Advertisement

ಅಮೆರಿಕ: ಕಚ್ಚಾತೈಲ ಮಾರುಕಟ್ಟೆ ಕುಸಿತಕ್ಕೆ ಟ್ರಂಪ್‌ ಕಕ್ಕಾಬಿಕ್ಕಿ

03:37 PM Apr 23, 2020 | sudhir |

ಮಣಿಪಾಲ: ಇತಿಹಾಸದಲ್ಲೆ ಅಮೆರಿಕದ ತೈಲ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಕಚ್ಚಾತೈಲ ದರ ಶೂನ್ಯಕ್ಕಿಂತ ಕೆಳಗೆ ಇಳಿದಿದೆ. ಅಮೆರಿಕದ ತೈಲ ಮಾರುಕಟ್ಟೆಯ ಮಾನದಂಡ ದರವಾದ ವೆಸ್ಟ್ ಟೆಕ್ಸಾಸ್‌ ಇಂಟರ್‌ಮೀಡಿಯೆಟ್‌ನ (ಡಬ್ಲೂಟಿಇ) ಏಷ್ಯಾದ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ ಬೆಲೆ ಮೈನಸ್‌ 37.63 ಡಾಲರ್‌ಗೆ ಕುಸಿದಿದ್ದು, ಅಂತಾರಾಷ್ಟ್ರೀಯ ಮಟ್ಟದ ಬ್ರೆಂಟ್‌ ದರ್ಜೆಯ ತೈಲ ದರ ಪ್ರತಿ ಬ್ಯಾರೆಲ್‌ಗೆ 1.78 ಡಾಲರ್‌ ಕಡಿಮೆಯಾಗಿ 26.30 ಡಾಲರ್‌ಗೆ ಇಳಿದಿದೆ. ಅತಿ ಹೆಚ್ಚು ತೈಲ ಉತ್ಪಾದನೆಯಾಗಿ ಸಂಗ್ರಹಾಗಾರಗಳು ಭರ್ತಿಯಾಗಿದ್ದು ಇನ್ನು ದಾಸ್ತಾನು ಮಾಡಲು ಸ್ಥಳ ಇಲ್ಲದ ಕಾರಣ ತೈಲ ಉತ್ಪಾದನಾ ಕಂಪೆನಿಗಳೇ ಗ್ರಾಹಕರಿಗೆ ತೈಲ ಕೊಂಡುಕೊಳ್ಳಿ ಎಂದು ಗೋಗರೆಯುವ ಸ್ಥಿತಿಗೆ ಬಂದಿವೆ.

Advertisement

ದೇಶದ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೀಗ ಕಳೆಗುಂದಿದ ತೈಲ ಮಾರುಕಟ್ಟೆಗೂ ಜೀವ ತುಂಬಬೇಕಾದ ಒತ್ತಡ ನಿರ್ಮಾಣವಾಗಿದೆ.

ಕುಸಿಯಲು ಬಿಡುವುದಿಲ್ಲ
ದೇಶದ ಕಚ್ಚಾತೈಲ ಮಾರುಕಟ್ಟೆಧಾರಣೆ ಐತಿಹಾಸಿಕ ಮಟ್ಟಕ್ಕೆ ಬೆಲೆ ಕುಸಿತ ಕಂಡ ತತ್‌ಕ್ಷಣ ಎಚ್ಚೆತ್ತುಕೊಂಡ ಟ್ರಂಪ್‌, “ಎಂದಿಗೂ ಅಮೆರಿಕ ತೈಲ ಮತ್ತು ಅನಿಲ ಉದ್ಯಮವನ್ನು ಕುಸಿಯಲು ಬಿಡುವುದಿಲ್ಲ’ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತೈಲ ಉತ್ಪಾದಕರಿಗೆ ಅನುಕೂಲವಾಗುವಂಥ ಆರ್ಥಿಕ ನೆರವು ಯೋಜನೆ ರೂಪಿಸಲು ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜತೆಗೆ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ದೇಶದ ಇಂಧನ ಕಾರ್ಯದರ್ಶಿ ಮತ್ತು ಆರ್ಥಿಕ ಮುಖ್ಯಸ್ಥರಿಗೆ ಈಗಾಗಲೇ ಸೂಚನೆ ನೀಡಿದ್ದು, ಮಾರುಕಟ್ಟೆ ಸುಧಾರಣೆಗೆ ಆರ್ಥಿಕ ನೆರವು ಒದಗಿಸಲಾಗುವುದು. ಈ ಮೂಲಕ ಪ್ರಮುಖ ತೈಲ ಕಂಪನಿಗಳ ಮತ್ತು ಉದ್ಯೋಗಿಗಳನ್ನು ನಿರುದ್ಯೋಗ ಸಮಸ್ಯೆಯಿಂದ ಪಾರುಮಾಡಲಾಗುವುದು ಎಂದು ಹೇಳಿದ್ದಾರೆ.

