Advertisement

ಸಕಾಲಿಕ : ರಾಷ್ಟ್ರೋತ್ಥಾನದ ಕನಸಿನ ಹಕ್ಕಿಗೆ ಬಂಧನವಿರದಿರಲಿ

10:34 PM Aug 14, 2020 | mahesh |

ಒಮ್ಮೆ ಸ್ವಾಮಿ ವಿವೇಕಾನಂದರನ್ನು ಆಪ್ತರು ಪ್ರಶ್ನಿಸಿದ್ದರಂತೆ- ಯುವ ಶಕ್ತಿಯ ಪ್ರತೀಕದಂತಿರುವ, ಪ್ರಜ್ಞಾವಂತರಾದ ತಾವೇಕೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಬಾರದು? ಅದಕ್ಕೆ ಸ್ವಾಮೀಜಿ ಅರೆಕ್ಷಣ ಮೌನವಾಗಿ ಕಣ್ಮುಚ್ಚಿ ಮತ್ತೆ ಮೃದುವಾಗಿ ಉತ್ತರಿಸಿದರಂತೆ-ಪಕ್ವಗೊಂಡ ಫ‌ಲ ತಾನಾಗಿಯೇ ಮರದಿಂದ ಉದುರುವಂತೆ, ನಮ್ಮಿ ತಾಯ್ನೆಲದ ಬಿಡುಗಡೆ ಶತಃಸಿದ್ಧ; ಸ್ವಾತಂತ್ರ್ಯೋತ್ತರ ಭಾರತಕ್ಕೆ ಅತ್ಯಾವಶ್ಯಕವಾದ ಸಾಂಸ್ಕೃತಿಕ, ಸಭ್ಯ ನೆಲೆಗಟ್ಟಿಗಾಗಿ ಅಪಾರ ಸಂಖ್ಯೆಯ ತರುಣ ಶಕ್ತಿಯ ಅಡಿಪಾಯ ಸೃಜಿಸುವುದೇ ನನ್ನ ಕಾಯಕ’ ಎಂದು.

Advertisement

ನಾಡು ಪರಕೀಯರ ಆಡಳಿತದಿಂದ ಬಿಡುಗಡೆಗೊಂಡ 1947ರ ಆಗಸ್ಟ್‌ 14ರ ಆ ಮಧ್ಯರಾತ್ರಿಯಿಂದ ಇಂದಿನವರೆಗೆ ನದಿಗಳಲ್ಲಿ ಸಾಕಷ್ಟು ನೀರು ಹರಿದಿದೆ. ವಿಶ್ವ ಹತ್ತಾರು ಏರುಪೇರುಗಳನ್ನು ಕಂಡಿದೆ; ಜತೆಗೆ ಭಾರತವೂ ಕೂಡಾ, ನೂತನ ಸಂವಿಧಾನದ ಸಂಗಾತಿಯಾಗಿ ಏಳು ದಶಕಗಳ ಗಡಿದಾಟಿ, ಪ್ರಗತಿ ಪಥದಲ್ಲಿ ಮುಂದಡಿಯಿಡುತ್ತಿದೆ.

2020-ಭಾರತದ ಮಹೋನ್ನತ ಪರ್ವ ಕಾಲ ಆಗಬೇಕು ಎಂದು ಕನಸು ಬಿತ್ತುತ್ತಲೇ ಇದ್ದವರು ಭಾರತರತ್ನ ಡಾ| ಎ.ಪಿ.ಜೆ ಅಬ್ದುಲ್‌ ಕಲಾಂ ಅವರು. ಕನಸುಗಳು ಎಂಬುದು ತೇಲಿ ಬರುವ ಮೋಡಗಳಂತೆ. ಈ ಚಲಿಸುವ ಮೋಡಗಳು, ಮಳೆಯಾಗಿ ಇಳೆಗೆ ಸುರಿಯ ಬೇಕಾಗಿದೆ. ಮೇಘ ಸದೃಶ ಕನಸುಗಳೇ ಬಾನಂಗಳದಲ್ಲಿ ಇಲ್ಲವೆಂದಲ್ಲಿ ವ್ಯಕ್ತಿಗತ ಬದುಕಿನ ವಿಕಸನವೂ ಹೃಸ್ವವೆನಿಸೀತು. ಸ್ವಾತಂತ್ರ್ಯ ಉತ್ಸವದ ಈ ಬಾರಿಯು ಉತ್ಸಾಹ ಚಿಮ್ಮಬೇಕಾದುದು, ಇಂತಹ ಸಾಮಾಜಿಕ ಪ್ರಜ್ಞೆಯ ನಿಖರ, ಪ್ರಖರ ಬೆಳಕಿನಲ್ಲಿ.

ವ್ಯಕ್ತಿ ಮತ್ತು ರಾಷ್ಟ್ರದ ಬದುಕು- ಇವೆರಡೂ ಸರಳರೇಖೆಯಂತಲ್ಲ. ವರ್ಷವೊಂದರ ಹಿಂದೆ ಕನಸಿನಲ್ಲಿಯೂ ಗೋಚರಿಸಿರದ ವ್ಯಾಧಿ ಇಂದು ಸರ್ವರಂಗಗಳಲ್ಲೂ “ಲಕ್ಷ್ಮಣ ರೇಖೆ’ಯನ್ನೇ ನಿರ್ಮಿಸಿದೆ. ಇದರ ನಡುವೆ ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸುವ ಅನಿ ವಾರ್ಯತೆ ಸೃಷ್ಟಿಯಾಗಿದೆ.

