Advertisement

ವೈದ್ಯರ ನಡೆ ಹಳ್ಳಿಗಳ ಕಡೆ ಅಭಿಯಾನ ಸ್ವಾಗತಾರ್ಹ ಕ್ರಮ

03:31 AM May 25, 2021 | Team Udayavani |

ಗ್ರಾಮೀಣ ಭಾಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ “ವೈದ್ಯರ ನಡೆ ಹಳ್ಳಿಗಳ ಕಡೆ’ ಎಂಬ ಅಭಿಯಾನಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ.

Advertisement

ಸಂಚಾರಿ ಕ್ಲಿನಿಕ್‌ ಜತೆ ತೆರಳಿ ಸ್ಥಳದಲ್ಲೇ ತಪಾಸಣೆ ನಡೆಸಿ ಸೋಂಕು ಅಥವಾ ಇತರೆ ರೋಗದ ಗುಣಲಕ್ಷಣ ಕಂಡುಬಂದರೆ ಚಿಕಿತ್ಸೆ, ಆರೈಕೆ, ಉಪಚಾರಕ್ಕೆ ತೀರ್ಮಾನ ಮಾಡಿರುವುದರಿಂದ ಗ್ರಾಮೀಣ ಭಾಗದ ಜನಕ್ಕೆ ಉಪಕಾರವಾಗಲಿದೆ. ಇದು ಈಗಿನ ಅಗತ್ಯತೆಯೂ ಆಗಿದೆ.

ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಕೋವಿಡ್‌ ಆರೈಕೆ ಕೇಂದ್ರಗಳೂ ಕಡಿಮೆ. ಇತ್ತೀಚೆಗೆ ಹೋಂ ಐಸೋಲೇಷನ್‌ ಮಾಡುವಂತಿಲ್ಲ ಎಂದು ಹೇಳಿದ್ದರೂ ಕೆಲವರು ತಪಾಸಣೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಆತಂಕದ ವಿಚಾರ.

ಸರ್ಕಾರ ಜವಾಬ್ದಾರಿಯುತವಾಗಿ ಇದೀಗ ಅಂತಿಮ ವರ್ಷದ ವೈದ್ಯ ಕೀಯ ಪದವಿ ವ್ಯಾಸಂಗ ಮಾಡುತ್ತಿರುವ ಇಂಟರ್ನ್ಶಿಪ್‌ ವಿದ್ಯಾರ್ಥಿ ಗಳು, ಬಿಎಸ್‌ಸಿ ನರ್ಸಿಂಗ್‌ , ಬಿ.ಡಿ.ಎಸ್‌., ಎಂ.ಡಿ.ಎಸ್‌., ಆಯುಷ್‌ ಪದವೀಧರ ವೈದ್ಯರ ಸೇವೆ ಎರವಲು ಪಡೆದು ಪರೀಕ್ಷೆ ಹಾಗೂ ಚಿಕಿತ್ಸೆಗೆ ನಿರ್ಧಾರ ಮಾಡಿರುವುದರಿಂದ ಗ್ರಾಮೀಣ ಭಾಗದಲ್ಲಿ ಕೊರೊನಾ ಪ್ರಕರಣ ಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಜತೆಗೆ, ತುರ್ತು ಚಿಕಿತ್ಸೆ ದೊರೆತು ಸಮಸ್ಯೆ ಮತ್ತಷ್ಟು ಉಲ½ಣಿಸುವುದು ತಪ್ಪಲಿದೆ. ರಾಜ್ಯ ಸರ್ಕಾರದ ಮಾರ್ಗ ಸೂಚಿ ಪ್ರಕಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿ ಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಇದೀಗ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗಿದೆ. ಸಮನ್ವಯತೆಯಿಂದ ಜತೆಗೂಡಿ ಕಾರ್ಯನಿರ್ವಹಿಸಿ ಗ್ರಾಮಗಳನ್ನು ಕೊರೊನಾ ಮುಕ್ತ ಮಾಡಬೇಕಾಗಿದೆ.

Advertisement

ಈ ಕಾರ್ಯಕ್ರಮಕ್ಕೆ ಪ್ರಚಾರದ ಅಗತ್ಯತೆಯೂ ಇದೆ. ಜತೆಗೆ ಮಹಿಳಾ ಸ್ವ ಸಹಾಯ ಸಂಘ, ಯುವಕ ಸಂಘಗಳನ್ನು, ಸೇವಾ ಸಂಸ್ಥೆಗಳನ್ನು ಜತೆ ಗೂಡಿಸಿಕೊಂಡು ಇದೊಂದು ಸಮುದಾಯದ ಅಭಿಯಾನ ಎಂಬಂತೆ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಶಾಸ್ತ್ರಕ್ಕೆ ಎಂದಾದರೆ ಮೂಲ ಉದ್ದೇಶ ಈಡೇರುವುದಿಲ್ಲ. ಆಶಾ ಕಾರ್ಯಕರ್ತೆಯರು, ಗ್ರಾಮ ಮಟ್ಟದ ಕಾರ್ಯ ಪಡೆ ಸದಸ್ಯರನ್ನೂ ಈ ಕೆಲಸಕ್ಕೆ ನಿಯೋಜಿಸಲು ತೀರ್ಮಾನಿಸಿರುವುದರಿಂದ ಒಂದು ಹಂತದಲ್ಲಿ ಎಲ್ಲರಿಗೂ ಗ್ರಾಮದ ಪ್ರತಿ ಮನೆ ಕುಟುಂಬ ಸದಸ್ಯರ ಪರಿಚಯ ಇರುವುದರಿಂದ ತೀರಾ ಸಮಸ್ಯೆಯಾಗದು.

ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ವ್ಯಾಪಿಸಿ ಪ್ರತಿ ಕುಟುಂಬ ದಲ್ಲೂ ಪ್ರಕರಣಗಳು ಪತ್ತೆಯಾಗುತ್ತಿವೆ. ಅಲ್ಲಿ ಹೋ ಐಸೋಲೇಷನ್‌ಗೂ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ, ಪಂಚಾಯಿತಿ ಹಂತದಲ್ಲೇ ಕೊರೊನಾ ಕೇರ್‌ ಸೆಂಟರ್‌ ತೆರೆದರೆ ಸೋಂಕಿತರು ಅಥವಾ ಗುಣಲಕ್ಷಣ ಇರುವವರು ಅಲ್ಲಿಗೆ ಹೋಗಲು ಮನಸ್ಸು ಮಾಡಬಹುದು. ಇಲ್ಲದವಾದರೆ ಕೊರೊನಾ ಕೇರ್‌ ಸೆಂಟರ್‌ ಕಿ.ಮೀ. ಗಟ್ಟಲೆ ದೂರ ಇದ್ದರೆ ಯಾರೂ ಹೋಗುವುದಿಲ್ಲ. ಸರ್ಕಾರ ಈ ಬಗ್ಗೆಯೂ ಗಮನಹರಿಸಬೇಕು.

ಹಾಗೆಯೇ, ರಾಜ್ಯ ಸರ್ಕಾರ ವೈದ್ಯರ ನೇರ ನೇಮಕಾತಿಗೆ ಮುಂದಾಗಿರುವ ಕೆಲಸವೂ ಉತ್ತಮವೇ. ಇದರಿಂದ ಸದ್ಯ ರಾಜ್ಯದಲ್ಲಿ ತಲೆದೋರಿರುವ ವೈದ್ಯರ ಕೊರತೆ ನಿವಾರಣೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next