ಚಂಡೀಗಢ: ಇದು ಅಚ್ಚರಿಯ ಆದೇಶವೋ, ಎಡವಟ್ಟೋ ಗೊತ್ತಿಲ್ಲ. ನಗರ ಪ್ರದೇಶದಲ್ಲಿನ್ನು ಪ್ರಾಣಿಗಳನ್ನು ಸಾಕಬೇಕೆಂದರೂ ವಾರ್ಷಿಕ ತೆರಿಗೆ ಪಾವತಿಸಬೇಕು. ಜತೆಗೆ ಪರವಾನಿಗೆಯೂ ಬೇಕು. ಅಂದ ಹಾಗೆ ಇದು ಕರ್ನಾಟಕಕ್ಕೆ ಸಂಬಂಧಿಸಿದ ಸುದ್ದಿಯಲ್ಲ. ದೂರದ ಪಂಜಾಬ್‌ನದ್ದು. ಅದೇನಿದ್ದರೂ ಇಂಥ ಕ್ರಮ ದೇಶದಲ್ಲಿಯೇ ಮೊದಲನೆಯದ್ದು ಎಂದು ಹೇಳಲಾಗುತ್ತಿದೆ.
ಈ ನಿಯಮದ ಪ್ರಕಾರ ನಾಯಿ, ಬೆಕ್ಕು, ಹಂದಿ, ಕುರಿ, ಜಿಂಕೆ ಮತ್ತಿತರ ಪ್ರಾಣಿಗಳನ್ನು ಸಾಕಬೇಕಾದರೆ ಪ್ರತಿ ವರ್ಷ 250 ರೂ.ಗಳನ್ನು ತೆರಿಗೆಯಾಗಿ ಸ್ಥಳೀಯ ಸಂಸ್ಥೆಗೆ ಪಾವತಿ ಮಾಡಬೇಕು. ಎಮ್ಮೆ, ಗೂಳಿ, ಒಂಟೆ, ಕುದುರೆ, ದನ, ಆನೆ ಮೊದಲಾದ ಪ್ರಾಣಿಗಳನ್ನು ಸಾಕಲು ಬಯಸಿದರೆ ವಾರ್ಷಿಕವಾಗಿ 500 ರೂ. ನೀಡಬೇಕು.
ಮಾಜಿ ಕ್ರಿಕೆಟಿಗ, ಬಿಜೆಪಿಗೆ ವಿದಾಯ ಹೇಳಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಸದ್ಯ ಸಚಿವರಾಗಿರುವ ನವ್‌ಜೋತ್ ಸಿಂಗ್ ಸಿಧು ಅವರು ಸಚಿವರಾಗಿರುವ ಪಂಜಾಬ್‌ನ ಸ್ಥಳೀಯಾಡಳಿತ ಸಚಿವಾಲಯ ಮಂಗಳವಾರ ಈ ಬಗ್ಗೆ ಪ್ರಕಟನೆ ಹೊರಡಿಸಿದೆ. ಸೂಚನೆ ಪ್ರಕಾರ ಸಾಕುಪ್ರಾಣಿಗಳಿಗೆ ವಿಶೇಷ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಜತೆಗೆ ಅವುಗಳಿಗೆ ಮೈಕ್ರೋಚಿಪ್ ಕೂಡ ಅಳವಡಿಸಲಾಗುತ್ತದೆ. ಇಷ್ಟು ಮಾತ್ರವಲ್ಲ ಪ್ರಾಣಿಗಳನ್ನು ಸಾಕಲು ಸ್ಥಳೀಯ ಸಂಸ್ಥೆಯಿಂದ ಪರವಾನಿಗೆ ಕಡ್ಡಾಯ. ಧಾರ್ಮಿಕ ಸಂಸ್ಥೆಗಳು ಮತ್ತು ಎನ್‌ಜಿಒಗಳು ಪ್ರಾಣಿಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದರೆ ಅದಕ್ಕೆ ಸರಕಾರದ ವತಿಯಿಂದ ಸೂಕ್ತ ನೆರವು ನೀಡಲಾಗುತ್ತದೆ.
ಅಂಥ ಆದೇಶವೇ ಇಲ್ಲ: ದೇಶದ ವಿವಿಧ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆ ಮುಜುಗರಕ್ಕೆ ಒಳಗಾದ ಪಂಜಾಬ್ ಸರಕಾರ, ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಅಂಶ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದೆ. ಬೀದಿ ನಾಯಿಗಳಿಂದ ಕಡಿತಕ್ಕೆ ಒಳಗಾದ ವ್ಯಕ್ತಿಯ ಕುಟುಂಬಗಳಿಗೆ ಸೂಕ್ತ ನೆರವು ನೀಡಬೇಕು ಎಂದು ಎರಡೂ ಸರಕಾರಗಳಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶ ನೀಡಿದ್ದು ಹೌದು. ಆದರೆ ಸಾಕುಪ್ರಾಣಿಗಳಿಗೆ ತೆರಿಗೆ ವಿಧಿಸುವ ಯಾವ ಪ್ರಸ್ತಾವವೂ ಇಲ್ಲ. ಇದು ಸಂಪೂರ್ಣ ಸುಳ್ಳಿನಿಂದ ಕೂಡಿದ ಸುದ್ದಿ ಎಂದು ಪಂಜಾಬ್ ಸರಕಾರ ಸ್ಪಷ್ಟನೆ ನೀಡಿದೆ.