ಡೊಂಬಿವಲಿ: ಇಂದಿನ ಯಾಂತ್ರೀಕೃತ ಯುಗದಲ್ಲಿ ಮೊಬೈಲ್ ಎಂಬ ರಾಕ್ಷಸನಿಂದಾಗಿ ನಮ್ಮಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಇದರಿಂದ ನಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಿರಂತರ ವಾಚನ ಹಾಗೂ ಸಮಾಜಮುಖೀ ಚಿಂತನೆಗಳಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಲೇಖಕ, ಕತೆಗಾರ ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಅಭಿಪ್ರಾಯಿಸಿದರು.
ಜ. 13 ರಂದು ಡೊಂಬಿವಲಿ ಕರ್ನಾಟಕ ಸಂಘದ ವಾಚನಾ ಲಯ ವಿಭಾಗದ ವತಿಯಿಂದ ಸಂಘದ ಸಭಾಗೃಹದಲ್ಲಿ ನೂತನ ವರ್ಷದ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದ ಇವರು, ಹಲವು ಮಂದಿ ತಮ್ಮದೇ ಆದ ಶೈಲಿಯಲ್ಲಿ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಆದರೆ ನಾನು ಬದುಕು ಕಟ್ಟಿಕೊಂಡಿದ್ದು ವಾಚನಾಲಯದ ಪುಸ್ತಕಗಳಿಂದ ಎಂದು ನುಡಿದು ಒಂದು ಹೊತ್ತಿನ ಗಂಜಿಗೂ ಗತಿಯಿಲ್ಲದೆ ತಮ್ಮ ಬಾಲ್ಯದ ಜೀವನವನ್ನು ನೆನಪಿಸಿಕೊಂಡರು. ನನ್ನ ಸಾಧನೆಗೆ ನನ್ನ ತಾಯಿಯ ಆಶೀರ್ವಾದ ಹಾಗೂ ಮುಂಬಯಿಯ ವಾಚನಾಲಯಗಳ ಕೊಡುಗೆ ಅಪಾರವಿದೆ. ಮನುಷ್ಯ ಸಂಘ ಜೀವಿಯಾಗಿರಬೇಕು. ಫಲಾಪೇಕ್ಷೆಯಿಲ್ಲದ ಮನೋಭಾವನೆಯಿಂದ ಸಮಾಜಮುಖೀ ಸೇವೆಯೊಂದಿಗೆ ಶ್ರಮಿಸಿದರೆ ಸಮಾಜಕ್ಕೆ ಹೊಸ ಬೆಳಕನ್ನು ನೀಡಬಹುದಾಗಿದೆ. ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯವೈಖರಿಯನ್ನು ಕಂಡಾಗ ಸಂತೋಷವೂ ಆಶ್ಚರ್ಯವೂ ಆಗುತ್ತಿದೆ. ಮುಂಬಯಿ ಮಹಾನಗರದಲ್ಲಿ ಕನ್ನಡ ಸಂಸ್ಕೃತಿಯನ್ನು ಉಳಿಸಿ-ಬೆಳೆಸುತ್ತಿರುವ ಚಿಣ್ಣರ ಬಿಂಬದಂತಹ ಸಂಸ್ಥೆಯಂತೆ ನಮ್ಮ ಮಕ್ಕಳನ್ನು ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗೆ ಹೊಸ ಬೆಳಕು ಸಿಗುವುದು ನಿಶ್ಚಿತ ಎಂದು ನುಡಿದರು.
