Advertisement

ದೀಪ ಬೆಳಗಿ ದೀಪಾವಳಿ ಆಚರಿಸಿದ ಟ್ರಂಪ್‌, ಪುತ್ರಿ ಇವಾಂಕಾ

11:38 AM Oct 18, 2017 | Team Udayavani |

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಶ್ವೇತಭವನದಲ್ಲಿ ಭಾರತೀಯ ಬೆಳಕಿನ ಹಬ್ಬವಾದ ದೀಪಾವಳಿಯನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದ್ದಾರೆ. 

Advertisement

ಟ್ರಂಪ್‌ ಹಾಗೂ ಅವರ ಪುತ್ರಿ ಇವಾಂಕಾ ಅವರು ದೀಪ ಬೆಳಗಿಸಿ, ಅಜ್ಞಾನದ ಕತ್ತಲನ್ನು ದೂರ ಮಾಡುವ ಬೆಳಕಿನ ಹಬ್ಬ ದೀಪಾವಳಿಗೆ ಸಡಗರದ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ನೆರೆದ ಗಣ್ಯರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಉದ್ಯಮ ಮತ್ತು ಶಿಕ್ಷಣವೇ ಮುಂತಾಗಿ ಹಲವಾರು ಕ್ಷೇತ್ರಗಳಲ್ಲಿ ಅಸಾಮಾನ್ಯ ಕೊಡುಗೆ ನೀಡುತ್ತಿರುವ ಮತ್ತು ಅಮೆರಿಕದ ಅಭಿವೃದ್ಧಿಯಲ್ಲಿ ತಮ್ಮ ಯೋಗದಾನ ಸಲ್ಲಿಸುತ್ತಿರುವ ಭಾರತೀಯ ಅಮೆರಿಕನ್ನರ ಅತ್ಯಮೂಲ್ಯ ಕೊಡುಗೆಯನ್ನು ಬಹುವಾಗಿ ಪ್ರಶಂಸಿಸಿದರು. 

ಶ್ವೇತ ಭವನದಲ್ಲಿ ನಡೆದ ಈ ದೀಪಾವಳಿ ಹಬ್ಬದಾಚರಣೆಯ ಸಂದರ್ಭದಲ್ಲಿ ಟ್ರಂಪ್‌ಗೆ ಅವರ ಆಡಳಿತೆಯಲ್ಲಿರುವ ಹಿರಿಯ ಭಾರತೀಯ ಅಮೆರಿಕನ್‌ ಸದಸ್ಯೆ ಹಾಗೂ ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲಿ, ಅಮೆರಿಕದ ಮೇಡಿಕೇರ್‌ ಮತ್ತು ಮೆಡಿಕೇಡ್‌ ಸೇವಾ ಕೇಂದ್ರದ ಮುಖ್ಯಸ್ಥೆಯಾಗಿರುವ ಸೀಮಾ ವರ್ಮಾ ಮುಂತಾಗಿ ಹಲವರು ಜತೆ ನೀಡಿ, ದೀಪಾವಳಿ ಸಂಭ್ರಮವನ್ನು ಹಂಚಿಕೊಂಡರು.

ಯುಎಸ್‌ ಫೆಡರಲ್‌ ಕಮ್ಯುನಿಕೇಶನ್ಸ್‌ ಕಮಿಷನ್‌ನ ಅಧ್ಯಕ್ಷರಾಗಿರುವ ಅಜಿತ್‌ ಪೈ ಮತ್ತು ಮುಖ್ಯ ಉಪ ಮಾಧ್ಯಮ ಕಾರ್ಯದರ್ಶಿಯಾಗಿರುವ ರಾಜ್‌ ಶಾ ಅವರೂ ದೀಪಾವಳಿ ಹಬ್ಬದಾಚರಣೆಯಲ್ಲಿ ಭಾಗಿಗಳಾದರು. 

Advertisement

ಟ್ರಂಪ್‌ ಅವರು ಈ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತನ್ನ ಬಲವಾದ ಸಂಬಂಧಕ್ಕೆ ತಾನು ಅತ್ಯಂತ ಮಹತ್ವದ ಮೌಲ್ಯ ನೀಡುವುದಾಗಿ  ಹೇಳಿದರು. 

ಶ್ವೇತಭವನದಲ್ಲಿ ದೀಪಾವಳಿ ಹಬ್ಬದಾಚರಣೆಯನ್ನು ಆರಂಭಿಸಿದವರು ಅಧ್ಯಕ್ಷ ಜಾರ್ಜ್‌ ಬುಶ್‌. ಆದರೆ ಅವರು ವೈಯಕ್ತಿಕವಾಗಿ ಎಂದೂ ಶ್ವೇತಭವನದ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿರಲಿಲ್ಲ. 

ಬರಾಕ್‌ ಒಬಾಮಾ ಅವರು ತಮ್ಮ ಮೊದಲ ವರ್ಷದ ಅಧ್ಯಕ್ಷೀಯ ಸಂದರ್ಭದಲ್ಲಿ ಶ್ವೇತಭವನದ ಪೂರ್ವ ಕೊಠಡಿಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next