ಡೊಂಬಿವಲಿ: ಸಂಗೀತ ಮೈಮನಕ್ಕೆ ನೆಮ್ಮದಿ ನೀಡುವ ದಿವ್ಯ ಔಷಧಿಯಾಗಿದೆ. ಸಂಗೀತಕ್ಕೆ ಮಾರು ಹೋಗದ ಮನಸ್ಸುಗಳು ವಿರಳ. ಸಂಗೀತಕ್ಕೆ ಯಾವುದೇ ರೀತಿಯ ಗಡಿರೇಖೆ ಇರುವುದಿಲ್ಲ ಎಂದು ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಅವರು ನುಡಿದರು.
ಸೆ. 10 ರಂದು ಡೊಂಬಿವಲಿ ಪೂರ್ವದ ಮಂಜುನಾಥ ವಿದ್ಯಾಲಯದ ಸಭಾಗೃಹದಲ್ಲಿ ಕರ್ನಾಟಕ ಸಂಘದ ಸುವರ್ಣ ಮಹೋತ್ಸವ ಸರಣಿ ಕಾರ್ಯಕ್ರಮ-11 ರಾಗ ಲಹರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದ ಸಂಗೀತ ಕ್ಷೇತ್ರಕ್ಕೆ ಕನ್ನಡಿಗರ ಕೂಡುಗೆ ಅಪಾರವಾಗಿದೆ. ಸಂಗೀತವೇ ತಮ್ಮ ಉಸಿರೆಂದು ಸಂಗೀತ ಶಾರದೆಯನ್ನು ನಿರಂತರವಾಗಿ ಆರಾಧಿಸುತ್ತಿರುವ ನಮ್ಮ ಕುಂದಾನಗರಿ ಬೆಳಗಾವಿಯಿಂದ ಸಂಗೀತ ಸುಧೆಯನ್ನು ಹರಿಸಲು ಬಂದ ಪಂಡಿತ್ ರಾಜಪುಟ್ಟ ಧೋತ್ರೆ ಹಾಗೂ ಪಂಡಿತ್ ಮಹೇಶ್ ಕುಲಕರ್ಣಿ ಅವರನ್ನು ಸ್ವಾಗತಿಸುತ್ತಿದ್ದೇನೆ. ಸಂಗೀತವು ನಿಂತ ನೀರಾಗದೆ ಪ್ರತಿಯೊಬ್ಬರ ಮನಸ್ಸಿಗೆ ಮುದ ನೀಡುವ ಜಲಧಾರೆಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ವಿಠಲ್ ಶೆಟ್ಟಿ ಅವರು ಮಾತನಾಡಿ, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಕ್ರಮಗಳನ್ನು ವಿವರಿಸಿ, ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಂಗೀತ ದಿಗ್ಗಜರುಗಳಾದ ಪಂಡಿತ್ ರಾಜ ಪ್ರಭು ಧೋತ್ರೆ ಹಾಗೂ ಪಂಡಿತ್ ಮಹೇಶ್ ಕುಲಕರ್ಣಿ ಅವರನ್ನು ಸಂಘದ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಸಂಘದ ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಅವರು ಸ್ವಾಗತಿಸಿದರು. ವಾಚನಾಲಯ ವಿಭಾಗದ ಕಾರ್ಯಾಧ್ಯಕ್ಷ ರಮೇಶ್ ಕಾಖಂಡಕಿ ಕಾರ್ಯಕ್ರಮ ನಿರ್ವಹಿಸಿದರು. ಸನತ್ ಕುಮಾರ್ ಜೈನ್ ಅವರು ಅತಿಥಿಗಳನ್ನು ಪರಿಚಯಿಸಿದರು.
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಪಂಡಿತ್ ರಾಜಪ್ರಭು ಧೋತ್ರೆ ಅವರು ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಂಡಿತ್ ಪ್ರಕಾಶ್ ಕುಲಕರ್ಣಿ ರಾಗ ಪುರಿಯಾ ಕಲ್ಯಾದಿಂದ ಕಾರ್ಯಕ್ರಮ ಪ್ರಾರಂಭಿಸಿ ತತ್ವಪದ ದಾಸರ ಪದಗಳನ್ನು ಪ್ರಸ್ತುತಪಡಿಸಿದರು. ತುಳು-ಕನ್ನಡಿಗ ಸಂಗೀತ ಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಹಾರ್ಮೋನಿಯಂನಲ್ಲಿ ಜತೀಂದ್ರ ಕರಂಬೆಳಕರೆ, ತಬಲಾದಲ್ಲಿ ವಿನಾಯಕ ನಾಯಕ್, ತಂಬೂರಿಯಲ್ಲಿ ಶಶಾಂಕ್ ಕಾಳೆ, ರಾಜೇಶ್ ಸಾಲ್ಯಾನ್ ಅವರು ಸಹಕರಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಡಾ| ದಿಲೀಪ್ ಕೋಪರ್ಡೆ, ಸನತ್ ಕುಮಾರ್ ಜೈನ್, ಗೌರವ ಕಾರ್ಯದರ್ಶಿ ದೇವದಾಸ್ ಕುಲಾಲ್, ಕೋಶಾಧಿಕಾರಿ ಚಿತ್ತರಂಜನ್ ಆಳ್ವ, ಸತೀಶ್ ಆಲಗೂರ, ಲೋಕನಾಥ ಶೆಟ್ಟಿ, ಗಣೇಶ್ ಶೆಟ್ಟಿ ಐಕಳ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಸಂತ ಕಲಕೋಟಿ, ಗುರುರಾಜ ನಾಯಕ್, ಪ್ರಭಾಕರ ಶೆಟ್ಟಿ, ಮಾಧವ ರಾವ್ ಭಾತಖಂಡ, ರಾಜೇಂದ್ರ ಭಂಡಾರಿ, ಮಹಿಳಾ ವಿಭಾಗದ ಪ್ರಮುಖರಾದ ವಿಮಲಾ ಶೆಟ್ಟಿ, ಮಾಧುರಿಕಾ ಬಂಗೇರ, ಆಶಾ ಶೆಟ್ಟಿ, ಯೋಗಿನಿ ಶೆಟ್ಟಿ, ಸುಷ್ಮಾ ಶೆಟ್ಟಿ, ವಿದ್ಯಾ ಆಲಗೂರ ಮೊದಲಾದವರು ಉಪಸ್ಥಿತರಿದ್ದರು. ವಾಚನಾಲಯ ವಿಭಾಗದ ಗೀತಾ ಕೋಟೆಕಾರ್, ಚಂಚಲಾ ಸಾಲ್ಯಾನ್, ಪರಿಮಳಾ ಕುಲಕರ್ಣಿ, ಪುಷ್ಪಾ ಪಾಲನ್ ಸಹಕರಿಸಿದರು.
ಚಿತ್ರ-ವರದಿ : ಗುರುರಾಜ ಪೋತನೀಸ್.