ಬೀದರ: ಅಳಿವಿನಂಚಿಗೆ ತಲುಪುತ್ತಿರುವ ಅಪರೂಪದ, ಜಗತ್ ವಿಖ್ಯಾತ ಬಿದ್ರಿ ಕಲೆಗೆ ಹೊಸ ಕಾಯಕಲ್ಪ ನೀಡಲು ಸರ್ಕಾರ ಮುಂದಾಗಿದೆ.
ಬೀದರನಲ್ಲಿ ಸಾಮೂಹಿಕ ಸೌಲಭ್ಯ ಕೇಂದ ಸ್ಥಾಪಿಸಿ, ಕೌಶಲ್ಯ ತರಬೇತಿ, ಮಾರುಕಟ್ಟೆ ಮತ್ತು ಗುಣಮಟ್ಟ ಪರೀಕ್ಷಾ ವ್ಯವಸ್ಥೆ ಒದಗಿಸುವ ಕುರಿತು ಬಜೆಟ್‌ನಲ್ಲಿ ಘೋಷಿಸಿದೆ. ಇದರಿಂದ ಐತಿಹಾಸಿಕ ಬಿದ್ರಿ ಕಲೆಗೆ ನೆರವು ಸಿಗಬಹುದೆಂಬ ನಿರೀಕ್ಷೆ ಹೆಚ್ಚಿದೆ.
ಅಲಂಕಾರಿಕೆ, ಉಡುಗರೆಯಾಗಿ ನೀಡಲು ಸೈ ಎನಿಸಿಕೊಂಡಿರುವ ಕಲಾಕೃತಿಗಳಿಗೆ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲಿಯೂ ಮನಸೋಲದವರೇ ಇಲ್ಲ. ಆದರೆ, ವಿಶ್ವದೆಲ್ಲೆಡೆ ಮೆರೆದಿರುವ ಈ ವಿಶಿಷ್ಟ ಕಲಾ ಉದ್ಯಮ ಇದೀಗ ಮುಗ್ಗರಿಸುತ್ತಿದೆ. ಬೆಳ್ಳಿ, ಸತುವು ಹಾಗೂ ತಾಮ್ರದ ಬೆಲೆ ಹೆಚ್ಚಳದ ಜತೆಗೆ ವ್ಯಾಪಾರ ಕುಸಿತದಿಂದ ಉದ್ಯಮ ನೆಲಕಚ್ಚಿದೆ. ಅಷ್ಟೇ ಅಲ್ಲ ಕೊರೊನಾ ಕರಿನೆರಳು ಕಲಾ ಉದ್ಯಮದ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಈ ನಡುವೆ ಸರ್ಕಾರ ಸಾಮೂಹಿಕ ಸೌಲಭ್ಯ ಕೇಂದ್ರದ ಭರವಸೆ ಬಿದ್ರಿ ಉದ್ಯಮಿಗಳಲ್ಲಿ ಹೊಸ ಚೈತನ್ಯ ಮೂಡಬಹುದೆಂಬ ಆಶಯ ಇದೆ.
ಬೀದರನಲ್ಲಿ ಬಿದ್ರಿ ಕಲೆಯನ್ನೇ ನೆಚ್ಚಿ ಕೊಂಡಿರುವ ಅಂದಾಜು 700ಕ್ಕೂ ಹೆಚ್ಚು ಕರಕುಶಲ ಕರ್ಮಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳಿದ್ದು, ಅತ್ಯಂತ ಸಂಕಷ್ಟದ ದಿನ ಎದುರಿಸುತ್ತಿದ್ದಾರೆ. ತಯಾರಿಕೆ ವೆಚ್ಚದ ಜತೆಗೆ ಮಾರುಕಟ್ಟೆಯದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕಲಾವಿದರಿಗೆ ಬಿದ್ರಿ ಕಲಾಕೃತಿಗಳಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಸಬ್ಸಿಡಿ ಸೌಲಭ್ಯ ಕಲ್ಪಿಸುತ್ತಿದೆಯಾದರೂ ಅತ್ಯಲ್ಪ ಅನುದಾನ ಸಾಕಾಗುತ್ತಿಲ್ಲ. ಹಾಗಾಗಿ ಕಲಾವಿದರು ಕಲಾಕೃತಿಗೆ ಮುಖ್ಯವಾಗಿ ಬೇಕಾದ ಬೆಳ್ಳಿ ಹೊರ ಮಾರುಕಟ್ಟೆಯಲ್ಲಿ ಖರೀದಿಸುವ ಅನಿವಾರ್ಯತೆ ಇದೆ.
