ಕಳೆದ ವಾರದ ನಿಮ್ಮ ಮೊಬೈಲ್ ಬಳಕೆ ಹೇಗೆ ಎಂದು ರಿಪೋರ್ಟ್ ಬರುತ್ತದೆ. ಆ ರಿಪೋರ್ಟ್‌ನಲ್ಲಿ, ಕಳೆದ ವಾರದ ಬಳಕೆಯು, ಕಳೆದ ವಾರದ ಹಿಂದಿನ ವಾರಕ್ಕಿಂತಾ ಬಳಕೆಯಲ್ಲಿ ಇಳಿಕೆ ಇದೆಯೇ, ಏರಿಕೆ ಇದೆಯೇ ಎಂಬುದೇ ಪ್ರಮುಖ ಅಂಶ. ಆ ಬಳಕೆಯು ಎಷ್ಟು ಪ್ರತಿಶತ ಹೆಚ್ಚು ಅಥವಾ ಕಡಿಮೆ ಎಂದು ತೋರಿಸುತ್ತದೆ.
ಮತ್ತೊಂದು ಮುಖ್ಯವಾದ ಅಂಶ ಎಂದರೆ ದಿನದ ಬಳಕೆ ಎಷ್ಟು ಎಂಬುದು. ಮಗದೊಂದು ಅಂಶ ಎಂದರೆ ವಾರದ ಬಳಕೆಯಲ್ಲಿ ಎಷ್ಟು ಘಂಟೆಗಳ ಕಾಲ ಯಾವ ವಿಷಯದ ಬಗ್ಗೆ ಮೊಬೈಲ್ ಬಳಕೆಯಾಗಿದೆ ಎಂಬುದು. ಒಂದಂಶ ಅರ್ಥ ಮಾಡಿಕೊಳ್ಳಲೇಬೇಕಾದುದು ಏನೆಂದರೆ, ನಮ್ಮ ಕೈಲಿ ಮೊಬೈಲ್ ಇದ್ದರೂ, ನಮ್ಮ ಜುಟ್ಟು ಮೊಬೈಲ್ ಕೈಲಿದೆ ಎಂಬುದು. ಒಂದು ಉದಾಹರಣೆ ತೆಗೆದುಕೊಂಡು ಕೊಂಚ ಬಗೆಯೋಣ. ಅನಂತರ ಮೊಬೈಲ್ ಬಳಕೆಗೂ, ಕಿಸಾ ಗೋತಮಿಗೂ ಏನು ಸಂಬಂಧ ಎಂದು ನೋಡೋಣ.
ನನ್ನದೇ ಉದಾಹರಣೆ ತೆಗೆದುಕೊಳ್ಳುತ್ತೇನೆ. ನನ್ನ ಕಳೆದ ವಾರದ ಬಳಕೆ 20 ಘಂಟೆಗಳು ಮತ್ತು 50 ನಿಮಿಷಗಳು. ಲೆಕ್ಕ ಸುಲಭವಾಗಲು, ವಾರದ ಬಳಕೆ 21 ಘಂಟೆಗಳು ಎಂದುಕೊಳ್ಳಿ. ಅರ್ಥಾತ್ ದಿನದ ಬಳಕೆ ಮೂರು ಘಂಟೆಗಳು. ಏಳು ಘಂಟೆಗಳ ಕಾಲ ನಿದ್ರೆ ಎಂದುಕೊಳ್ಳೋಣ. ಈ ಏಳು ಘಂಟೆಗಳ ಕಾಲ ಹೇಗೆ ಎಂದರೆ, ನಿಮಗೂ ಮೊಬೈಲಿಗೂ ಬಲು ದೂರ ಎಂಬುದು. ಬೆನ್ನು ಹಾಸಿಗೆಗೆ ಇದ್ದು, ಕೈಲಿ ಮೊಬೈಲ್ ಇದ್ದರೆ ಅದು ಲೆಕ್ಕಕ್ಕೆ ಬರೋದಿಲ್ಲ, ಆಯ್ತಾ? ಆಟ ಎಂದರೆ ಅದಕ್ಕೆ ರೂಲ್ಸ್ ಮುಖ್ಯ. ಇಪ್ಪತ್ತನಾಲ್ಕು ಘಂಟೆಗಳಲ್ಲಿ ಅಲ್ಲೇ ಹತ್ತು ಘಂಟೆಗಳು ಕಳೆದವು ಎಂದುಕೊಂಡರೆ ಉಳಿದಿದ್ದು 14 ಘಂಟೆಗಳು.
