ಡೊಂಬಿವಲಿ: ಸುವರ್ಣ ಮಹೋತ್ಸವವನ್ನು ಆಚರಿಸಿದ ತುಳು-ಕನ್ನಡಿಗರ ಪ್ರತಿಷ್ಠಿತ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳದ 53ನೇ ವಾರ್ಷಿಕ ನವರಾತ್ರಿ ಉತ್ಸವವುಡೊಂಬಿವಲಿ ಪಶ್ಚಿಮದ ಕೇತಿ ಭವನದ ಸಮೀಪದಲ್ಲಿ ಹಾಕಿರುವ ಭವ್ಯ ಮಂಟಪದಲ್ಲಿ ವೇದಮೂರ್ತಿ ಪಂಡಿತ್ ಶುಭಕರ ಭಟ್ ಅವರ ವೇದ, ಮಂತ್ರ-ಘೋಷಗಳ ಮಧ್ಯೆ ಶ್ರೀ ದೇವಿಯ ಪ್ರಾಣ ಪ್ರತಿಷ್ಠಾಪನೆಯು ಸೆ. 21ರಂದು ನೇರವೇರಿದ್ದು, ಒಂಭತ್ತು ದಿನಗಳ ಕಾಲ ನಿರಂತರವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆದು, ಸೆ. 30ರಂದು ಸಮಾಪ್ತಿಗೊಂಡಿತು.
ದಿನಂಪ್ರತಿ ಶ್ರೀ ದೇವಿಯ ಪ್ರತಿಮೆಗೆ ವಿವಿಧ ಅಲಂಕಾರಗಳೊಂದಿಗೆ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಸೆ. 30ರಂದು ಸಂಜೆ ಶ್ರೀದೇವಿಯ ಮೂರ್ತಿಯ ವಿಸರ್ಜನ ಮೆರವಣಿಗೆ ನಡೆಯಿತು. ಪುಷ್ಪಾಲಂಕೃತ ವಾಹನ ದಲ್ಲಿ ವಿವಿಧ ವಾದ್ಯ ಘೋಷಗಳು, ನಾಡಿನ ಸಂಸ್ಕೃತಿ-ಸಂಸ್ಕಾರವನ್ನು ಬಿಂಬಿಸುವ ವೇಷಭೂಷಣಗಳು, ಪ್ರಾತ್ಯಕ್ಷಿಕೆ, ಭಜನೆ, ಸುಡುಮದ್ದುಗಳ ಕಲರವದೊಂದಿಗೆ ಮೆರವಣಿಗೆ ನಡೆದಿದ್ದು, ಸಾವಿರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮಂಡಳದ ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ಅಧ್ಯಕ್ಷ ಗೋಪಾಲ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರ ಉಪಸ್ಥಿತಿಯಲ್ಲಿ ನಡೆದ ವಿಸರ್ಜನ ಮೆರವಣಿಗೆಯಲ್ಲಿ ಮರಾಠಿ ಮಣ್ಣಿನ ಡೋಲು ಕುಣಿತ, ಬೊಂಬೆ ಕುಣಿತ, ಯಕ್ಷಗಾನ ನೃತ್ಯ, ಮುಂಡ್ಕೂರು ಕಲಾಭಿಮಾನಿಗಳ ಬಳಗದ ಹುಲಿವೇಷ, ಹರಿ ಓಂ ಅಯ್ಯಪ್ಪ ಭಕ್ತವೃಂದದಿಂದ ತಾಲೀಮು ಪ್ರದರ್ಶನ, ಮಹಿಳೆಯರಿಂದ ಬಣ್ಣಬಣ್ಣದ ಕೊಡೆಗಳ ಪ್ರದರ್ಶನ, ಕರಾವಳಿಯ ಯುವಕ ವೃಂದದಿಂದ ಕೋಲಾಟ, ಮಹಿಳಾ ವಿಭಾಗದಿಂದ ಭಜನೆ ಇತ್ಯಾದಿ ಕಲಾ ಪ್ರದರ್ಶನಗಳು, ಪ್ರಾತ್ಯಕ್ಷಿಕೆಗಳು ಮೆರವಣಿಗೆಯ ಉದ್ದಕ್ಕೂ ಭಕ್ತಾದಿಗಳನ್ನು ಆಕರ್ಷಿಸಿತ್ತು.
ನಗರದ ವಿವಿಧ ತುಳು-ಕನ್ನಡಪರ, ಜಾತೀಯ ಸಂಘಟನೆಗಳಾದ ಡೊಂಬಿವಲಿ ಕರ್ನಾಟಕ ಸಂಘ, ತುಳುನಾಡ ವೆಲ್ಫೆàರ್‌ಅಸೋಸಿಯೇಶನ್, ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ ಸ್ಥಳೀಯ ಸಮಿತಿ, ಮೊಗವೀರ ಸಂಘ ಡೊಂಬಿವಲಿ ಸ್ಥಳೀಯ ಕಚೇರಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ, ಕುಲಾಲ ಸಂಘ ಡೊಂಬಿವಲಿ ಸ್ಥಳೀಯ ಕಚೇರಿ, ರಜಕ ಸಂಘ ಡೊಂಬಿವಲಿ, ಸಮಿತಿ, ದೇವಾಡಿಗ ಸಂಘ ಡೊಂಬಿವಲಿ ಸಮಿತಿ, ಡೊಂಬಿವಲಿ ಹೊಟೇಲ್ ಓನರ್ ಅಸೋಸಿಯೇಶನ್, ಅಜೆªಪಾಡಾ ಶ್ರೀ ಅಯ್ಯಪ್ಪ ಸೇವಾ ಸಂಸ್ಥೆ ಇತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯ ಬಾಂಧವರು, ತುಳು-ಕನ್ನಡಿಗ ಭಕ್ತಾದಿಗಳು, ಅನ್ಯಭಾಷಿಕ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ಗುರುರಾಜ ಪೋತನೀಸ್