Advertisement

ಹೆನ್ನಾ ಚಂಡಮಾರುತಕ್ಕೆ ಭಾಗಶಃ ಕುಸಿದ ಟ್ರಂಪ್‌ ಗೋಡೆ

03:09 AM Jul 28, 2020 | Hari Prasad |

ಕಾರ್ಪಸ್‌ ಕ್ರಿಸ್ಟಿ: ಮೆಕ್ಸಿಕೋದಿಂದ ಅಮೆರಿಕಕ್ಕೆ ಅಕ್ರಮವಾಗಿ ಬರುವ ವಲಸೆಗಾರರನ್ನು ತಡೆಯಲು ನಿರ್ಮಿಸಲಾಗುತ್ತಿರುವ ತಡೆಗೋಡೆಯ ಭಾಗ ಕುಸಿದಿದೆ.

Advertisement

ಹೆನ್ನಾ ಚಂಡಮಾರುತದಿಂದಾಗಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆ, ಪ್ರವಾಹದ ರಭಸವನ್ನು ಎದುರಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಮಹತ್ವಾಕಾಂಕ್ಷಿ ಯೋಜನೆ ವಿಫ‌ಲವಾಗಿದೆ.

ಮಳೆಯ ರಭಸಕ್ಕೆ ಗೋಡೆ ಕುಸಿಯುವ ವೀಡಿಯೋವನ್ನು ಟ್ವೀಟ್‌ ಮಾಡಲಾಗಿದ್ದು, ಸದ್ಯ ಅದು ವೈರಲ್‌ ಆಗಿದೆ.

ಮೆಕ್ಸಿಕೋದಿಂದ ಅಮೆರಿಕಕ್ಕೆ ಬರುವ ಅಕ್ರಮ ವಲಸಿಗರನ್ನು ತಡೆಯಲು 1.61 ಲಕ್ಷ ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುವ ಘೋಷಣೆ ಮಾಡಿದ್ದರು. ಈಗಾಗಲೇ 82,200 ಕೋಟಿ ರೂ. ಮೊತ್ತ ಖರ್ಚು ಮಾಡಲಾಗಿದೆ. ವೈರಲ್‌ ಆಗಿರುವ ದೃಶ್ಯದ ಪ್ರಕಾರ ಬಿರುಗಾಳಿ ಹಾಗೂ ಮಳೆಯಿಂದಾಗಿ ಗೋಡೆಯ ಒಂದು ಭಾಗವು ಬಾಗಿದೆ. ದೃಶ್ಯದಲ್ಲಿ ಉಕ್ಕಿನಿಂದ ನಿರ್ಮಿಸಿರುವ ಗೋಡೆ ನೆಲಕ್ಕೆ ಬಾಗಿದೆ. ಇದರ ಹಿಂದೆ ನಿಂತು ಕಟ್ಟಡ ಕಾರ್ಮಿಕರು ವೀಕ್ಷಿಸುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅಧ್ಯಕ್ಷ ಟ್ರಂಪ್‌ ತಮ್ಮ ಯೋಜನೆಯನ್ನು ಸಮರ್ಥಿಸಿ ಮಾತನಾಡಿದ್ದ ವೇಳೆ, “ಈ ಯೋಜನೆ ಗಡಿಭಾಗದಲ್ಲಿ ನಿರ್ಮಿಸಲಾಗುತ್ತಿರುವ ವಿಶ್ವದ ಬಲಿಷ್ಠ ಯೋಜನೆ’ ಎಂದು ಹೇಳಿಕೊಂಡಿದ್ದರು. ಅಕ್ಟೋಬರ್‌-ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹೀಗಾಗಿ, ಗೋಡೆಯ ಭಾಗ ಕುಸಿದು ಹೋಗಿರುವುದರ ಬಗ್ಗೆ ವ್ಯಂಗ್ಯಯುಕ್ತ ಟೀಕೆಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ.