ಬೇಡಿಕೆ ಇಳಿಕೆಗೆ ಕಾರಣ ?
ಅಮೆರಿಕದಲ್ಲಿ ತೈಲ ಮಾರುಕಟ್ಟೆಗೆ ಸಂಬಂಧಪಟ್ಟ ಮೇ ತಿಂಗಳ ಫ್ಯೂಚರ್‌ ಕಾಂಟ್ರ್ಯಾಕ್ಟ್ ಖರೀದಿ ಮಂಗಳವಾರ ಮುಕ್ತಾಯವಾಗಿದೆ. ಈ ಬೆಳವಣಿಗೆಯಿಂದ ಬೇಡಿಕೆ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಚಿಲ್ಲರೆ (ರಿಟೇಲ್‌) ವ್ಯಾಪಾರಿಗಳ ಬಳಿ ಈಗಾಗಲೇ ಸಂಗ್ರಹವಾದ ತೈಲವೇ ಖರ್ಚಾಗಿಲ್ಲ. ಹೀಗಾಗಿ ಪುಕ್ಟಟೆ ಕೊಟ್ಟರೂ ಕೊಳ್ಳುವ ವರಿಲ್ಲವಾಗಿದೆ.

Advertisement

ಸಂಗ್ರಹಾಗಾರಗಳು ಭರ್ತಿ
ಈಗ ಉತ್ಪಾದಕರೇ ಹಣ ಕೊಟ್ಟು ತೈಲ ತುಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕದ ಎಲ್ಲ ತೈಲಾಗಾರಗಳು ತುಂಬಿದ್ದು, ದೇಶದ ಅತೀ ದೊಡ್ಡ ಒಕ್ಲಹೋಮಾದ ಕುಶಿಂಗ್‌ನಲ್ಲಿಯೂ ಮುಂದಿನ ಮೂರು ವಾರಗಳಲ್ಲೂ ತೈಲ ಸಂಗ್ರಹಣೆಗೆ ಅವಕಾಶವಿಲ್ಲ. ಇದರ ಹೊರತಾಗಿ ಜಾಗತಿಕವಾಗಿ ಫುಜೈರಾ ಮತ್ತು ಸಿಂಗಾಪುರದ ಸೇರಿದಂತೆ ಇತರೆ ಸಂಗ್ರಹಾಗಾರಗಳು ಭರ್ತಿಯಾಗಿವೆ.

ರಾಷ್ಟ್ರೀಯ ಕಾರ್ಯತಂತ್ರ ಮೀಸಲು ನಿಕ್ಷೇಪಗಳಿಗೆ ತೈಲ ಬ್ಯಾರೆಲ್‌ಗ‌ಳನ್ನು ಖರೀದಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸುವುದಾಗಿ ಟ್ರಂಪ್‌ ಹೇಳಿದ್ದಾರೆ.

ಆದರೆ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಸದ್ಯ ಲಾಕ್‌ಡೌನ್‌ ಜಾರಿ ಇರುವ ಕಾರಣ ಮುಂಬರುವ ತಿಂಗಳಿನಲ್ಲೂ ಕಚ್ಚಾತೈಲ ದರ ಶೂನ್ಯಕ್ಕಿಂತಲೂ ಕೆಳಗಿಳಿಯಬಹುದು ಎಂದು ಅಂದಾಜಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next