ಕಲಾಕೃತಿಗಳು ದುಬಾರಿ ದರ ಕಾರಣ ಭಾರತೀಯರಿಗಿಂತ ವಿದೇಶಿಗರು ಹೆಚ್ಚಾಗಿ ಖರೀದಿಸುತ್ತಾರೆ. ದೇಶದಲ್ಲಿ ಕೋವಿಡ್ ತೆರವು ಬಳಿಕ ಕಚ್ಚಾ ವಸ್ತುಗಳ ಕೊರತೆಯೇನೊ ನೀಗಿದರೂ ವಿದೇಶಿಗರ ಕೈ ಸೇರುವ ನಿಟ್ಟಿನಲ್ಲಿ ಮಾರುಕಟ್ಟೆ ವ್ಯವಸ್ಥೆ ಸರಿಯಾಗಿ ಇಲ್ಲವಾದ್ದರಿಂದ ಕಲಾಕೃತಿಗಳಿಗೆ ಕೇಳುವವರೇ ಇಲ್ಲದಂತಾಗಿದೆ. ಹಾಗಾಗಿ ಬೀದರನ ಓಲ್ಡ್ ಸಿಟಿಯಲ್ಲಿರುವ ಏಳೆಂಟು ಮಾರಾಟ ಮಳಿಗೆಗಳಲ್ಲಿ ಬಿದ್ರಿ ಕಲಾಕೃತಿಗಳು ಧೂಳು ಹಿಡಿಯುತ್ತಿದ್ದು, ಅಂಗಡಿಗಳಿಗೆ ಬಾಗಿಲು ಹಾಕುವ ಸ್ಥಿತಿ ಬಂದಿದೆ. ಉದ್ಯಮವನ್ನೇ ನಂಬಿರುವ ನೂರಾರು ಕಸಬುಗಾರರ ಕುಟುಂಬ ಬೀದಿಗೆ ಬಂದಿದೆ.
ಬಿದ್ರಿ ಕಲೆ ಇಂದು ಸಾಗರದಾಚೆ ತನ್ನಂದ ಪ್ರದರ್ಶಿಸಿ ವಿಖ್ಯಾತಿ ಪಡೆದಿದೆ. ಆದರೆ, ತಯಾರಿಸುವ ಕುಶಲಕರ್ಮಿಗಳು, ಉದ್ಯಮಿಗಳ ಬದುಕು ಮಾತ್ರ ಹಸನಾಗಿಲ್ಲ. ವ್ಯಾಪಾರವೂ ಇಲ್ಲದೇ, ಇತ್ತ ಸರ್ಕಾರದ ನೆರವು ಇಲ್ಲದೇ ಸಂಕಷ್ಟದಲ್ಲಿರುವ ಹತ್ತಾರು ಕುಟುಂಬಗಳಿಗೆ ಈ ಕಲೆಗೆ ಭವಿಷ್ಯ ಇದೆಯೇ ಎಂಬ ಆತಂಕ ಆವರಿಸಿದೆ. ಸರ್ಕಾರ ಬಜೆಟ್‌ನಲ್ಲಿ ಘೋಷಿತ ಯೋಜನೆಗೆ ಪೂರಕ ಅನುದಾನ ಪ್ರಕಟಿಸಿ, ತ್ವರಿತ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ಈ ಪಾರಂಪರಿಕ ಕಲೆ ಉಳಿಸಿಕೊಳ್ಳಬೇಕಿದೆ.
ಶ್ರೀಗಂಧದ ಕರಕುಶಲತೆಗೆ ಸರ್ಕಾರದಿಂದ ದೊರೆಯುತ್ತಿರುವ ಮಾನ್ಯತೆ ಬಿದ್ರಿ ಕಲೆಗೆ ಸಿಗುತ್ತಿಲ್ಲ. ವರ್ಷಕ್ಕೆ ಸ್ಯಾಂಡಲ್‌ವುಡ್‌ಗೆ 1 ಕೋಟಿ ರೂ. ಗಳಿಗೂ ಅಧಿಕ ಸಬ್ಸಿಡಿ ದೊರೆತರೆ, ಬಿದ್ರಿ ಕಲೆಗೆ ಅದರ ಅರ್ಧದಷ್ಟು ಸಹ ಸಿಗುತ್ತಿಲ್ಲ. ಸರ್ಕಾರ ನೀಡುವ ಅತ್ಯಂತ ಕಡಿಮೆ ಪ್ರಮಾಣದ ಕಚ್ಚಾ ವಸ್ತುಗಳನ್ನಿಟ್ಟುಕೊಂಡು ಭಾರೀ ಪ್ರಮಾಣದಲ್ಲಿ ಬಿದ್ರಿ ಕಲಾಕೃತಿ ತಯಾರಿಸುವುದಂತೂ ಕಷ್ಟಕರ. ಹೀಗಾಗಿ ಸರ್ಕಾರ ಸಬ್ಸಿಡಿ ಪ್ರಮಾಣವನ್ನೂ ಹೆಚ್ಚಿಸಿ, ಕಡಿಮೆ ದರದಲ್ಲಿ ಕಚ್ಚಾ ಸಾಮಗ್ರಿಗಳು ಸಿಗುವ ಜತೆಗೆ ಮಾರುಕಟ್ಟೆ ವ್ಯವಸ್ಥೆ ಇನ್ನಷ್ಟು ಸರಳಗೊಳಿಸಬೇಕಿದೆ.
-ರಶೀದ್ ಅಹ್ಮೆದ್ ಖಾದ್ರಿ, ಹಿರಿಯ ಬಿದ್ರಿ ಕಲಾವಿದ, ಬೀದರ
–ಶಶಿಕಾಂತ ಬಂಬುಳಗ