Advertisement

ರಾಜಕೀಯ ನಾಯಕರ ವಾಕ್ಸಮರ ಮೇರೆ ಮೀರದಿರಲಿ

12:24 AM Nov 30, 2022 | Team Udayavani |

ದೇಶದಲ್ಲೀಗ ಚುನಾವಣ ಭರಾಟೆ. ಇತ್ತೀಚೆಗಷ್ಟೇ ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆ ಮುಗಿದಿದ್ದರೆ ಈಗ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಇತ್ತ ಕರ್ನಾಟಕದಲ್ಲಿ ಮುಂದಿನ ವರ್ಷದ ಮೊದಲಾರ್ಧದಲ್ಲಿ ಚುನಾವಣೆ ನಡೆಯಲಿದ್ದು ಪಕ್ಷಗಳು ಈಗಾಗಲೇ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು ವಿಭಿನ್ನ ಹೆಸರುಗಳಲ್ಲಿ ಯಾತ್ರೆಗಳನ್ನು ಕೈಗೊಂಡಿವೆ.

Advertisement

ಗುಜರಾತ್‌ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ವಿವಿಧ ರಾಜಕೀಯ ಪಕ್ಷಗಳ ದಿಗ್ಗಜ ನಾಯಕರೇ ವೈಯಕ್ತಿಕ ವಾಗ್ಧಾಳಿ ನಡೆಸುತ್ತಿದ್ದರೆ ಇತ್ತ ಕರ್ನಾಟಕದಲ್ಲೂ ರಾಜಕೀಯ ನಾಯಕರ ವಾಕ್ಸಮರ ತೀರಾ ಅತಿರೇಕಕ್ಕೆ ಹೋಗಿದೆ. ಇಂಥ ಹೇಳಿಕೆಗಳಿಂದ ಆ ನಾಯಕರೇ ವಿವಾದಕ್ಕೊಳಗಾಗುತ್ತಿದ್ದಾರೆ ಮಾತ್ರವಲ್ಲದೆ ಸಮಾಜದಿಂದ ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಇನ್ನು ನಾಯಕನೋರ್ವ ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಪ್ರತಿಕ್ರಿಯಿಸುವ ಭರದಲ್ಲಿ ಮತ್ತೋರ್ವ ನಾಯಕನ ಬಾಯಿಯಿಂದ ಉದುರುತ್ತಿರುವ ಅಣಿಮುತ್ತುಗಳು ಆತನನ್ನೇ ಬೆತ್ತಲು ಮಾಡುತ್ತಿವೆ.

ರಾಜಕೀಯದಲ್ಲಿ ಪರಸ್ಪರ ಮಾತಿನ ಕೆಸರೆರಚಾಟ, ವಾಕ್ಸಮರಗಳೆಲ್ಲವೂ ಸಾಮಾನ್ಯ. ಆದರೆ ಇವೆಲ್ಲದಕ್ಕೂ ಒಂದು ಗಡಿ ಅಥವಾ ಬೇಲಿ ಇದ್ದೇ ಇರುತ್ತದೆ. ಇದನ್ನು ದಾಟಿ ಮುಂದೆ ಸಾಗಿದರೆ ಹೇಳಿಕೆ ನೀಡಿದ ನಾಯಕನೇ ಸಮಾಜದ ವಕ್ರದೃಷ್ಟಿಗೆ ಗುರಿಯಾಗಬೇಕಾಗುತ್ತದೆ. ಯಾರನ್ನೋ ಗುರಿಯಾಗಿಸಿ, ಯಾವುದೋ ಉದ್ದೇಶದಿಂದ ನೀಡಿದ ಹೇಳಿಕೆ ಆತನಿಗೆ ತಿರುಗುಬಾಣ ವಾಗಿ ಪರಿಣಮಿಸಿದ ಉದಾಹರಣೆಗಳು ನಮ್ಮ ರಾಜಕೀಯ ಇತಿಹಾಸದಲ್ಲಿ ಸಾಕಷ್ಟಿವೆ. ನೇತಾರರು ಅಭಿಮಾನಿಗಳನ್ನು ಮೆಚ್ಚಿಸುವ ಭರದಲ್ಲಿ ತಮ್ಮ ನಾಲಗೆಯನ್ನು ಹರಿಯಬಿಡುತ್ತಲೇ ಬಂದಿದ್ದಾರೆ ಮಾತ್ರವಲ್ಲದೆ ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಲೂ ಇದ್ದಾರೆ.

