Advertisement

ದೇಣಿಗೆ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಸಜ್ಜು

11:58 AM Feb 14, 2017 | |

ಬೆಂಗಳೂರು: ಮುಖ್ಯಮಂತ್ರಿಗಳಿಂದ ಕಾಂಗ್ರೆಸ್‌ ವರಿಷ್ಠರಿಗೆ 1000 ಕೋಟಿ ರೂ.ರವಾನೆ, ಉಕ್ಕಿನ ಮೇಲ್ಸೇತುವೆ ಕಾಮಗಾರಿಗಾಗಿ 65 ಕೋಟಿ ರೂ. ಕಮಿಷನ್‌ ಸಂದಾಯ ಸೇರಿದಂತೆ ರಾಜ್ಯದ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಫೆ. 28ರಂದು ರಾಜ್ಯಾದ್ಯಂತ ಬೃಹತ್‌ ಹೋರಾಟ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.

Advertisement

ಪಕ್ಷದ ಕಚೇರಿಯಲ್ಲಿ ಸೋಮವಾರ ಸಂಜೆ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ಅಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಅಂದು ನಡೆಯುವ ಹೋರಾಟದ ನೇತೃತ್ವವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಬೆಳಗಾವಿಯಲ್ಲಿ ನಡೆಯುವ ಹೋರಾಟದ ನೇತೃತ್ವವನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಮತ್ತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ವಹಿಸಿಕೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬಿಜೆಪಿ ಸಂಸ್ಥಾಪನಾ ದಿನವಾದ ಏ. 6ರಂದು ರಾಜ್ಯದ 57 ಸಾವಿರ ಬೂತ್‌ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಅಂದು ಬೂತ್‌ ಸಮಿತಿಗಳ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜ ಹಾರಿಸುವುದು, ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮಶತಾಬ್ಧಿ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಏ. 14ರಂದು  ದಲಿತರೆಡೆಗೆ ನಡಿಗೆ ಕಾರ್ಯಕ್ರಮ ಆಯೋಜಿಸಲು  ನಿರ್ಧರಿಸಲಾಯಿತು

ಪದಾಧಿಕಾರಿಗಳ ಬದಲಾವಣೆ ಚರ್ಚೆ­ಯಾಗಿಲ್ಲ: ಭಿನ್ನಮತಕ್ಕೆ ಕಾರಣವಾಗಿದ್ದ ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಬದಲಾವಣೆ ಕುರಿತಂತೆ ಕೋರ್‌ ಕಮಿಟಿ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪದಾಧಿಕಾರಿಗಳ ಪಟ್ಟಿ ಬದಲಾವಣೆ ಕುರಿತಂತೆ ಇರುವ ಸಮಸ್ಯೆಗಳನ್ನು ನಾನು ಬಗೆಹರಿಸುತ್ತೇನೆ. ಈ ಕುರಿತು ಬೇಸರಗೊಂಡಿರುವವರು ಮತ್ತು ಅಸಮಾಧಾನಿತರನ್ನು ಕರೆಸಿ ಸಮಾಧಾನ ಮಾಡುತ್ತೇನೆ.

ಮುಂದೆ ಪಕ್ಷದಲ್ಲಿ ಯಾವುದೇ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಅಲ್ಲದೆ, ಕೋರ್‌ ಕಮಿಟಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುವುದು ಬೇಡ ಎಂಬ ಸೂಚನೆಯನ್ನೂ ಕೊಟ್ಟಿದ್ದರು. ಹೀಗಾಗಿ ಪದಾಧಿಕಾರಿಗಳ ಪಟ್ಟಿ ಬದಲಾವಣೆ ಕುರಿತ ತೀರ್ಮಾನವನ್ನು ರಾಜ್ಯ ನಾಯಕರು ಮುರಳೀಧರರಾವ್‌ ಅವರಿಗೆ ವಹಿಸಲು ನಿರ್ಧರಿಸಿದರು. 

Advertisement

ಬಿಜೆಪಿ ವಕ್ತಾರರಾಗಿ ಅಶ್ವಥ್‌ನಾರಾಯಣ ನೇಮಕ
ಬೆಂಗಳೂರು:
ವಿಧಾನ ಪರಿಷತ್‌ನ ಮಾಜಿ ಸದಸ್ಯ ಅಶ್ವಥ್‌ ನಾರಾಯಣ ಅವರನ್ನು ಮಾಧ್ಯಮ ವಕ್ತಾರರನ್ನಾಗಿ ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೋಮವಾರ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಅಶ್ವಥ್‌ ನಾರಾಯಣ್‌ ಅವರು ಬಿಜೆಪಿಯ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. ಯಡಿಯೂರಪ್ಪನವರು ರಾಜ್ಯಾಧ್ಯಕ್ಷರಾದ ನಂತರ ಪದಾಧಿಕಾರಿಗಳ ಬದಲಾವಣೆ ಸಂದರ್ಭದಲ್ಲಿ ಅಶ್ವಥ್‌ ನಾರಾಯಣ ಅವರ ಹೆಸರನ್ನು ವಕ್ತಾರರ ಪಟ್ಟಿಯಿಂದ ಕೈ ಬಿಡಲಾಯಿತು. 

ಆರ್ಥಿಕತೆ ಹಳಿ ತಪ್ಪಲು ಯುಪಿಎ ಕಾರಣ 
ಬೆಂಗಳೂರು: 
ದೇಶದ ಆರ್ಥಿಕ ವ್ಯವಸ್ಥೆ ಹಳಿ ತಪ್ಪಲು ಯುಪಿಎ ಸರ್ಕಾರ ನೇರ ಕಾರಣ. 10 ವರ್ಷಗಳ ಯುಪಿಎ ಆಡಳಿತದಲ್ಲಿ ಲಕ್ಷಾಂತರ ಕೋಟಿ ರೂ. ಲೂಟಿಯಾಗಿತ್ತು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ಜೇಟಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ನಗರದಲ್ಲಿ ನಡೆದ “2017ರ ಬಜೆಟ್‌ ಪೂರ್ವ ನೋಟ’ ವಿಚಾರ ಸಂಕಿರಣದಲ್ಲಿ  ಮಾತನಾಡಿದ ಅವರು, “2ಜಿ ಹಗರಣ, ಕಲ್ಲಿದ್ದಲು, ಕಾಮನ್‌ವೆಲ್ತ್‌ ಕ್ರೀಡಾಕೂಟ ಹಗರಣವು ಸೇರಿದಂತೆ ಯುಪಿಎ ಸರ್ಕಾರ ಲಕ್ಷಾಂತರ ಕೋಟಿ ರೂ. ಹಗರಣದಲ್ಲಿ ಶಾಮೀಲಾಗಿದೆ.ಇದು ಆರ್ಥಿಕಾಭಿವೃದ್ಧಿ ಮತ್ತು ಜಿಡಿಪಿ ಕುಸಿತಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು. 

ಬಿಎಸ್‌ವೈ-ಈಶ್ವರಪ್ಪ ಭಾಯಿ ಭಾಯಿ
ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ರಾಜಿ ಸಂಧಾನದ ನಂತರ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ಮುನಿಸು ಶಮನಗೊಂಡಿರುವುದು ಸೋಮವಾರದ ಕೋರ್‌ ಕಮಿಟಿ ಸಭೆಯಲ್ಲಿ ಮೇಲ್ನೊಟಕ್ಕೆ ಕಾಣಿಸಿಕೊಂಡಿತು. ಸಭೆಯುದ್ದಕ್ಕೂ ಈಶ್ವರಪ್ಪ ಮತ್ತು ಯಡಿಯೂರಪ್ಪ ನಗುನಗುತ್ತಾ ಪರಸ್ಪರ ಮಾತನಾಡುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next