ಹೊಸ ವರ್ಷಕ್ಕೆ ಹೊಸ ಹರುಷ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಚಿಣ್ಣರ ಬಿಂಬದ ಕಾರ್ಯನಿರ್ವಾಹಕ ಸತೀಶ್ ಸಾಲ್ಯಾನ್ ಅವರು, ಹರುಷ ಎನ್ನುವುದು ನಮ್ಮಲ್ಲಿದ್ದರೂ ಕೂಡಾ ನಾವು ಅದನ್ನು ಬೇರೆಡೆ ಹುಡುತ್ತೇವೆ. ಯಾವ ರೀತಿ ಶಿಲೆಯನ್ನು ಕಡಿದು ಅದರಲ್ಲಿಯ ಬೇಡವಾದುದನ್ನು ತೆಗೆದು ಹಾಕಿ ಶಿಲ್ಪಿ ಶಿಲೆಯನ್ನು ಸುಂದರ ಮೂರ್ತಿಯನ್ನಾಗಿಸುತ್ತಾನೋ ಅದೇ ರೀತಿ ನಾವು ನಮಗೆ ಬೇಡವಾದದ್ದನ್ನು ತೆಗೆದು ಹಾಕಿದರೆ, ನಮ್ಮಲ್ಲಿಯೇ ನಾವು ಹರುಷವನ್ನು ಕಾಣಬಹುದು. ನಾವು ಜೀವನದಲ್ಲಿ ಹರುಷ ಹಾಗೂ ಶಾಂತಿಯನ್ನು ಕಾಣಬೇಕಾದರೆ ಪೆಟ್ಟು ತಿಂದು ಅದನ್ನು ಸಹಿಸುವ ಶಕ್ತಿ ನಮ್ಮಲ್ಲಿರಬೇಕು. ಉತ್ತಮ ಕೃತಿಗಳ ವಾಚನದಿಂದ ಜ್ಞಾನವೃದ್ಧಿಯಾಗುತ್ತದೆ. ಸಮಾಜ, ಸಂಘಟನೆಗಳ ಮೂಲಕ ಫಲಾಪೇಕ್ಷೆಯಿಲ್ಲದೆ ಸೇವೆ ಸಲ್ಲಿಸಿದರೆ ಡೊಂಬಿವಲಿ ಕರ್ನಾಟಕ ಸಂಘದಂತಹ ಉತ್ತಮ ಸಂಸ್ಥೆಯನ್ನು ಕಟ್ಟಿ ಸಮಾಜಮುಖೀ ಸೇವೆಗೈದು ಮನಸ್ಸಿಗೆ ಹರುಷ ಪಡೆಯಲು ಸಾಧ್ಯವಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಉಪನ್ಯಾಸಕರಾದ ಪೇತ್ರಿ ವಿಶ್ವನಾಥ ಶೆಟ್ಟಿ ಮತ್ತು ಸತೀಶ್ ಸಾಲ್ಯಾನ್ ಅವರನ್ನು ಗೌರವಿಸಲಾಯಿತು. ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ತಮ್ಮ ಜೀವನದ ಘಟನೆಗಳನ್ನು ಮೆಲುಕು ಹಾಕಿ, ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಜೀವನದಲ್ಲಿ ಹೊಸ ಬೆಳಕು ಕಾಣಬಹುದಾಗಿದೆ. ಪರಮಾತ್ಮನಲ್ಲಿ ಶ್ರದ್ಧೆ ಹಾಗೂ ಸಮಾಜಮುಖೀ ಕಾರ್ಯಗಳಿಂದ ನಮ್ಮ ಜೀವನದಲ್ಲಿ ಹರುಷ ಕಾಣಬಹುದಾಗಿದೆ ಎಂದು ಸಂಘದ ಸಿದ್ಧಿ-ಸಾಧನೆಗಳನ್ನು ವಿವರಿಸಿದರು.
ಸಂಘದ ವಾಚನಾಲಯ ವಿಭಾಗದ ಅಧ್ಯಕ್ಷೆ ವಿಮಲಾ ಶೆಟ್ಟಿ ಅವರು ಸ್ವಾಗತಿಸಿದರು. ಅಂಜಲಿ ತೋರವಿ ಪ್ರಾರ್ಥನೆಗೈದರು. ಪದ್ಮಪ್ರಿಯಾ ಬಲ್ಲಾಳ ಹಾಗೂ ಪದ್ಮಾ ಮುಲ್ಕಿ ಅವರು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾ ಆಲಗೂರ ವಂದಿಸಿದರು. ಸನತ್ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಕಾರ್ಯಾಧ್ಯಕ್ಷ ಸುಕುಮಾರ್ ಎನ್. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳಾದ ಲೋಕನಾಥ ಶೆಟ್ಟಿ, ಗೌರವ ಕಾರ್ಯದರ್ಶಿ ದೇವದಾಸ್ ಎಲ್. ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು. ನ್ಯಾಯವಾದಿ ಆರ್. ಎನ್. ಭಂಡಾರಿ, ವಸಂತ ಸುವರ್ಣ, ಎಸ್. ಎನ್. ಸೋಮಾ, ರಮೇಶ್ ಕಾಖಂಡಕಿ, ರಾಜು ಭಂಡಾರಿ, ಸುಷ್ಮಾ ಡಿ. ಶೆಟ್ಟಿ, ಮಾಧುರಿಕಾ ಬಂಗೇರ, ಆಶಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಂಘದ ಲೆಕ್ಕ ಪರಿಶೋಧಕ ವಿಲಾಸ್ ಚೌಧರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ವಾಚನಾಲಯ ವಿಭಾಗದ ಗೀತಾ ಕೋಟೆಕಾರ್, ಚಂಚಲಾ ಸಾಲ್ಯಾನ್, ಪರಿಮಳಾ ಕುಲಕರ್ಣಿ ಮೊದಲಾದವರು ಸಹಕರಿಸಿದರು. ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಚಿತ್ರ-ವರದಿ:ಗುರುರಾಜ ಪೋತನೀಸ್.