ಚುನಾವಣೆ ಸಮೀಪಿಸಿದಾಗಲೆಲ್ಲ ರಾಜಕೀಯ ನಾಯಕರ ಇಂಥ ವರ್ತನೆಗಳು ಮೇರೆ ಮೀರುತ್ತವೆ. ತಮ್ಮ ಸಮು ದಾಯ, ಪಕ್ಷದ ಕಾರ್ಯಕರ್ತರನ್ನು ಓಲೈಸಲೆಂದೋ ತನ್ನ ವಾಕ್ಪಟುತ್ವವನ್ನು ಪ್ರದರ್ಶಿಸುವ ಸಲುವಾಗಿ ನಾಯಕರು ನೀಡುವ ಇಂಥ ಹೇಳಿಕೆಗಳು ಕೇವಲ ಆ ನಾಯಕನನ್ನು ಸಮಾಜದಲ್ಲಿ ಕಳಂಕಿತನನ್ನಾಗಿಸುವುದಷ್ಟೇ ಅಲ್ಲದೆ ಆತ ಪ್ರತಿನಿಧಿಸುವ ಪಕ್ಷ, ಸಮುದಾಯವೂ ತಲೆತಗ್ಗಿಸುವಂತೆ ಮಾಡುತ್ತದೆ. ಇಂಥದಕ್ಕೆಲ್ಲ ಅದೇ ತೆರನಾದ ಕೀಳುಮಟ್ಟದ ತಿರುಗೇಟು ನೀಡಬೇಕೆಂದೇ ನಿಲ್ಲ. ಆತ ಎತ್ತಿದ ವಿಷಯಗಳು ಅಥವಾ ಆರೋಪಗಳ ಬಗೆಗೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸಭ್ಯವಾಗಿ ಉತ್ತರಿಸಿದರೆ ಅದೇ ಸೂಕ್ತ ತಿರುಗೇಟು ಅಥವಾ ಪ್ರತ್ಯುತ್ತರವಾಗುತ್ತದೆ. ಅದನ್ನು ಬಿಟ್ಟು ಆತನ ಮಟ್ಟಕ್ಕೆ ತಾನೂ ಇಳಿದುಬಿಟ್ಟರೆ ಆ ನಾಯಕನಿಗೂ ತಮಗೂ ಯಾವುದೇ ವ್ಯತ್ಯಾಸ ಇರಲಾರದು ಎಂಬುದನ್ನು ಪ್ರತಿಯೋರ್ವ ರಾಜಕಾರಣಿಯೂ ಮೊದ ಲಾಗಿ ಅರ್ಥೈಸಿಕೊಳ್ಳಬೇಕು. ಇನ್ನು ಅದೆಷ್ಟೋ ಸಂದರ್ಭದಲ್ಲಿ ಮಾತಿಗಿಂತ ನಮ್ಮ ಮೌನ ಮತ್ತು ನಾವು ಮಾಡುವ ಕಾರ್ಯವೇ ಸೂಕ್ತ ಉತ್ತರವಾಗು ತ್ತದೆ. ಇದನ್ನು ಬಿಟ್ಟು ರಾಜಕೀಯದಲ್ಲಿ ಇವೆಲ್ಲ ಸಾಮಾನ್ಯ ಎಂದು ಭಾವಿಸಿ ನಮ್ಮ ಹಳೇ ಚಾಳಿಯನ್ನು ಮುಂದುವರಿಸಿಕೊಂಡು ಹೋದಲ್ಲಿ ಜನ ಮಾತ್ರ ನಾಯಕರ ಪ್ರತಿಯೊಂದೂ ನಡತೆ, ವರ್ತನೆಯ ಮೇಲೆ ಕಣ್ಣಿಟ್ಟಿರುತ್ತಾರೆ ಎಂಬುದನ್ನು ಮರೆಯಬಾರದು.

“ಜನರ ನೆನಪು ಕ್ಷಣಿಕ’ ಎಂಬುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿರುವ ಮಾತು. ಸದ್ಯದ ಸ್ಥಿತಿಯಲ್ಲಿ ಹಾಗನಿಸಿದರೂ ಇತಿಹಾಸದಲ್ಲಿ ಮಾತ್ರ ಪ್ರತಿಯೊಂದೂ ದಾಖಲಾಗಿರುತ್ತದೆ. ಇದು ನಮ್ಮ ಸಮಗ್ರ ಜೀವನಕ್ಕೆ ಒಂದು ಕಪ್ಪುಚುಕ್ಕೆ ಎನಿಸಿಕೊಳ್ಳುತ್ತದೆ ಎಂಬುದನ್ನು ಮಾತ್ರ ಮರೆಯಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next