ಕಟಕ್: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ ಮುಗ್ಗರಿಸಿದೆ. ಕಟಕ್ ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ನಾಲ್ಕು ವಿಕೆಟ್ ಅಂತರದಿಂದ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 20 ಓವರ್ ಗಳಲ್ಲಿ ಗಳಿಸಿದ್ದು 148 ರನ್. ಸಾಧಾರಣ ಗುರಿ ಬೆನತ್ತಿದ್ದ ದಕ್ಷಿಣ ಆಫ್ರಿಕಾ ತಂಡ 18.2 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಹೆನ್ರಿಚ್ ಕ್ಲಾಸನ್ ಅರ್ಧಶತಕ ಬಾರಿಸಿದರು.
ಮೊದಲ ಪಂದ್ಯದಂತೆ ಕಟಕ್ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್ ಗಳು ನಿರಾಶಾದಾಯಕ ಪ್ರದರ್ಶನ ನೀಡಿದರು. ಭುವನೇಶ್ವರ್ ಕುಮಾರ್ ಹೊರತು ಪಡಿಸಿ ಉಳಿದ ಬೌಲರ್ ಗಳು ದುಬಾರಿಯಾದರು.
ಮಾಜಿ ನಾಯಕ ಸುನೀಲ್ ಗಾವಸ್ಕರ್ ಅವರು ಟೀಂ ಇಂಡಿಯಾ ಬೌಲರ್ ಗಳ ಪ್ರದರ್ಶನದ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. “ಟೀಂ ಇಂಡಿಯಾದ ದೊಡ್ಡ ಸಮಸ್ಯೆಯೆಂದರೆ ಭುವನೇಶ್ವರ್ ಕುಮಾರ್ ಹೊರತು ಪಡಿಸಿ ತಂಡದಲ್ಲೇ ಯಾವುದೇ ವಿಕೆಟ್ ಕಬಳಿಸುವ ಬೌಲರ್ ಇಲ್ಲ. ವಿಕೆಟ್ ಪಡೆದರೆ ಮಾತ್ರ ಎದುರಾಳಿಯ ಮೇಲೆ ಒತ್ತಡ ಹೇರಬಹುದು. ಆದರೆ ಎರಡೂ ಪಂದ್ಯದಲ್ಲಿ ಅದಾಗಲಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಡ್ರಗ್ ಪಾರ್ಟಿ: ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಬಂಧನ
ಗಾಯಗೊಂಡಿದ್ದ ಕ್ವಿಂಟನ್ ಡಿಕಾಕ್ ಬದಲಿಗೆ ಆಡುವ ಬಳಗದಲ್ಲಿ ಸ್ಥಾನ ಪಡೆದ ಹೆನ್ರಿಚ್ ಕ್ಲಾಸನ್ 81 ರನ್ ಬಾರಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್ ನಾಲ್ಕು ಓವರ್ ನಲ್ಲಿ ಕೇವಲ 13 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.
ಐದು ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ 2-0 ಅಂತರದ ಮುನ್ನಡೆ ಸಾಧಿಸಿದೆ. ಸರಣಿ ಗೆಲ್ಲಲು ಭಾರತ ತಂಡ ಉಳಿದ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಿದೆ.