ಉಡುಪಿ: ದೊಡ್ಡಣ್ಣಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ 18ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಶ್ರೀ ಮಹಾ ಚಂಡಿಕಾಯಾಗ ಮಹಾ ಸಂಪ್ರೋಕ್ಷಣೆ ಮಹಾಮಂತ್ರಕ್ಷತೆ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಿತು.
ಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ ಭಕ್ತ ಸಮೂಹದ ಸಮಕ್ಷಮದಲ್ಲಿ ಕೊಲಕಡಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಅವರು ಚಂಡಿಕಾಯಾಗ ನೆರವೇರಿಸಿದರು.
ಯಾಗದ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ ಕನ್ನಿಕರಾಧನೆ ಆಚಾರ್ಯ ಪೂಜೆ ದಂಪತಿ ಪೂಜೆ ಬ್ರಹ್ಮಚಾರಿ ಆರಾಧನೆಗಳು ನೆರವೇರಿದವು. ಭ್ರಮರಿ ನಾಟ್ಯಾಲಯದ ವಿದ್ವಾನ್ ಭವಾನಿ ಶಂಕರ್ ಅವರ ಶಿಷ್ಯರಿಂದ ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ನೆರವೇರಿತು.
ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಅಮ್ಮ ಡ್ರೀಮ್ಸ್ ಮೆಲೋಡಿಸ್ ನ ಕಲಾವಿದರಾದ ಸುನಿಲ್, ಅಶ್ವಿನಿ ಹಾಗೂ ಬೇಬಿ ಪ್ರಿಯ ಸಂಗೀತ ಕಾರ್ಯಕ್ರಮ ನೆರವೇರಿಸಿದರು.
ಮೃಷ್ಟಾನ್ನ ಸಂತರ್ಪಣೆಯ ನಂತರ ವಿಪ್ರೊತ್ತಮರಿಂದ ದೇವಳದ ಪ್ರಾಂಗಣದಲ್ಲಿ ಮಹಾಮಂತ್ರಾಕ್ಷತೆ ಸ್ವೀಕರಿಸಲಾಯಿತು.
ಭಕ್ತ ಸಮೂಹದೊಂದಿಗೆ ಸಂಪನ್ನಗೊಂಡ ಚಂಡಿಕಾಯಾಗದ ನೇತೃತ್ವವನ್ನು ಆನಂದ್ ಭಟ್ ಹೇರೂರು ಹಾಗೂ ಗಣೇಶ ಸರಳಾಯ ವಹಿಸಿದ್ದರು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.