Advertisement

ಪ್ರಾಣ ತೆಗೆವ ಬ್ಲೂವೇಲ್‌ ಆಟಕ್ಕೆ ಬಾಲಕ ಬಲಿ?

05:10 AM Jul 27, 2018 | Team Udayavani |

ಬೆಳ್ತಂಗಡಿ: ಜಗತ್ತಿನಾದ್ಯಂತ ತೀವ್ರ ತಲ್ಲಣ ಸೃಷ್ಟಿಸಿದ್ದ, ಹದಿಹರೆಯದ ಯುವಕರ ಪ್ರಾಣ ತೆಗೆಯುವ ಆಟ ಬ್ಲೂವೇಲ್‌ ಗೆ ಇದೀಗ ಬೆಂಗಳೂರಿನ ಬಾಲಕನೂ ಬಲಿಯಾಗಿರುವ ಬಗ್ಗೆ ತೀವ್ರ ಶಂಕೆ ವ್ಯಕ್ತವಾಗಿದೆ. ಸತತ ಶೋಧದ ಬಳಿಕ ಗುರುವಾಯನಕೆರೆಯಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿ ಯಶವಂತ್‌ ಸಾಯಿ ಕೆ.ಪಿ. (15) ಶವ ಪತ್ತೆಯಾಗಿದೆ. ಆತನ ಬ್ಯಾಗ್‌ ಮತ್ತು ಚಪ್ಪಲಿ ಜು. 25ರಂದು ಪತ್ತೆಯಾಗಿದ್ದು, ಘಟನೆಯನ್ನು ಪುಷ್ಟೀಕರಿಸಿತ್ತು. ಅಗ್ನಿ ಶಾಮಕ ಸಿಬಂದಿ ರಾತ್ರಿವರೆಗೂ ಹುಡುಕಾಟ ನಡೆಸಿದ್ದು ಗುರುವಾರ ಬೆಳಗ್ಗೆ ಶವವನ್ನು ಕೆರೆಯಿಂದ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಗುರುವಾಯನಕೆರೆಗೆ ಬಂದಿದ್ದೇಕೆ? 
ಬೆಂಗಳೂರು ಹೂಡಿ ನಿವಾಸಿ ಎನ್‌. ವಿ. ಪ್ರೇಮ್‌ಕುಮಾರ್‌ ಅವರ ಪುತ್ರ ಯಶವಂತ್‌ ದೂರ್ವನಿ ನಗರದ ಐಟಿಐ ವಿದ್ಯಾಮಂದಿರ್‌ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಜು. 24ರಂದು ಶಾಲೆಯಿಂದ ತಪ್ಪಿಸಿಕೊಂಡು KSRTC ಬಸ್ಸಿನಲ್ಲಿ ಬೆಳ್ತಂಗಡಿಗೆ ಬಂದಿದ್ದ. ಬಳಿಕ ಕಾರ್ಕಳ ಬಸ್‌ ನಲ್ಲಿ ಗುರುವಾಯನಕೆರೆಗೆ ಬಂದಿದ್ದ. ಆಕಸ್ಮಿಕವಾಗಿ ನೀರಿಗೆ ಬಿದ್ದನೋ ಆತ್ಮಹತ್ಯೆ ಮಾಡಿಕೊಂಡನೋ? ಆತ ಇಲ್ಲೇಕೆ ಬಂದ  ಎಂಬುದು ಸ್ಪಷ್ಟವಾಗಿಲ್ಲ.


ಬ್ಲೂವೇಲ್‌ ಶಂಕೆ

ವಿದ್ಯಾರ್ಥಿ ಮಾವ ರಾಜಶೇಖರ್‌ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತ, ಸಾವಿಗೆ ಬ್ಲೂವೇಲ್‌ ಆಟ ಕಾರಣವಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ ‘ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಾನೆ ಎಂಬ ಕಾರಣಕ್ಕೆ ಬೈದಿದ್ದೇವೆ. ಇದೇ ಕಾರಣಕ್ಕೆ ಮನೆಬಿಟ್ಟು ಬಂದಿರಬಹುದು’ ಎಂದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

