Advertisement

ನವರಾತ್ರಿ ಉತ್ಸವದಲ್ಲಿ ಬೊಂಬೆಗಳ ದರ್ಬಾರ್‌

09:06 PM Sep 30, 2019 | Lakshmi GovindaRaju |

ದೊಡ್ಡಬಳ್ಳಾಪುರ: ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಚಾಲನೆ ದೊರೆತ ಬೆನ್ನಲ್ಲೇ, ದೊಡ್ಡಬಳ್ಳಾಪುರದ ಹಲವರ ಮನೆಗಳಲ್ಲಿಯೂ ದಸರಾ ಬೊಂಬೆಗಳ ದರ್ಬಾರ್‌ ಆರಂಭಗೊಂಡಿದೆ. ಪ್ರತಿದಿನ ಸಂಜೆಯಾಗುತ್ತಿದ್ದಂತೆ, ಬೊಂಬೆ ಕೂಡಿಸುವವರ ಮನೆಗಳಿಗೆ ಚಿಣ್ಣರು ಬೊಂಬೆ ಸಂಭ್ರಮ ಕಣ್ತುಂಬಿಕೊಳ್ಳಲು ಲಗ್ಗೆ ಇಡುತ್ತಿದ್ದಾರೆ. ನವರಾತ್ರಿಯ ಒಂಬತ್ತು ದಿನ ನಡೆಯುವ ಬೊಂಬೆ ಹಬ್ಬದಲ್ಲಿ ಕಳಸ ಸ್ಥಾಪನೆ ಮಾಡಿ ಪ್ರತಿನಿತ್ಯ ನೇವೇದ್ಯದೊಂದಿಗೆ ಶ್ರದ್ಧಾ ಭಕ್ತಿಗಳ ಪೂಜೆ ಸಮರ್ಪಣೆಯಾಗುತ್ತಿದೆ.

Advertisement

ವಿವಿಧ ದೇವಾನುದೇವತೆಗಳ ಬೊಂಬೆಗಳೊಂದಿಗೆ ಕೈಲಾಸ ಶಿವದರ್ಶನ, ತಿರುಪತಿ ಬ್ರಹ್ಮೋತ್ಸವ, ಶ್ರೀ ಕೃಷ್ಣ ಪಾರಿಜಾತ, ದಶಾವತಾರ,ತಿರುಪತಿ, ಗರುಡೋತ್ಸವ, ಮದುವೆ ದಿಬ್ಬಣದ ಬೊಂಬೆಗಳು, ಪಟ್ಟದಲ್ಲಿ ಕುಳಿತಿದ್ದರೆ, ದಸರಾ ಮೆರವಣಿಗೆ, ಮೈಸೂರು ಅರಮನೆ,ಗ್ರಾಮೀಣ ಚಿತ್ರಣ, ಉದ್ಯಾನ‌ವನ, ಮೃಗಾಲಯ, ಕಾಡು, ಕೈಲಾಸ ಪರ್ವತ,ಅರಮನೆ,ದೇವಾಲಯ ಮೊದಲಾದ ವಿಶೇಷ ಆಯೋಜನೆಗಳು ಆಕರ್ಷಣೆಯಾಗಿವೆ.

