Advertisement

ಮೆದುಳು ಜ್ವರ ಲಸಿಕೆ ಪಡೆಯಲು ಭಯಬೇಡ

11:30 PM Dec 15, 2022 | Team Udayavani |

ಮಣಿಪಾಲ: ಮೆದುಳು ಜ್ವರ ವೈರಸ್‌ನಿಂದ ಹರಡುವ ಕಾಯಿಲೆ. ಬ್ಯಾಕ್ಟೀರಿಯಾದಿಂದ ಹಬ್ಬಿದರೆ ಇದಕ್ಕೆ ಆ್ಯಂಟಿಬಯೋಟಿಕ್‌ ಲಭ್ಯವಿದೆ. ಆದರೆ ವೈರಸ್‌ ರೋಗಕ್ಕೆ ಆ್ಯಂಟಿಬಯೋಟಿಕ್‌ ಇಲ್ಲ. ಈ ನಿಟ್ಟಿನಲ್ಲಿ 1ರಿಂದ 15 ವರ್ಷದೊಳಗಿನ ಎಲ್ಲ ಮಕ್ಕಳೂ ಕಡ್ಡಾಯವಾಗಿ ಲಸಿಕೆ ಪಡೆಯಬೇಕು, ಭಯ ಬೇಡ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಮತ್ತು ಮಣಿಪಾಲ ಕೆಎಂಸಿ ಮಕ್ಕಳ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಲೆಸ್ಲಿ ಲೂವಿಸ್‌ ಹೇಳಿದರು.

Advertisement

ಜೆಇ ಲಸಿಕೆಗೆ ಸಂಬಂಧಿಸಿ “ಉದಯವಾಣಿ’ ಮತ್ತು ಉದಯವಾಣಿ ಆನ್‌ಲೈನ್‌ ವಿಭಾಗದ ವತಿಯಿಂದ ಮಣಿಪಾಲದ ಉದಯವಾಣಿ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಜೆಇ ಲಸಿಕೆ ಪಡೆಯದೆ ಮೆದುಳು ಜ್ವರ ಬಾಧಿಸಿದವರಿಗೆ ಜ್ವರ, ಮೈಕೈ ನೋವು, ವಾಂತಿ, ಫಿಟ್ಸ್‌, ಮಾತನಾಡಲಾಗದ ಸ್ಥಿತಿಯೂ ಎದುರಾಗಬಹುದು. ಪೂರ್ಣ ಗುಣಮುಖರಾಗುವುದು ಕಷ್ಟ. ಸಾವು ಬಂದರೂ ಅಚ್ಚರಿಯಲ್ಲ. ಒಂದು ಬಾರಿ ಮೆದುಳು ನಿಷ್ಕ್ರಿಯಗೊಂಡರೆ ಸರಿಪಡಿಸುವುದು ಕಷ್ಟ ಎಂದರು.

ಹರಡುವ ಬಗೆ ಹೇಗೆ?:

ಹಂದಿಗಳಿಂದ ಪಕ್ಷಿ, ಪಕ್ಷಿಗಳಿಂದ ಸೊಳ್ಳೆ, ಸೊಳ್ಳೆಯಿಂದ ಮನುಷ್ಯರಿಗೆ, ಕೊಕ್ಕರೆಯಂತಹ ಪಕ್ಷಿಗಳಿಂದ ಇದು ಹೆಚ್ಚಾಗಿ ಹರಡುತ್ತದೆ. ಜೂನ್‌ನಿಂದ ಜನವರಿ ವರೆಗೆ ಇದು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಎಂದರು.

ಲಕ್ಷಣಗಳೇನು?:

Advertisement

3ರಿಂದ 5 ದಿನ ಜ್ವರವಿರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು ಹೆಚ್ಚು ಮಲಗುತ್ತಾರೆ. ನಡೆದಾಡಲು, ಮಾತನಾಡಲು, ನುಂಗಲು ಕಷ್ಟವಾಗುವುದು ಮೆದುಳು ಜ್ವರದ ಲಕ್ಷಣಗಳಾಗಿವೆ. ಶಾಲೆಗೆ ಹೋಗುವ ಮಕ್ಕಳು ಉತ್ಸಾಹದಿಂದ ಇರದಿರುವುದೂ ಕೂಡ ಇದರ ಮುನ್ಸೂಚನೆಯಾಗಿದೆ.

ಡಿ. 25ವರೆಗೆ ಉಚಿತ ಲಸಿಕೆ: ಜೆಇ ಲಸಿಕೆ ತೆಗೆದುಕೊಂಡರೆ ಅಡ್ಡಪರಿಣಾಮವಿಲ್ಲ. ಜ್ವರ, ಸಾಮಾನ್ಯ ಜ್ವರ, ಇಂಜೆಕ್ಷನ್‌ ನೀಡಿದ ಜಾಗದಲ್ಲಿ ನೋವು, ಸುಸ್ತು ಉಂಟಾಗಬಹುದು. 2-3 ದಿನದಲ್ಲಿ ಗುಣಮುಖವಾಗುತ್ತದೆ. ಗುಣಮುಖರಾಗದಿದ್ದಲ್ಲಿ 9449843213 ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ವೈದ್ಯರ ತಂಡ ಬಂದು ತಪಾಸಣೆ ನಡೆಸಲಿದೆ. ಜ್ವರವಿದ್ದು, ಔಷಧ ತೆಗೆದುಕೊಳ್ಳುತ್ತಿರುವವರು ಗುಣ ಮುಖರಾದ ಬಳಿಕ ಲಸಿಕೆ ತೆಗೆದುಕೊಂಡರೆ ಉತ್ತಮ. ಡಿ. 25ರ ವರೆಗೆ ಈ ಲಸಿಕೆಯನ್ನು ನೀಡಲಾಗುತ್ತದೆ. ಬಳಿಕ ಬಂದವರು ಶುಲ್ಕ ಪಾವತಿಸಿ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next