Advertisement

ದೊಡ್ಡಣಗುಡ್ಡೆಯ ವಾಜಪೇಯಿ ಉದ್ಯಾನವನಕ್ಕೆ ಮರುಜೀವ

05:08 PM Dec 14, 2021 | Team Udayavani |

ಉಡುಪಿ: ಕಳೆದ 5 ವರ್ಷಗಳಿಂದ ಪಾಳುಬಿದ್ದಿದ್ದ ದೊಡ್ಡಣಗುಡ್ಡೆಯ ವಾಜಪೇಯಿ ಉದ್ಯಾನವನಕ್ಕೆ ಮರುಜೀವ ಸಿಕ್ಕಿದೆ.

Advertisement

ಸುಮಾರು 50 ಸೆಂಟ್ಸ್‌ ಜಾಗದಲ್ಲಿರುವ ಈ ಪಾರ್ಕ್‌ ನಿರ್ವಹಣೆ ಇಲ್ಲದೆ ಸೊರಗುತ್ತಿತ್ತು. ಈಗ ನಗರಸಭೆ ಇದನ್ನು ಅಭಿವೃದ್ಧಿಪಡಿಸಿದ್ದು, ಪಾರ್ಕ್‌ ಸುಂದರವಾಗಿ ಕಂಗೊಳಿಸುತ್ತಿದೆ.

11 ಲ.ರೂ. ವೆಚ್ಚದಲ್ಲಿ ಅಭಿವೃದ್ಧಿ
ನಗರಸಭೆ 11 ಲ.ರೂ.ವೆಚ್ಚದಲ್ಲಿ ಈ ಪಾರ್ಕ್‌ ಅನ್ನು ಅಭಿವೃದ್ಧಿಪಡಿಸಿದೆ. 12 ವರ್ಷದೊಳಗಿನ ಮಕ್ಕಳು ಈ ಪಾರ್ಕ್‌ನಲ್ಲಿ ಆಟವಾಡಲು ಬೇಕಾದ ಜೋಕಾಲಿ, ಜಾರುಬಂಡಿ, ತೊಟ್ಟಿಲು, ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ವಾಕಿಂಗ್‌ ಟ್ರ್ಯಾಕ್‌ಗಳನ್ನು ಕಲ್ಪಿಸಲಾಗಿದೆ.

ಔಷಧೀಯ ವನ
ಪಾರ್ಕ್‌ನ ಬಳಿ ನೋಣೆ, ಒಂದೆಲಗ, ವಿಟಮಿನ್‌ಸೊಪ್ಪು, ಸಂದುಬಳ್ಳಿ, ಕಾಡುಶುಂಠಿ, ಇನ್ಸುಲಿನ್‌ ಗಿಡ ಸಹಿತ 35ಕ್ಕೂ ಅಧಿಕ ಔಷಧೀಯ ಗಿಡಗಳು ಪಾರ್ಕ್‌ ನಲ್ಲಿವೆ. ಇವಿಷ್ಟೇ ಅಲ್ಲದೆ ಸರ್ಟೆನಿಯಾ, ಗೋಲ್ಡನ್‌ ಸೈಪರೆಸ್‌, ಪೆಟ್ರಾಕ್ರೋಟಾ, ಪ್ಲಾಷ್‌ನಂದಿ, ಜಿಬ್ರಾ ಕ್ರೋಟಾ, ಸ್ಟೆಪ್ಪರ್‌, ಕ್ರೋಟಾನ್‌ ಮುಂತಾದ ಅನೇಕ ಗಿಡಗಳಿವೆ.

