Advertisement

ಡೊಂಬಿವಲಿ ಬಸವೇಶ್ವರ ಶರಣರ ಮಂಡಳ ಪ್ರಥಮ ವಾರ್ಷಿಕೋತ್ಸವ

04:12 PM Aug 26, 2018 | Team Udayavani |

ಡೊಂಬಿವಲಿ: ಸಕಲ ಮಾನವ ಕುಲಕ್ಕೆ ಸಮಾನತೆಯ ಮಾರ್ಗ ತೋರಿಸಿದ ಮಹಾನುಭಾವ ಬಸವಣ್ಣನವರ ಸ್ಮರಣೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ, ನಿತ್ಯ ನಿರಂತರವಾಗಿ ನಡೆಯಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿ ಡಾ| ಶಶಿಕಾಂತ ಪಟ್ಟಣ ಅವರು ನುಡಿದರು.

Advertisement

ಆ. 16ರಂದು ಸಂಜೆ ಡೊಂಬಿವಲಿ ಪೂರ್ವದ ಗಣೇಶ ಮಂದಿರದ ವಿನಾಯಕ ಸಭಾಗೃಹದಲ್ಲಿ ನಡೆದ ಬಸವೇಶ್ವರ ಶರಣ ಮಂಡಳ ಡೊಂಬಿವಲಿ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ತೆಗೆದು ಹಾಕಿದ ಬಸವೇಶ್ವರರು ದಾನದ ಪದ್ಧತಿಯನ್ನು ವಿರೋಧಿಸಿ ದಾಸೋಹದ ಪದ್ಧತಿಗೆ ಪ್ರೋತ್ಸಾಹ ನೀಡಿದರು. ಇಡೀ ವಿಶ್ವಕ್ಕೆ ಅನುಭಾವದ ಬೆಳಕನ್ನು ನೀಡಿದ ವಚನಗಳನ್ನು ನಾವು ಓದದೆ ಇದ್ದದ್ದು ವಿಪರ್ಯಾಸದ ಸಂಗತಿಯಾಗಿದ್ದು, ಶರಣರ ನಿಜವಾದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದ ನಾವು ನಮ್ಮಲ್ಲಿಯ ಭಿನ್ನಾಭಿಪ್ರಾಯಗಳಿಂದ ತೊಂದರೆ ಪಡುವಂತಾಗಿದ್ದು, ಲಿಂಗಾಯತ ಸಮಾಜದ ಸಂಸ್ಥೆಗಳ ಹಾಳಾಗಲು ಲಿಂಗಾಯತರೇ ಕಾರಣರಾಗಿದ್ದು, ಬಿದ್ದವರನ್ನು ಎತ್ತಿ ಹಿಡಿಯುವ ಬದಿಗಿಟ್ಟು ಲಿಂಗಕ್ಕೆ ಒಪ್ಪುವ ಸಾರ್ವಕಾಲಿಕ ಸುಂದರವಾದ ಸಮಾಜವನ್ನು ಕಟ್ಟಿ, ಲಿಂಗದ ಆತ್ಮ ಚೈತನ್ಯವನ್ನು ಜಾಗೃತಗೊಳಿಸೋಣ ಎಂದು ನುಡಿದು ಮಂಡಳದ ಕಾರ್ಯವನ್ನು ಶ್ಲಾಘಿಸಿದರು.

ಗೌರವ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪ್ರಾಧ್ಯಾಪಕ ಶುಕ್ರಾಚಾರ್ಯ ಗಾಯಕ್ವಾಡ್‌ ಅವರು ಮಾತನಾಡಿ, ಬುದ್ಧ ಮತ್ತು ಬಸವೇಶ್ವರರ ವಿಚಾರ ಒಂದೇ ಆಗಿತ್ತು. ಅದುವೇ ಮಾನವ ಕಲ್ಯಾಣ. ಈ ಇಬ್ಬರು ಮಹಾನುಭಾವರು ತಮ್ಮ ಯುವ ಅವಸ್ಥೆಯಲ್ಲಿಯೇ ಮಾನವ ಕಲ್ಯಾಣಕ್ಕಾಗಿ ತಮ್ಮ ಮನೆಯನ್ನು ತೊರೆದರು. ಇವತ್ತು ನಾವು ಕತ್ತಲೆಯಿಂದ ಬೆಳಕಿನೆಡೆಗೆ ಬಂದಿದ್ದು, ಇದಕ್ಕೆ ಬಸವೇಶ್ವರರ ವಚನ ಎಂಬ ದೀಪವೇ ಕಾರಣವಾಗಿದೆ  ಎಂದು ಅಭಿಪ್ರಾಯಿಸಿದರು.

ಇನ್ನೋರ್ವ ಗೌರವ ಅತಿಥಿ, ಶರಣ ಸಾಹಿತ್ಯದ ಅಭ್ಯಾಸಕ ಎಸ್‌. ಬಿ. ಪೂಜಾರಿ ಅವರು ಬಸವೇಶ್ವರರ ವಚನಗಳು ಎಂದೆಂದಿಗೂ ಪ್ರಸ್ತುತವಾಗಿದ್ದು, ಮಕ್ಕಳಿಗೆ ಶರಣ ಸಂಸ್ಕೃತಿಯ ಸಂಸ್ಕಾರವನ್ನು ನೀಡಬೇಕು ಎಂದು ಕರೆನೀಡಿದರು.

ಇದೇ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ಮಹೇಶ್‌ ಜೋಶಿ ವಚನ ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಇದೇ ಸಂದರ್ಭ ದಲ್ಲಿ ಗಣ್ಯರನ್ನು ಗೌರವಿಸಲಾಯಿತು. ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಕೊಂಡಗೂಳಿ ಸ್ವಾಗತಿಸಿದರು.

Advertisement

ಪ್ರೊ| ಶಂಕರ ಶಿರಹಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಹಾಲಿಂಗ ಹೊಸಕೋಟಿ ವಾರ್ಷಿಕ ವರದಿ ವಾಚಿಸಿದರು. ರವಿ ಅಂಕಲಕೋಟೆ, ಜಿ. ಬಿ. ಮಠಪತಿ ಅವರು ಗಣ್ಯರುಗಳನ್ನು ಪರಿಚಯಿಸಿದರು. ಎಸ್‌. ಎನ್‌. ಸೋಮಾ ವಂದಿಸಿದರು. ಜಯಶ್ರೀ ತೋಡಕರ, ವೀರಣ್ಣ ಕನವಳ್ಳಿ, ರಾಜಶ್ರೀ ಜಿನಮಲ್ಲಿ, ಉಮಾ ಹುಣಸಿನ ಮರದ, ಮಲ್ಲಿಕಾರ್ಜುನ ಗವಿಮಠ, ಬಿರಾದಾರ, ಪುಟಪ್ಪ ಹಾನಗಲ್‌ ಮೊದಲಾದವರು ಉಪಸ್ಥಿತರಿದ್ದರು. 

ಚಿತ್ರ-ವರದಿ : ಗುರುರಾಜ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next