ಈ ಹದಿನಾಲ್ಕು ಘಂಟೆಗಳ ಕಾಲದ ಬಹುಪಾಲು ಹೊಟ್ಟೆಪಾಡಿನ ಕೆಲಸಕ್ಕೆ ಮೀಸಲು. ಸುಲಭ ಲೆಕ್ಕಕ್ಕೆ ಅದನ್ನು ಎಂಟು ಘಂಟೆಗಳು ಎಂದುಕೊಂಡರೆ ಉಳಿದಿದ್ದು, ಆರು ಘಂಟೆಗಳು. ಊಟ, ತಿಂಡಿ, ಕಾಫಿ, ತೋಟಗಾರಿಕೆ, ಲಾನ್ ಕೆಲಸ, ಮನೆಯಲ್ಲಿನ ಒಬ್ಟಾಕೆಯೊಂದಿಗೆ ಮಾತುಕತೆ, ಸೇವೆ, ಸ್ನಾನ, ಪೂಜೆ, ಪುನಸ್ಕಾರ ಎಂದೆಲ್ಲ ಅಂದುಕೊಂಡರೂ ಅದಕ್ಕೆ ದಿನಕ್ಕೆ ಆರು ಘಂಟೆಗಳ ಕಾಲ ಬೇಕು ಎಂಬುದು ಕೊಂಚ ಉತ್ಪ್ರೇಕ್ಷೆ. ಇಷ್ಟೆಲ್ಲ ಪುಣ್ಯ ಕೆಲಸಗಳಿಗೆ ಮೂರು ಘಂಟೆಗಳು ಎಂದುಕೊಂಡರೆ ಮಿಕ್ಕ ಮೂರು ಘಂಟೆಗಳ ಕಾಲ ದಂಡವಾಯಿತೇ ಎಂಬುದೇ ಈ ಬರಹದ ಮೂಲ.
ಮೊಬೈಲಿನಲ್ಲಿ ಹಾಡು ಕೇಳಿದ್ದು, ಹಾಡು ಹಾಡಿದ್ದು, ಲೇಖನಗಳನ್ನು ಓದಿದ್ದು, ಪ್ರತಿಕ್ರಿಯೆ ಓದಿದ್ದು, ಹಾಕಿದ್ದು ಇತ್ಯಾದಿಗಳೆಲ್ಲ ಸೇರಿದ್ದು ದಿನದಲ್ಲಿ ಮೂರೇ ಮೂರು ಘಂಟೆಗಳು ಎಂದರೆ ತಲೆ ಖಾಲಿಯಾಗುತ್ತಿದೆ ಎಂದೇ ಅರ್ಥವಲ್ಲವೇ? ಈಗಿರುವ ಮಿಕ್ಕ ಮೂರು ಘಂಟೆಗಳಲ್ಲಿ ಇನ್ನೊಂದು ಘಂಟೆಯಾದರೂ ಓದಲಿಕ್ಕೆ ಮೀಸಲಿಡಬೇಕು ಎಂದನಿಸುವುದಿಲ್ಲವೇ? ಮೊಬೈಲ್ ಅಂಬೋದು ಒಂದು ಚಟ ಎನ್ನುವುದೇ ಸುಳ್ಳಲ್ಲವೆ? ಯಾವುದೇ ಒಂದು ಹವ್ಯಾಸವು ನಾಣ್ಯದಂತೆ ಎರಡು ಮುಖಗಳನ್ನು ಹೊಂದಿರುತ್ತದೆ. ಓದುವುದನ್ನೇ ಅಭ್ಯಾಸ ಮಾಡಿಕೊಂಡು ಬಳಕೆ ಮಾಡಿದಾಗ ಅದು ಒಳಿತು ಎಂದುಕೊಳ್ಳೋಣ. ಬರೀ ಓದುವುದನ್ನೇ ಮಾಡಿ ಟ್ಯಾಂಕಿ ತುಂಬಿಸಿಕೊಂಡು ಬಳಕೆಯನ್ನೇ ಮಾಡದಿದ್ದರೆ ಅದು ಕೊಳೆತು ನಾರುವುದಿಲ್ಲವೇ? ಪುಸ್ತಕ ಓದಬೇಕು ಮೊಬೈಲ್ ಪಕ್ಕಕ್ಕೆ ಇಡಬೇಕು ಎಂದು ಆಡುವ ಮಾತು ಪೂರ್ಣಸತ್ಯವಲ್ಲ. ಮೊಬೈಲಿನಲ್ಲಿ ಮೂಡುವುದೂ ಒಂದು ಪುಸ್ತಕ ರೂಪದ ಜ್ಞಾನ ಎಂಬುದಾಗಿ ಅರಿತು ಬಳಕೆ ಮಾಡಿದರೆ ತಪ್ಪೇನಿಲ್ಲ. ಮೊಬೈಲನ್ನು ಹೇಗೆ ಬಳಕೆ ಮಾಡುತ್ತೇವೆ ಎಂಬುದರ ಮೇಲೂ ಅವಲಂಬಿತ.
ಬುರುಗು ಉತ್ಸಾಹದ ಸಂಕೇತ. ಸೋಪಿನಪುಡಿ ಮತ್ತು ಕಾಫಿಯಲ್ಲಿನ ಆ ಉತ್ಸಾಹದಲ್ಲೇ ಮಜಾ ಇರುವುದು. ಆ ಉತ್ಸಾಹದಿಂದಲೇ ಗೋತಮಿ ಹತ್ತಾರು ಮನೆಯನ್ನು ಸುತ್ತಿದ್ದು. ಒಮ್ಮೆ ಉತ್ಸಾಹ ಇಳಿಯಿತು ಎಂದರೆ ಅಲ್ಲೊಂದು ಸತ್ಯ ಇದೆ. ಅದೇ ನಿರ್ವಾಣ. ಸದ್ಬಳಕೆಯೇ ಸತ್ಯ.
ಈಗ ವಿಷಯ ಎಲ್ಲಿಗೆ ಬಂತು? ಮಿಕ್ಕ ಮೂರುಘಂಟೆಗಳ ಸದ್ಬಳಕೆಯಾಗಬೇಕಿದೆ. ಅದು ಹೇಗೆ? ಮುಂದಿನ ವರದಿ ಬಂದಾಗ ಆ ಮೂರು ಘಂಟೆಗಳು ಕೊರೆತಯಾಗಿ ಕಾಣದೇ ಉತ್ಸಾಹದ ಒರತೆಯಾಗಿ ತೋರಬೇಕಾದರೆ ಮಾಡಬೇಕಿರುವುದು ಏನು? ಇಷ್ಟೆಲ್ಲ ಹೇಳಿದ ಮೇಲೆ ಒಂದು ವಿಷಯ ಅರ್ಥವಾಯ್ತು. ಬುದ್ಧನಾಗುವುದು ಸುಲಭವಲ್ಲ. ಆ ಮೂರು ಘಂಟೆಗಳು ಬಳಕೆಯಾಗುತ್ತಿರುವ ಅರಿವು ಮೂಡಲು ಇಷ್ಟು ಹೊತ್ತು ಬೇಕಾಯಿತೇ? ಅಂದ ಹಾಗೆ ನನ್ನಲ್ಲಿ ಮೂಡಿದ ಅರಿವು ನಿಮ್ಮಲ್ಲೂ ಮೂಡಿತೇ?
*ಶ್ರೀನಾಥ್