“ಯುವಶಕ್ತಿ ರಾಷ್ಟ್ರದ ಉಪ್ಪು’ ಎಂಬ ಚೆಲು ನುಡಿಯಿದೆ. ಅದಕ್ಕೆ ಸಮೀಕರಿಸಿಯೇ “ಹೊಸ ನೆತ್ತರುಕ್ಕುಕ್ಕಿ ಆರಿ ಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟಮುಸಳುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು…’

Advertisement

ಎಂಬ ಕವಿ ಅಡಿಗರ ಭಾವತರಂಗ ನಾಡ ಹಬ್ಬದ ಅನುಭವ, ಅನುಭಾವದ ಸೊಲ್ಲು ಎನಿಸಬೇಕು. ಅಂದು ಮಹಾತ್ಮಾ ಗಾಂಧೀಜಿ ಕಂಡ “ರಾಮ ರಾಜ್ಯ’ದ ಸ್ವಾವಲಂಬಿ “ಗ್ರಾಮ ರಾಜ್ಯ’ ವಾಸ್ತವಿಕ ಅನುಭೂತಿಗಾಗಿ ಭಾರತದ ಹೃದಯ ಮಿಡಿಯುವ ಕಾಲಘಟ್ಟದಲ್ಲಿ ನಾವಿ ದ್ದೇವೆ. ರಾಷ್ಟ್ರರಕ್ಷಣೆ ಮತ್ತು ಆರ್ಥಿಕ ಪುನ ಶ್ಚೇತನದ ಮಜಲುಗಳಿಗೆ ಧೀಮಂತ ನಾಯ ಕತ್ವದ ಶ್ರೀರಕ್ಷೆ ಹೊಂದಿದ ನಮ್ಮ ಭಾರತದ ಮುಂಗನಸುಗಳಿಗೆ ನಾವಿಂದು ಮನೆ, ಮನ ತೆರೆದಿಡಬೇಕಾಗಿದೆ.

ಪರಿವರ್ತನೆ “ಸಾರ್ವಕಾಲಿಕ ಯುಗ ಧರ್ಮ; ಭಾರತದ ವಿಶಾಲ ಭೂಮಿಗೆ ಹಸುರು ಹೊದಿಸುವ, ಬೆಳೆ ಬೆಳೆ ಯುವ ಕೃಷಿಗೆ ನಮ್ಮ ನೆಲದ ಇಂದಿನ ಹಾಗೂ ಮುಂದಿನ ಕಾಯಕದ ದೀಕ್ಷೆ ಆಗಬೇಕು. ಮಾನವ ಸಂಪನ್ಮೂಲದ ಸದ್ಬಳಕೆಗೆ “ನೂತನ ಶಿಕ್ಷಣ ನೀತಿ’ ಮೂಲಧಾತು ಒದಗಿಸಬೇಕು. ಹಿಮಗಿರಿಯ ಕಣಿವೆಗಳಲ್ಲಿ ಅಬ್ಬರಿಸುವ ವೈರಿಸೆಲೆಗೆ ಸಡ್ಡು ಹೊಡೆಯುವ ನೆಲ, ಜಲ, ನಭದ ಶಕ್ತಿಸಂವರ್ಧನೆಗೆ ಇನ್ನಷ್ಟು ಕಸು ತುಂಬಿ ಬರಬೇಕು. ಸರ್ವರ ಸಹಕಾರ, ಸರ್ವರ ವಿಶ್ವಾಸ, ಸಮಷ್ಟಿಯ ಅಭಿವೃದ್ಧಿ ಹಳ್ಳಿಯಿಂದ ದಿಲ್ಲಿಯವರೆಗೆ ಪ್ರಾತ್ಯಕ್ಷಿಕೆ ಎನಿಸಬೇಕು.

ನವೀನ ಚಿಂತನೆಯೇ ಮೂಲಾಧಾರ. ಭಾರತ ಸಂವಿಧಾನ ಪಡಿಮೂಡಿಸುವ ಮೂಲಭೂತ ಕರ್ತವ್ಯಗಳಲ್ಲಿ ಒಂದು ಎನಿಸಿರುವ ವೈಜ್ಞಾನಿಕ ಮನೋಭೂಮಿಕೆ, ಮಾನವೀಯತೆ ನಮ್ಮೆಲ್ಲರ ನಾಡಗೀತೆಯ ಆಂತರಿಕ ಸತ್ತ್ವ ಎನಿಸಬೇಕು. ದುಡಿಯುವ ಕೈಗಳಿಗೆ, ಧನಾತ್ಮಕ ಚಿಂತನೆಗೆ ಎಂದೂ “ಕೋವಿಡ್ ಅಬ್ಬರ’ ಭಾದಿಸದು. ಸ್ವತಂತ್ರ ಭಾರತದ ಕನಸಿನ ಉತ್ಥಾನದ ಹಕ್ಕಿಗೆ ಬಂಧನ ಇರದಿರಲಿ, ಪ್ರಗತಿಯ ನಭದಲ್ಲಿ ವಿಹರಿಸುವ ಹಕ್ಕಿಗೆ ಎಂದೂ ಬಂಧನ ಇರದಿರಲಿ.

ಡಾ| ಪಿ.ಅನಂತಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next