ಇದರೊಂದಿಗೆ ವಿವಿಧ ಚೀನಾ ಅಟಿಕೆಗಳು, ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌, ಫೆ„ಬರ್‌ ಬೊಂಬೆಗಳು ಸೇರಿದಂತೆ ಇತರೆ ಹೈಟೆಕ್‌ ಬೊಂಬೆಗಳು ಬೊಂಬೆಗಳ ಹಬ್ಬದಲ್ಲಿ ಜಾಗ ಪಡೆದುಕೊಂಡಿವೆ. ನಗರದ ಟಿ.ಎಸ್‌.ಉಮಾದೇವಿ ಮಹದೇವಯ್ಯ, ಪ್ರಭಾವತಿ ದಯಾಶಂಕರ್‌, ಶ್ರೀನಿವಾಸ ರಾಘವನ್‌, ಬಳ್ಳಾರಿ ಬಿ.ಟಿ.ಕಾಂತರಾಜ್‌, ನಟರಾಜ್‌, ಮಂಜುಳಾ ಮಂಜುನಾಥ್‌, ರವಿಶಂಕರ್‌, ಮಂಜಣ್ಣ, ಕಣಿತಹಳ್ಳಿ ಕೆ.ಎಲ್‌.ದೇವರಾಜು, ಶಾಂಪೂರ್‌ ಶ್ರೀನಿವಾಸಯ್ಯ, ಪುಷ್ಪಾ ಶಿವಶಂಕರ್‌, ಮೊದಲಾದವರ ಮನೆಗಳಲ್ಲಿ ಕೂಡಿಸಿರುವ ಬೊಂಬೆಗಳು ಗಮನ ಸೆಳೆಯುತ್ತಿವೆ.

ಬೊಂಬೆ ಹಬ್ಬದ ಹಿನ್ನೆಲೆ: ಮೈಸೂರು ದಸರಾಗೂ ಬೊಂಬೆ ಹಬ್ಬಕ್ಕೂ ಐತಿಹಾಸಿಕವಾಗಿ ಆಚರಣೆಯ ನಂಟು ಜೊತೆಯಾಗಿಯೇ ಬಂದಿದೆ. ಬೊಂಬೆಗಳ ಸಂಪ್ರದಾಯ ಹಿಂದೂ ನಾಗರಿಕತೆಯ ಆರಂಭದಿಂದ ಬಂದುದಾದರೂ ನವರಾತ್ರಿ ಬೊಂಬೆ ಉತ್ಸವ ಮಾತ್ರ ರಾಜವಂಶಸ್ಥರಿಂದ ಆರಂಭವಾಗಿ ಆ ನಂತರ ಅದು ಅವರ ನಿಕಟವರ್ತಿಗಳಿಂದ ಆಚರಿಸಲ್ಪಟ್ಟು ಸಾರ್ವತ್ರಿಕವಾಗಿದೆ.

ವಿಜಯನಗರ ಅರಸರಿಂದ ದಸರಾ ಆಚರಣೆ ಆರಂಭವಾಯಿತು. ಆ ಕಾಲಕ್ಕೆ ಬೊಂಬೆ ಉತ್ಸವ ಆರಂಭವಾಗಿ ಹೆಣ್ಣು ಮಕ್ಕಳು ರಾಜ ಮಂತ್ರಿ ಆಸ್ಥಾನದವರ ಪ್ರತೀಕವಾಗಿ ಬೊಂಬೆಗಳನ್ನು ಕೂರಿಸಿ ಅದಕ್ಕೆ ಕಲಾತ್ಮಕ ಅಲಂಕಾರ ಮಾಡುತ್ತಿದ್ದರು. ರಾಜ ಪರಿವಾರದವರ ವೈಭವದ ಆಟಿಕೆಗಳ ಪ್ರದರ್ಶನ ಮಕ್ಕಳಿಗೆ ರಂಜನೆ ನೀಡುವ ಸಲುವಾಗಿ ಆರಂಭಗೊಂಡು ನಂತರ ಸಂಪ್ರದಾಯದ ರೂಪ ಪಡೆಯಿತು.