Advertisement

ಟೆಕ್ಸಾಸ್‌ನಲ್ಲಿ ಪ್ರವಾಹ: ದಕ್ಷಿಣ ಟೆಕ್ಸಾಸ್‌ ಕರಾವಳಿ ತೀರದಲ್ಲಿ ಶನಿವಾರ ಸಂಜೆ ಅಪ್ಪಳಿಸಿದ ಹೆನ್ನಾ ಚಂಡಮಾರುತ ದುರ್ಬಲವಾಗಿದೆ. ಇದರ ಹೊರತಾಗಿಯೂ ಭಾರೀ ಮಳೆಯಾಗುತ್ತಿದೆ. ಈಗಾಗಲೇ ಕೋವಿಡ್ 19 ಬಾಧಿತವಾಗಿರುವ ಟೆಕ್ಸಾಸ್‌ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ರಸ್ತೆಗಳು, ಹೆದ್ದಾರಿಗಳು ಜಲಾವೃತವಾಗಿವೆ.

ಕಾರ್ಪಸ್‌ ಕ್ರಿಸ್ಟಿಯ ಹಡಗು ಕಟ್ಟೆಯಲ್ಲಿ ಭಾರೀ ಹಾನಿಯಾಗಿದೆ. ಟೆಕ್ಸಾಸ್‌ ರಾಜ್ಯದ ವಿವಿಧೆಡೆ ಮರಗಳು, ವಿದ್ಯುತ್‌ ಕಂಬಗಳು, ಕಟ್ಟಡಗಳಿಗೆ ಹಾನಿಯಾಗಿದ್ದು, ವಿದ್ಯುತ್‌ ಸಂಪರ್ಕ ಕಡಿತವಾಗಿದ್ದರಿಂದ ಸಹಸ್ರಾರು ಮಂದಿ ತೊಂದರೆಗೆ ಸಿಲುಕಿದ್ದರು. ರಕ್ಷಣಾ ಪಡೆಗಳು ಹಾಗೂ ಕೋವಿಡ್ 19 ಟೆಸ್ಟ್‌ ಮೊಬೈಲ್‌ ತಂಡಗಳನ್ನು ನಿಯೋಜಿಸಲಾಗಿದ್ದು, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧ್ಯಕ್ಷ ಟ್ರಂಪ್‌ಗೆ ಹಿನ್ನಡೆ
ಅಧ್ಯಕ್ಷೀಯ ಚುನಾವಣೆಗೆ 100 ದಿನಗಳು ಉಳಿದಿವೆ. ಅದರ ನಡುವೆಯೇ ಹಲವು ನಗರಗಳಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಅದರ ನಡುವೆಯೇ ನಡೆದ ಸಮೀಕ್ಷೆಯಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವರ್ಚಸ್ಸು ಇಳಿಮುಖವಾಗಿದೆ.

ಪೋರ್ಟ್‌ಲ್ಯಾಂಡ್‌, ಸಿಯಾಟಲ್‌, ಶಿಕಾಗೋ, ಬಾಲ್ಟಿಮೋರ್‌ ಮತ್ತು ಫಿಲಡೆಲ್ಫಿಯಾಗಳಲ್ಲಿ ಡೆಮಾಕ್ರಾಟಿಕ್‌ ಪಕ್ಷದ ಆಡಳಿತ ಇದೆ. ಅಲ್ಲಿಯೇ ಹೆಚ್ಚು ಪ್ರತಿಭಟನೆಗಳು ನಡೆದಿವೆ. ಇದರ ಜತೆಗೆ ಕೊರೊನಾ ಪರಿಸ್ಥಿತಿ ನಿಭಾಯಿಸುತ್ತಿರುವ ಅಂಶವೂ ಅವರಿಗೆ ಸದ್ಯದ ಪರಿಸ್ಥಿತಿಯಲ್ಲಿ ವರ್ಚಸ್ಸು ಕೊಂಚ ತಗ್ಗುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next