ಬೆಂಗಳೂರು:ನನಗೆ ವಿಧಾನ ಪರಿಷತ್ ಟಿಕೆಟ್ ತಪ್ಪುತ್ತದೆ ಅಂತಾ ಅಂದುಕೊಂಡಿರಲೇ ಇಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್ ಪಾಟೀಲ್ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ನಾನು ಬೆಂಗಳೂರಿನಲ್ಲಿ ಐಶಾರಾಮಿ ಜೀವನ ನಡೆಸುತ್ತಿಲ್ಲ,ಸ್ಥಾನಮಾನಕ್ಕಾಗಿ ಎಂದೂ ಲಾಬಿ ಮಾಡಿಲ್ಲ,ಅವರೆಲ್ಲ ದೆಹಲಿಗೆ ಹೋಗಿದ್ದಾಗ ನಾನು ನನ್ನ ಹಳ್ಳಿಯಲ್ಲೇ ಇದ್ದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ವಿರುದ್ಧ ಎಸ್.ಆರ್ ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದರು.
ದೆಹಲಿವರೆಗೂ ಹೋಗಿ ಟಿಕೆಟ್ ಗಿಟ್ಟಿಸಿಕೊಳ್ಳಲು ಮನಸ್ಸು ಒಪ್ಪಲಿಲ್ಲ,ಯಾಕೆ ಹೀಗಾಯಿತೋ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರು ನನ್ನ ಭೇಟಿ ಮಾಡಿ ಚರ್ಚಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಟಿಕೆಟ್ ತಪ್ಪಿರುವ ಬಗ್ಗೆ ಚರ್ಚಿಸಲಿಲ್ಲ, ಅವರಿಗೆ ಏನು ಕೆಲಸವಿತ್ತೋ ಏನೋ ಎಂದರು.
ನನ್ನ ವಯಸ್ಸಿನ ಕಾರಣಕ್ಕೆ ಟಿಕೆಟ್ ತಪ್ಪಿದೆ ಅಂತಾ ಅನ್ನಿಸುತ್ತಿಲ್ಲ. ಮೇಲ್ಮನೆ ಅಂದಮೇಲೆ ಅಲ್ಲಿ ಹಿರಿಯರೇ ಇರುವುದು ಅಲ್ಲವಾ ?
ಮೇಲ್ಮನೆ ವಿಪಕ್ಷ ನಾಯಕನಾಗಿ ಸಮರ್ಥವಾಗಿ ಕೆಲಸ ನಿಭಾಯಿಸಿದ್ದೆ, ಆದರೂ ಟಿಕೆಟ್ ಕೊಟ್ಟಿಲ್ಲ ಯಾವ ಅರ್ಹತೆ ಮೇಲೆ ಎಂ.ಬಿ ಪಾಟೀಲ್ ಸಹೋದರಗೆ ಟಿಕೆಟ್ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.
ಎಂ.ಬಿ ಪಾಟೀಲ್ ದೆಹಲಿಯಲ್ಲಿದ್ದಾಗ ನಾನು ನಮ್ಮ ಜಿಲ್ಲೆಯಲ್ಲೇ ಇದ್ದೆ, ನನಗೆ ದೆಹಲಿಗೆ ಹೋಗಿ ಲಾಬಿ ಮಾಡುವ ಅಗತ್ಯ ಇರಲಿಲ್ಲ,ಅಧಿಕಾರಕ್ಕಾಗಿ ಲಾಬಿಯ ಅನಿವಾರ್ಯತೆ ಇಲ್ಲ. ಪಕ್ಷದ ತತ್ವ, ಸಿದ್ದಾಂತವಷ್ಟೇ ಮುಖ್ಯ. ಯಾವ ನಾಯಕರ ಬಗ್ಗೆಯೂ ಬೊಟ್ಟು ಮಾಡುವುದಿಲ್ಲ. ಪಕ್ಷ ನನಗೆ ತಾಯಿ ಸಮಾನ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ, ಈಗಾಗಲೇ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾ ಡಿದ್ದಾರೆ. ಕುಳಿತು ಮಾತಾನಾಡುವ ಎಂದು ಹೇಳಿದ್ದಾರೆ ಎಂದು ತಿಳಿಸಿದರು.