Advertisement

ಹಿರಿಯರನ್ನು ನೋಡಿ ಕಿರಿಯರು ಅನುಸರಿಸುವ ರೀತಿ ರಾಜರ ಉತ್ಸವ ಸಪ್ರಜೆಗಳಿಗೆ ಸ್ಪೂರ್ತಿಯಾಗಿ ಬೊಂಬೆ ಹಬ್ಬದ ಆಚರಣೆಗೆ ಪ್ರೇರಣೆಯಾಗಿ ಸಂಪ್ರದಾಯ ಬೆಳೆದು ಬಂದಿದೆ ಎನ್ನಬಹುದು. ಮಹಾಲಯ ಅಮಾವಾಸ್ಯೆಯಿಂದ ವಿಜಯದಶಮಿಯವರೆಗೆ ನಡೆಯುವ ಈ ಬೊಂಬೆ ಉತ್ಸವಕ್ಕೆ ಸಾಕಷ್ಟು ಸಿದ್ದತೆಗಳು ನಡೆಯುತ್ತವೆ. ಅಟ್ಟದ ಮೇಲಿರುವ ಬೊಂಬೆಗಳನ್ನು ಕೆಳಗಿಳಿಸಿ ಸ್ವಚ್ಛಗೊಳಿಸಿ,ಪಟ್ಟದ ಬೊಂಬೆಗಳಿಗೆ ಶೃಂಗಾರ ಮಾಡುವ ಕಾರ್ಯ ಆರಂಭವಾಗುತ್ತದೆ. ಈ ಕಾರ್ಯದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಾರೆ.

ಬೊಂಬೆಗಳಿಗೆ ಕಲಾತ್ಮಕ ಕುಸುರಿ ಕೆಲಸಗಳು ನಡೆಯುತ್ತವೆ. ನಂತರ ಬೊಂಬೆ ಜೋಡಿಸುವ ಕಾರ್ಯದಲ್ಲಿ ಕುಟುಂಬದವರೊಂದಿಗೆ ಸಮಾಲೋಚನೆ.ಯಾವ ಬೊಂಬೆ ಎಲ್ಲಿಡಬೇಕು. ನಂತರ ಎಲ್ಲವೂ ಅಣಿಗೊಳಿಸಿದ ನಂತರ ಪೂಜಾ ಕಾರ್ಯ, ಮಾನಿನಿಯರಿಗೆ ಮಕ್ಕಳಿಗೆ ಬಾಗಿನ ಮೊದಲಾಗಿ ವಿವಿಧ ಸಂಪ್ರದಾಯಗಳು ನಡೆಯುತ್ತವೆ.  ಬಯಲು ಸೀಮೆಯ ಜನಪದ ಧಾರ್ಮಿಕ ಭಾವನೆಗಳನ್ನು ಮೈಳೇಸಿರುವ ಈ ಬೊಂಬೆ ಹಬ್ಬ ಆಧುನೀಕತೆಯ ಪ್ರಭಾವದ ನಡುವೆಯೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.

ದಶಕಗಳ ಹಿಂದೆ ಮನೆಯ ಮುಂದೆ ಬರುತ್ತಿದ್ದ ದಸರಾ ಬೊಂಬೆಗಳ ಮಾರಾಟ ಭರಾಟೆ ಈಗ ಭರಾಟೆ ಕಡಿಮೆಯಾಗಿದೆ. ಇಂದಿನ ಯಾಂತ್ರಿಕ ಯುಗದಲ್ಲಿ ಬಂಧು ಬಳಗದವರೆಲ್ಲ ಕೂಡಿ, ಗಳೆಯರು ಹಿತೆ„ಷಿಗಳು ಸೇರಿ ಸಂಭ್ರಮಿಸುವ ಬೊಂಬೆ ಹಬ್ಬ ಆಚರಣೆ ಇಂದು ಅಪರೂಪವಾಗುತ್ತಿದ್ದು , ನಮ್ಮ ಸಂಸ್ಕೃತಿ ಪರಂಪರೆಗಳ ಪ್ರತೀಕವಾದ ಇಂತಹ ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಇಂದಿನ ಪೀಳಿಗೆ ಕಾಳಜಿ ವಹಿಸಬೇಕಿದೆ ಎನ್ನುತ್ತಾರೆ ಹಿರಿಯರು.

Advertisement

Udayavani is now on Telegram. Click here to join our channel and stay updated with the latest news.

Next