ಶೇ.80ರಷ್ಟು ಪೂರ್ಣ
ಜೂನ್‌ನಿಂದ ಆರಂಭಗೊಂಡ ಕಾಮಗಾರಿ ಈಗಾಗಲೇ ಶೇ.80ರಷ್ಟು ಪೂರ್ಣಗೊಂಡಿದೆ. ವಿಭಿನ್ನ ರೀತಿಯ ಕಲಶ ನಿರ್ಮಾಣ ಕಾರ್ಯಕ್ಕೆ ಜಾಗ ಸಮತಟ್ಟು ಮಾಡಲಾಗುತ್ತಿದೆ. ಕಲಶ ನಿರ್ಮಿಸಿದ ಬಳಿಕ ಈ ಪಾರ್ಕ್‌ ಮತ್ತಷ್ಟು ಅಂದವಾಗಿ ಕಾಣಲಿದೆ. ಹಾಗೆಯೇ ಪ್ರತಿಮೆಯೊಂದನ್ನು ನಿರ್ಮಿಸುವ ಬಗ್ಗೆಯೂ ಆಸಕ್ತಿ ಹೊಂದಲಾಗಿದೆ.

Advertisement

ಸುಸಜ್ಜಿತ ನಿರ್ವಹಣೆ
ಪಾರ್ಕ್‌ಅನ್ನು 5 ವರ್ಷಗಳ ಕಾಲ ಗುತ್ತಿಗೆದಾರರೇ ನಿರ್ವಹಣೆ ಮಾಡಲಿದ್ದಾರೆ. ಇದಕ್ಕಾಗಿ ಸ್ಥಳೀಯ 3 ಮಂದಿಯನ್ನು ನೇಮಕ ಮಾಡಲಾಗಿದೆ.

ಪಾರ್ಕ್‌ನ ಬಳಿಯಿರುವ ಹಳೆಯ ನೀರಿನ ಟ್ಯಾಂಕ್‌ ಕೆಡವಿ ಅಲ್ಲಿ ಕೂಡ ವಿಶೇಷವಾದ ಕಲಾಕೃತಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.

100ಕ್ಕೂ ಅಧಿಕ ಮಕ್ಕಳಿಗೆ ಉಪಯೋಗ
ಕರಂಬಳ್ಳಿ, ಮೂಡುಸಗ್ರಿ, ಗುಂಡಿಬೈಲು, ಪೆರಂಪಳ್ಳಿ ಭಾಗಗಳಲ್ಲಿ 100ಕ್ಕೂ ಅಧಿಕ ಮಂದಿ ಮಕ್ಕಳಿದ್ದು, ಈ ಪಾರ್ಕ್‌ಗೆ ಬಂದು ಆಟವಾಡುತ್ತಾರೆ. ವಾರಾಂತ್ಯದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಈ ಪಾರ್ಕ್‌ ನಲ್ಲಿ ಕಾಣಸಿಗುತ್ತಾರೆ. ಬೆಳಗ್ಗೆ 5ರಿಂದ ರಾತ್ರಿ 8ಗಂಟೆಯವರೆಗೆ ಈ ಪಾರ್ಕ್‌ ತೆರೆದುಕೊಂಡಿರುತ್ತದೆ. ಹೈಮಾಸ್ಟ್‌ ಹೆಲೋಜಿನ್‌ ಲೈಟ್‌ ಕೂಡ ಅಳವಡಿಸಲಾಗಿದೆ.

ಮಕ್ಕಳಿಗೆ ಅನುಕೂಲ
ಈ ಪಾರ್ಕ್‌ ಪಾಳುಬಿದ್ದ ಕಾರಣ ಉಪಕರಣಗಳು ಸಂಪೂರ್ಣ ತುಕ್ಕು ಹಿಡಿದಿದ್ದವು. ಈಗ ನಗರಸಭೆಯ 11 ಲ.ರೂ. ಅನುದಾನದಲ್ಲಿ ಇದನ್ನು ಸುಸಜ್ಜಿತ ರೀತಿಯಲ್ಲಿ ನಿರ್ಮಿಸಲಾಗಿದೆ. ಇದರಿಂದ ಸ್ಥಳೀಯ 100ಕ್ಕೂ ಅಧಿಕ ಮಂದಿ ಮಕ್ಕಳಿಗೆ ಅನುಕೂಲವಾಗಲಿದೆ.
-ಪ್ರಭಾಕರ ಪೂಜಾರಿ,
ನಗರಸಭೆ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next