ಹೊಸದಿಲ್ಲಿ: ವೈದ್ಯರು ರೋಗಿಗಳಿಗೆ ನೀಡುವ ಚೀಟಿಯಲ್ಲಿ ಕಡ್ಡಾಯವಾಗಿ ಔಷಧಗಳ ಜೆನರಿಕ್ ಹೆಸರನ್ನೇ ಬರೆಯ
ಬೇಕು. ಬರಹ ಅತ್ಯಂತ ಸ್ಪಷ್ಟವಾಗಿರಬೇಕು. ತಪ್ಪಿದರೆ ಕಾನೂನು ಕ್ರಮ ಅನುಭವಿಸಲು ಸಿದ್ಧರಾಗಬೇಕು!
ದೇಶದ ಎಲ್ಲ ವೈದ್ಯರಿಗೆ ಹೀಗೊಂದು ಕಟ್ಟುನಿಟ್ಟಿನ ಎಚ್ಚರಿಕೆ ಸಂದೇಶ ನೀಡಿರುವ ಭಾರತೀಯ ವೈದ್ಯ ಮಂಡಳಿ, “ವೈದ್ಯರು ವಿವೇಚನೆಯಿಂದ ಔಷಧ ಬರೆದುಕೊಡಬೇಕು ಮತ್ತು ಔಷಧಗಳ ಆಯ್ಕೆಯಲ್ಲಿ ಎಚ್ಚರ ವಹಿಸಬೇಕು’ ಎಂದಿದೆ. ಅಲ್ಲದೆ ತನ್ನ ಆದೇಶ ಪಾಲಿಸಲು ನಿರ್ಲಕ್ಷ é ತೋರಿದರೆ “ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟವಾಗಿ ಹೇಳಿದೆ.
“ವೈದ್ಯರು ರೋಗಿಗಳಿಗೆ ಕಡಿಮೆ ಬೆಲೆಯ ಜೆನೆರಿಕ್ ಔಷಧಗಳನ್ನು ಖಚಿತಪಡಿಸಲು ಒಂದು ಕಾನೂನಿನ ಚೌಕಟ್ಟು ರೂಪಿಸುವ ಅಗತ್ಯವಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟ ಬೆನ್ನಲ್ಲೇ 2016ರಲ್ಲಿ ತಾನು ನೀಡಿದ ನಿರ್ದೇಶಗಳನ್ನು ಪುರುಚ್ಚರಿಸಿರುವ ಮಂಡಳಿ, “ವೈದ್ಯರು ಬ್ರಾಂಡ್ ಹೆಸರುಗಳ ಬದಲಾಗಿ, ಔಷಧಿಯ ನೈಜ ಅಥವಾ ಜೆನರಿಕ್ ಹೆಸರನ್ನೇ ಬರೆಯಬೇಕು. ಹಾಗೂ ಭಾರತೀಯ ವೈದ್ಯ ಮಂಡಳಿ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು’ ಎಂದು ಆದೇಶಿಸಿರುವ ಸುತ್ತೋಲೆಯನ್ನು ವೈದ್ಯ ಕಾಲೇಜುಗಳ ಮುಖ್ಯಸ್ಥರು, ಪ್ರಿನ್ಸಿಪಾಲರು, ಎಲ್ಲ ಆಸ್ಪತ್ರೆಗಳ ನಿರ್ದೇಶಕರು, ಎಲ್ಲ ರಾಜ್ಯ ವೈದ್ಯ ಮಂಡಳಿಗಳ ಅಧ್ಯಕ್ಷರಿಗೆ ಕಳುಹಿಸಿದೆ. ಈ ನಡುವೆ 2015ರ ಅಗತ್ಯ ಔಷಧಗಳ ಪಟ್ಟಿ ಪರಿಷ್ಕರಣೆಗೆ ಮುಂದಾಗಿರುವ ಕೇಂದ್ರ ಸರಕಾರ, ಪಟ್ಟಿಗೆ ಇನ್ನೂ ಹಲವು ಅಗತ್ಯ ಔಷಧಗಳನ್ನು ಸೇರಿಸುತ್ತಿದೆ.
ಬೀಡಿ ಬಿಟ್ಟುಬಿಡಿ!: ದೇಶದಲ್ಲಿ ಅತಿ ಹೆಚ್ಚು ಧೂಮಪಾನ ಸಂಬಂಧಿ ಕ್ಯಾನ್ಸರ್ ಪ್ರಕರಣಗಳು ಹಾಗೂ ಸಾವುಗಳಿಗೆ ಕಾರಣವಾಗಿರುವ “ಬೀಡಿ’ಯನ್ನು ಜಿಎಸ್‌ಟಿಯ ಅನರ್ಹ ಸರಕುಗಳ ಪಟ್ಟಿಗೆ ಸೇರಿಸುವಂತೆ ದೇಶದ 100ಕ್ಕೂ ಹೆಚ್ಚು ಕ್ಯಾನ್ಸರ್ ಆಸ್ಪತ್ರೆಗಳ ಪ್ರಮುಖ ತಜ್ಞರು ಪ್ರಧಾನಿ ಮೋದಿ ಅವರನ್ನು ವಿನಂತಿಸಿದ್ದಾರೆ. ಜಿಎಸ್‌ಟಿ ದರ ಅಂತಿಮಗೊಳಿಸುವ ಸಂಬಂಧ ಸೋಮವಾರ ಜಿಎಸ್‌ಟಿ ಸಮಿತಿ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಶನಿವಾರ ದಿಲ್ಲಿಗೆ ತೆರಳಿದ ನ್ಯಾಷನಲ್ ಕ್ಯಾನ್ಸರ್ ಗ್ರಿಡ್‌ನ 108 ಕ್ಯಾನ್ಸರ್ ಆಸ್ಪತ್ರೆಗಳ ಹೃದಯ ತಜ್ಞರು ಪ್ರಧಾನಿಯವರಿಗೆ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಬೀಡಿ ಸೇವನೆಯಿಂದಾಗಿ ವರ್ಷಕ್ಕೆ 6 ಲಕ್ಷ ಮಂದಿ ಅಸುನೀಗುತ್ತಾರೆ ಎಂದು ತಜ್ಞರ ತಂಡ ತಿಳಿಸಿದೆ.