ಆಧಾರ್‌ ಕಾರ್ಡ್‌ ಬ್ಯಾಗಲ್ಲಿತ್ತು!
ಕೆರೆ ದಂಡೆಯಲ್ಲಿದ್ದ ಬಾಲಕನ ಬ್ಯಾಗ್‌ ನಲ್ಲಿ ಆತನ ಆಧಾರ್‌ ಕಾರ್ಡ್‌, ಐಡಿ ಕಾರ್ಡ್‌, ಇತರ ದಾಖಲೆಗಳಿದ್ದು, ಅದು ಬೆಂಗಳೂರಿನ ವಿದ್ಯಾರ್ಥಿಯದ್ದು ಎಂದು ಪತ್ತೆಯಾಗಿತ್ತು. ಅದರಂತೆ ಪೊಲೀಸರು ಆತನ ಪೋಷಕರನ್ನು ಕರೆಸಿಕೊಂಡಿದ್ದರು. ವಿದ್ಯಾರ್ಥಿಯ ಶವ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಪೋಷಕರು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ಏನಿದು ಬ್ಲೂವೇಲ್‌ ಆಟ? 
2016ರಲ್ಲಿ ರಷ್ಯಾದಲ್ಲಿ ಹುಟ್ಟಿಕೊಂಡ ಒಂದು ಪ್ರಾಣವನ್ನೇ ತೆಗೆಯುವ ಆಟ ಬ್ಲೂವೇಲ್‌. ಸಾಮಾಜಿಕ ಜಾಲತಾಣಗಳ ಮೂಲಕ ಆಡುವ ಆಟ ಇದಾಗಿದೆ. 50 ದಿನಗಳಲ್ಲಿ ತಂಡದ ಮುಖಂಡ ಹೇಳುವಂತೆ ಅಪಾಯಕಾರಿ ಟಾಸ್ಕ್ ಗಳನ್ನು ಆಡಬೇಕಿರುತ್ತದೆ.

Advertisement

ಡೈರಿಯಲ್ಲಿತ್ತು ‘ಮಂಗಳೂರು ಅಡ್ವೆಂಚರ್‌’
ವಿದ್ಯಾರ್ಥಿ ಬ್ಲೂವೇಲ್‌ ಗೆ ಬಲಿಯಾಗಿರುವ ಶಂಕೆ ತೀವ್ರವಾಗಲು ಕಾರಣವಾಗಿರುವುದು ಆತ ಬರೆದ ಡೈರಿ. ಅದರಲ್ಲಿ ಆತ 2018ರ ಜು. 24ಕ್ಕೆ ನಾನು ಉಡುಪಿ ಕಡೆಗೆ ಪ್ರಯಾಣ ಬೆಳೆಸುತ್ತಿದ್ದು, ಅಲ್ಲಿ 5 ತಿಂಗಳ ಕಾಲ ಕೆಲಸ ಮಾಡಲಿದ್ದೇನೆ. ಅಲ್ಲದೇ ‘ಮಂಗಳೂರು ಅಡ್ವೆಂಚರ್‌’ ಎಂಬುದಾಗಿ ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದ ಎಂದು ಮನೆಯವರು ತಿಳಿಸಿದ್ದಾರೆ.  

ಖಚಿತಗೊಂಡಿಲ್ಲ 
ವಿದ್ಯಾರ್ಥಿ ಬ್ಲೂವೇಲ್‌ಗೆ ಬಲಿಯಾದ ಬಗ್ಗೆ  ಖಚಿತಗೊಂಡಿಲ್ಲ. ಕಲಿಕೆಯಲ್ಲಿ ಹಿಂದೆ ಎಂಬ ಕಾರಣಕ್ಕೆ ಪೋಷಕರು ಬೈದಿರುವ ಹಿನ್ನೆಲೆಯಲ್ಲಿ ಆತ ಮನೆಬಿಟ್ಟು ಬಂದಿದ್ದಾನೆ. ಆದರೆ ಮಾಧ್ಯಮಗಳಲ್ಲಿ ಬ್ಲೂವೇಲ್‌ಗೆ ಬಲಿ ಎಂದು ಸುದ್ದಿ ಹಬ್ಬಿದೆ. 
– ನಾಗೇಶ್‌ ಕದ್ರಿ, ಬೆಳ್ತಂಗಡಿ ವೃತ್ತ ನಿರೀಕ್ಷಕ 

ಮುಂದುವರಿದ ತನಿಖೆ
ವಿದ್ಯಾರ್ಥಿಯ ದೇಹದಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ವಿದ್ಯಾರ್ಥಿ ತಂದೆ ಆತ ಕಲಿಕೆಯಲ್ಲಿ ಹಿಂದಿದ್ದ ಎಂಬುದನ್ನು ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದ್ದು, ಬ್ಲೂವೇಲ್‌ ಬಗ್ಗೆ ಸುಳಿವು ಲಭ್ಯವಾಗಿಲ್ಲ. 
– ಡಾ| ರವಿಕಾಂತೇಗೌಡ, ಜಿಲ್ಲಾ  ಪೊಲೀಸ್‌ ವರಿಷ್ಠಾಧಿಕಾರಿ  

Advertisement

Udayavani is now on Telegram. Click here to join our channel and stay updated with the latest news.

Next